ಡಾ.ಎಂ.ಎಸ್.ಮೂಡಿತ್ತಾಯ ನಿಟ್ಟೆ ಪರಿಗಣಿತ ವಿ.ವಿ.ನೂತನ ಕುಲಪತಿ

NITTE
ಡಾ.ಎಂ.ಎಸ್.ಮೂಡಿತ್ತಾಯ
Published on

ಮಂಗಳೂರು: ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಡಾ.ಎಂ.ಎಸ್.ಮೂಡಿತ್ತಾಯ ಗುರುವಾರ ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದೆ ನಿಟ್ಟೆ ವಿಶ್ವವಿದ್ಯಾಲಯದ ಸಹ ಕುಲಪತಿ, ಕುಲಸಚಿವ ಮತ್ತು ಗ್ಲೋಬಲ್ ಇನಿಶಿಯೇಟಿವ್ಸ್‌ನ ನಿರ್ದೇಶಕರಾಗಿ ಅವರು ಕಾರ್ಯ ನಿರ್ವಹಿಸಿದ್ದರು.

ನಿಟ್ಟೆಯ ಜಸ್ಟಿಸ್ ಕೆ.ಎಸ್.ಹೆಗ್ಡೆ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ನಿರ್ದೇಶಕರಾಗಿ, ಡಾ.ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ, ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಾಧ್ಯಾಪಕರಾಗಿ, ಉಡುಪಿಯ ಎಂಜಿಎಂ ಕಾಲೇಜು, ಮೈಸೂರು ವಿಶ್ವವಿದ್ಯಾಲಯ, ದಾವರಣಗೆರೆಯ ಉನ್ನತ ಶಿಕ್ಷಣ ಕೇಂದ್ರದಲ್ಲಿಯೂ ಸೇವೆ ಸಲ್ಲಿಸಿದ್ದರು.

ಡಾ.ಎಂ.ಎಸ್.ಮೂಡಿತ್ತಾಯ ತಮ್ಮ ಪದವಿ ಶಿಕ್ಷಣವನ್ನು ವಾಣಿಜ್ಯ ವಿಷಯದಲ್ಲಿ ಮತ್ತು ವೆಚ್ಚ ನಿರ್ವಹಣಾ ಶಾಸ್ತ್ರ ವಿಷಯದಲ್ಲಿ ಉನ್ನತ ಶಿಕ್ಷಣವನ್ನು ಮೈಸೂರು ವಿಶ್ವವಿದ್ಯಾಲಯದಲ್ಲಿ ಪಡೆದಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದು, ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ತಮ್ಮ ಪೋಸ್ಟ್ ಡಾಕ್ಟೊರಲ್ ಸಂಶೋಧನೆ ಪೂರ್ಣಗೊಳಿಸಿದ್ದರು.

ತಮ್ಮ 4 ದಶಕಗಳ ಶೈಕ್ಷಣಿಕ ವೃತ್ತಿಯಲ್ಲಿ ಹಲವಾರು ನಿಯತಕಾಲಿಕಗಳಲ್ಲಿ ಲೇಖನಗಳನ್ನು ಪ್ರಕಟಿಸಿದ್ದು, 10 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅಮೆರಿಕದ ಪೆನ್ಸಿಲ್ವೇನಿಯಾ ವಿ.ವಿ., ನೆದರ್ಲೆಂಡ್‌ನ ಎರಾಸ್ಮಸ್ ವಿ.ವಿ., ಉಗಾಂಡಾದ ಮಕರೆರೆ ವಿ.ವಿ., ಫಿಲಿಪೈನ್ಸ್ ರಾಷ್ಟ್ರೀಯ ವಿಶ್ವವಿದ್ಯಾಲಯ, ನ್ಯೂ ಇಂಗ್ಲೆಂಡ್ ವಿಶ್ವವಿದ್ಯಾಲಯ ಸಹಿತ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net