

ಉಡುಪಿ: ನಿಟ್ಟೂರು ಪ್ರೌಢಶಾಲಾ ಸುವರ್ಣ ಮಹೋತ್ಸವವನ್ನು ಈರೀತಿಯಲ್ಲೂ ಆಚರಿಸಬಹುದು ಎಂಬುದಕ್ಕೆ ಇಲ್ಲಿನ ಹಳೇ ವಿದ್ಯಾರ್ಥಿಗಳು, ಶಿಕ್ಷಕರು ಮಾದರಿಯಾಗಿದ್ದಾರೆ. ಕೃಷಿಯಿಂದ ಯುವಜನತೆ ವಿಮುಖರಾಗುತ್ತಿರುವ ಕಾಲಘಟ್ಟದಲ್ಲಿ ಶಾಲೆಯ 50ನೇ ವರ್ಷಕ್ಕೆ 50 ಎಕ್ರೆ ಹಡಿಲು ಬಿದ್ದ ಗದ್ದೆಯಲ್ಲಿ ಭತ್ತ ಕೃಷಿ ಮಾಡಿ ಭರ್ಜರಿ ಇಳುವರಿ ತೆಗೆಯಲಾಗಿದೆ. ಶುಕ್ರವಾರ ಶಾಲೆಯಲ್ಲಿ ಸಾವಯವ ಕಜೆ ಅಕ್ಕಿಯನ್ನು ನಿಟ್ಟೂರು ಸ್ವರ್ಣ ಬ್ರಾೃಂಡ್ ಮೂಲಕ ಲೋಕಾರ್ಪಣೆಗೊಳಿಸಲಾಯಿತು.
ಈ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದ ನಿವೃತ್ತ ಮುಖ್ಯಶಿಕ್ಷಕ ಮುರಲಿ ಕಡೆಕಾರ್, ಕೃಷಿ ಕಾರ್ಯಕ್ಕೆ ಹಳೇ ವಿದ್ಯಾರ್ಥಿಗಳು, ದಾನಿಗಳಿಂದ 13 ಲಕ್ಷ ರೂ. ಸಂಗ್ರಹಿಸಲಾಗಿತ್ತು. ಪುತ್ತೂರು, ಪೆರಂಪಳ್ಳಿ, ಕಕ್ಕುಂಜೆ, ನಿಟ್ಟೂರು ಮತ್ತು ಕರಂಬಳ್ಳಿ ಗ್ರಾಮಗಳಲ್ಲಿ 20-30 ವರ್ಷ ಹಡಿಲು ಬಿದ್ದ ಗದ್ದೆಗಳಲ್ಲಿ ಸಾವಯವ ಮಾದರಿಯಲ್ಲಿ ಭತ್ತ ಕೃಷಿ ಮಾಡಲಾಗಿದೆ. 32 ಟನ್ ಭತ್ತ ಬೆಳೆದಿದ್ದು, 25 ಟನ್ ಅಕ್ಕಿ ತೆಗೆಯಲಾಗಿದೆ. 5ರಿಂದ 6 ಎಕರೆ ಕಟಾವಿಗೆ ಬಾಕಿ ಇದೆ. ಕೆ.ಜಿ.ಗೆ 50 ರೂಪಾಯಿಯಂತೆ ಅಕ್ಕಿಯನ್ನು 5, 10 ಮತ್ತು 25 ಕೆ.ಜಿ. ಚೀಲಗಳಲ್ಲಿ ಯಕ್ಷಗಾನ ಕಲಾರಂಗ ಹಾಗೂ ಅರ್ಪಿತಾ ಟ್ರೇಡರ್ಸ್ ಮೂಲಕ ಅಕ್ಕಿ ಮಾರಾಟ ಮಾಡಲಾಗುತ್ತದೆ. ಇದರಲ್ಲಿ ಲಾಭದ ದೃಷ್ಟಿಕೋನವಿಲ್ಲ. ಖರ್ಚು ಕಳೆದು ಉಳಿದ ಮೊತ್ತವನ್ನು ಬೇಸಾಯಕ್ಕೆ ಗದ್ದೆಗಳನ್ನು ನೀಡಿದ ರೈತರಿಗೆ ನೀಡಲು ತೀರ್ಮಾನಿಸಲಾಗಿದೆ ಎಂದರು.
ಸಾವಯವ ಬೆಳೆ ಶ್ಲಾಘನೀಯ: ಶಾಸಕ ರಘುಪತಿ ಭಟ್ ಮೆಚ್ಚುಗೆ
‘ನಿಟ್ಟೂರು ಸ್ವರ್ಣ’ ಲೋಕಾರ್ಪಣೆ ಕಾರ್ಯಕ್ರಮ ನಿಟ್ಟೂರು ಪ್ರೌಢಶಾಲೆಯ ರಜತ ಸಭಾಭವನದಲ್ಲಿ ಶುಕ್ರವಾರ ನಡೆಯಿತು.
ಬೆಂಗಳೂರು ಸರ್ಕಾರಿ ಭರವಸೆಗಳ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಶಾಸಕ ಕೆ.ರಘುಪತಿ ಭಟ್, ಆಡಿಯೋ ಸಂದೇಶ ಮೂಲಕ ಯಾವುದೇ ಕೆಮಿಕಲ್ ಉತ್ಪನ್ನ ಬಳಸದೆ ಹಡೀಲು ಬಿದ್ದ ಗದ್ದೆಯಲ್ಲಿ ಕೃಷಿ ಮಾಡಿರುವುದು ಶ್ಲಾಘನೀಯ ಎಂದರು.
ಮುಂದಿನ ವರ್ಷ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಎಲ್ಲ ಹಡಿಲು ಗದ್ದೆಗಳಲ್ಲಿ ಸಂಘ-ಸಂಸ್ಥೆ ಸಹಕಾರದಲ್ಲಿ ನಾಟಿ ಕಾರ್ಯ ನಡೆಸಲು ಯೋಜನೆ ರೂಪಿಸಲಾಗುವುದು ಎಂದರು. ನಗರಸಭೆಯ ಅಧ್ಯಕ್ಷೆ ಸುಮಿತ್ರಾ ನಾಯಕ್ ಉದ್ಘಾಟಿಸಿದರು. ಯಕ್ಷಗಾನ ಕಲಾರಂಗ ಅಧ್ಯಕ್ಷ ಗಂಗಾಧರ ರಾವ್, ಮುಖ್ಯ ಶಿಕ್ಷಕಿ ಅನುಸೂಯಾ, ಹಳೆ ವಿದ್ಯಾರ್ಥಿ ಸಂಘದ ಯೋಗೀಶ್ವರಚಂದ್ರಧರ್ ಉಪಸ್ಥಿತರಿದ್ದರು. ದಿನೇಶ್ ಹಾಗೂ ಭಾಸ್ಕರ ಡಿ.ಸುವರ್ಣ ಅನುಭವ ಹಂಚಿಕೊಂಡರು.
ಯುಡಿಪಿ-13ನವ11-ನಿಟ್ಟೂರು
ನಿಟ್ಟೂರು ಪ್ರೌಢಶಾಲೆಯಲ್ಲಿ ನಗರಸಭೆಯ ಅಧ್ಯಕ್ಷೆ ಸುಮಿತ್ರಾ ನಾಯಕ್ ‘ನಿಟ್ಟೂರು ಸ್ವರ್ಣ’ ಬ್ರಾೃಂಡ್‌ನ ಅಕ್ಕಿಯನ್ನು ಲೋಕಾರ್ಪಣೆಗೊಳಿಸಿದರು.