ನಿಟ್ಟೂರು ಮಹಿಳಾ ನಿಲಯದಲ್ಲಿ ವಿವಾಹ ಸಂಭ್ರಮ

IMG-20240823-WA0011
Published on

ಉಡುಪಿ: ನಿಟ್ಟೂರು ಸರ್ಕಾರಿ ರಾಜ್ಯ ಮಹಿಳಾ ನಿಲಯದಲ್ಲಿ ಸತತ 3ನೇ ವರ್ಷವೂ ಮದುವೆ ಸಂಭ್ರಮ.  ಶುಕ್ರವಾರ ಸಂಸ್ಥೆಯ ನಿವಾಸಿ ರಾಜಸ್ಥಾನ ಮೂಲದ ಯುವತಿ ತೀರ್ಥಹಳ್ಳಿಯ ಅಂಬುತೀರ್ಥದ ಯುವಕನ ಕೈಹಿಡಿದಿದ್ದಾಳೆ. ಸ್ವತ@ ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಮದುಮಗಳನ್ನು ಧಾರೆ ಎರೆದುಕೊಟ್ಟಿದ್ದು, ಎಎಸ್ಪಿ ಎಸ್.ಟಿ. ಸಿದ್ದಲಿಂಗಪ್ಪ ಅಣ್ಣ ಸ್ಥಾನದಲ್ಲಿ ನಿಂತು ಲಾಜ ಹೋಮದಲ್ಲಿ ಭಾಗಿಯಾದರು. ಉಡುಪಿ ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳೇ ಮುಂದೆ ನಿಂತು ಶಾಸೊಕ್ತವಾಗಿ ವಿವಾಹ ನಡೆಸಿಕೊಟ್ಟಿದ್ದಾರೆ.


ಖುಷ್ಬು ಸುಮೇರಾ (21) ವಿವಾಹವು ತೀರ್ಥಹಳ್ಳಿಯ ದಿನೇಶ ಎ.ಪಿ ಅಂಬುತೀರ್ಥ ಇವರ ಪುತ್ರ  ಮಧುರಾಜ್ ಎ.ಡಿ. (29) ಅವರೊಂದಿಗೆ ನಡೆಯಿತು. 15 ವರ್ಷದ ಹಿಂದೆ  ಕಾರವಾರದಲ್ಲಿ ರಾಜಸ್ಥಾನ ಮೂಲದ ಖುಷ್ಬು ಅನಾಥ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. 6 ವರ್ಷ ಪ್ರಾಯದ ಮಗುವನ್ನು ನಿಟ್ಟೂರು ಬಾಲಕಿಯ ಬಾಲ ಮಂದಿರದಲ್ಲಿ ಪೋಷಿಸಲಾಗಿತ್ತು. ಸತತ ಪ್ರಯತ್ನದ ಬಳಿಕವೂ ಪೋಷಕರು ಪತ್ತೆಯಾಗದ ಕಾರಣ ಬಾಲಕಿಗೆ 18 ವರ್ಷ ತುಂಬಿದ ಬಳಿಕ ಮಹಿಳಾ ನಿಲಯಕ್ಕೆ ಸೇರ್ಪಡೆಗೊಳಿಸಲಾಗಿತ್ತು. ಪಿಯುಸಿವರೆಗೆ ಶಿಕ್ಷಣ ಪಡೆದಿರುವ ಖುಷ್ಬು ಮಹಿಳಾ ರಕ್ಷಣಾ ಟಕದಲ್ಲಿ ಕೆಲಸ ಮಾಡುತ್ತಿದ್ದರು. ವರ ಮಧುರಾಜ್ ಪದವಿ ಶಿಕ್ಷಣ ಪಡೆದಿದ್ದು, ಕೃಷಿ ಹಾಗೂ ಕ್ಯಾಟರಿಂಗ್ ಉದ್ಯಮ ನಡೆಸುತ್ತಿದ್ದಾರೆ. ಯುವಕ ಮತ್ತು ಯುವತಿಗೆ ಒಪ್ಪಿಕೊಂಡ ಬಳಿಕ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ವಿವಾಹ ಪ್ರಕ್ರಿಯೆ ನಡೆಸಲಾಗಿದೆ.  ಸರ್ಕಾರದಿಂದ ಹುಡುಗಿ ಹೆಸರಿನಲ್ಲಿ ಖಾತೆ ತೆರೆದು 15 ಸಾವಿರ ರೂ. ನಿಖರ ಠೇವಣಿ ಇಡಲಾಗಿದ್ದು, 3 ವರ್ಷದ ಬಳಿಕ ಈ ಹಣವನ್ನು ಬಳಸಿಕೊಳ್ಳಬಹುದು.

ಮಹಿಳಾ ನಿಲಯದ ಅಧೀಕ್ಷಕಿ ಪುಷ್ಟಾರಾಣಿ, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪುರುಷೋತ್ತಮ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೆಶಕಿ ಶಾಮಲಾ, ಶಿಶು ಅಭಿವೃದ್ಧಿ ಅಧಿಕಾರಿ ವೀಣಾ ವಿವೇಕಾನಂದ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net