

ಸುರತ್ಕಲ್: ಎನ್‌ಐಟಿಕೆಯಲ್ಲಿ ಬಾಹ್ಯಾಕಾಶ ಸಂಶೋಧನೆ ಅಧ್ಯಯನದಲ್ಲಿ ಪಿಜಿ ವಿಭಾಗ ಆರಂಭಕ್ಕೆ ಇಸ್ರೋ ಉತ್ತೇಜನ ನೀಡಲಿದೆ. ವಿದ್ಯಾರ್ಥಿಗಳಿಗೆ, ಉದ್ಯಮಿಗಳಿಗೆ ಬಾಹ್ಯಾಕಾಶ ಸಂಶೋಧನೆಗೆ ಪ್ರೋತ್ಸಾಹ ನೀಡುವುದು ಉದ್ದೇಶ ಎಂದು ಇಸ್ರೋ ನಿರ್ದೇಶಕ ಡಾ. ಪಿ.ವಿ.ವೆಂಕಟಕೃಷ್ಣನ್ ಹೇಳಿದರು.
ಇಸ್ರೋ ಸಹಭಾಗಿತ್ವದಲ್ಲಿ ಎನ್‌ಐಟಿಕೆಯಲ್ಲಿ ಪ್ರಾದೇಶಿಕ ಬಾಹ್ಯಾಕಾಶ ಶೈಕ್ಷಣಿಕ ಕೇಂದ್ರ(ಆರ್‌ಎಸಿಎಸ್) ಆರಂಭ ಹಾಗೂ ಎನ್‌ಐಟಿಕೆ ನಿರ್ದೇಶಕ ಪ್ರೊ.ಕೆ.ಉಮಾಮಹೇಶ್ವರ ರಾವ್ ಜತೆ ಒಪ್ಪಂದಕ್ಕೆ ಶುಕ್ರವಾರ ಸಹಿ ಹಾಕಿದ ಬಳಿಕ ಮಾತನಾಡಿದರು.
ಇದು ದಕ್ಷಿಣ ಭಾರತದ ಮೊದಲ ಹಾಗೂ ದೇಶದ 4ನೇ ಕೇಂದ್ರವಾಗಿದೆ. ಕರ್ನಾಟಕ, ಆಂಧ್ರ, ತೆಲಂಗಾಣ, ಕೇರಳ, ತಮಿಳುನಾಡು, ಪುದುಚೇರಿ, ಲಕ್ಷದ್ವೀಪ ವ್ಯಾಪ್ತಿ ಹೊಂದಿದ್ದು, ಬಾಹ್ಯಾಕಾಶ ಸಂಶೋಧನೆಗೆ ಹೆಚ್ಚಿನ ಒತ್ತು ದೊರೆಯಲಿದೆ. ಇದಕ್ಕಾಗಿ 2 ಕೋಟಿ ರೂ.ಗಳನ್ನು ಇಸ್ರೋ ನೀಡಲಿದೆ. ಮೂರು ವರ್ಷಗಳ ಯೋಜನೆ ಅವಧಿಯಲ್ಲಿ ಪಿಎಚ್‌ಡಿ ಅಧ್ಯಯನಕ್ಕೆ ಅವಕಾಶ ದೊರೆಯಲಿದೆ ಎಂದರು.
ಎನ್‌ಐಟಿಕೆಗೆ ಶ್ಲಾಘನೆ: ದೇಶದ ಎನ್‌ಐಟಿಗಳಲ್ಲಿ ಎನ್‌ಐಟಿಕೆಗೆ ವಿಶಿಷ್ಟ ಸ್ಥಾನವಿದೆ. ಸಂಶೋಧನೆ ಕೈಗೊಳ್ಳಲು ಎನ್‌ಐಟಿಕೆಗೆ ಮುಕ್ತ ಅವಕಾಶ ನೀಡಲಾಗುವುದು. ಈ ನಿಟ್ಟಿನ ಜಂಟಿ ಯೋಜನೆ ಮತ್ತು ಮ್ಯಾನೇಜ್‌ಮೆಂಟ್ ಕಮಿಟಿ(ಜೆಪಿಎಂಸಿ)ಗೆ ಎನ್‌ಐಟಿಕೆ ನಿರ್ದೇಶಕರೇ ಅಧ್ಯಕ್ಷರಾಗಿರುತ್ತಾರೆ. ಯೋಜನೆ ಪರಾಮರ್ಶೆಯನ್ನು ಸಮಿತಿ ನಿಗದಿತವಾಗಿ ನಡೆಸಲಿದೆ. ಬಾಹ್ಯಾಕಾಶ ಸಂಶೋಧನೆಯಲ್ಲಿ ಉದ್ಯೋಗಾವಕಾಶ ಹೆಚ್ಚಿವೆ. ಸಂಶೋಧನೆಗೆ ಎಲ್ಲರಿಗೂ ಮುಕ್ತ ಅವಕಾಶವಿದ್ದು, ಈ ಮೂಲಕ ಕೃಷಿ ಕ್ಷೇತ್ರದ ಉತ್ಪನ್ನ ಹೆಚ್ಚಳ, ಕೈಗಾರಿಕಾ ಉತ್ಪನ್ನಗಳ ಗುಣಮಟ್ಟವನ್ನು ಶೇ.30ರಿಂದ 40ರವರೆಗೆ ಹೆಚ್ಚಿಸಲು ಅವಕಾಶವಿದೆ ಎಂದು ತಿಳಿಸಿದರು.
ಇಸ್ರೋ ಅಧಿಕಾರಿಗಳಾದ ಶ್ರೀಪತಿ, ಚೌಹಾಣ್, ವಿಶ್ವನಾಥ್, ಡಾ ಎಂ.ಎ.ಪೌಲ್, ಎನ್‌ಐಟಿಕೆ ಉಪನಿರ್ದೇಶಕ ಪ್ರೊ.ಅನಂತನಾರಾಯಣ, ರಿಜಿಸ್ಟ್ರಾರ್ ಡಾ.ರವೀಂದ್ರನಾಥ್ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ದಕ್ಷಿಣ ಭಾರತದಲ್ಲಿಯೇ ಪ್ರಮುಖ ಕೇಂದ್ರವನ್ನು ಎನ್‌ಐಟಿಕೆಯಲ್ಲಿ ಆರಂಭಿಸಲು ಅವಕಾಶ ದೊರೆತಿರುವುದು ಹೆಮ್ಮೆಯ ವಿಷಯ. ಯೋಜನೆಗೆ ಆರಂಭಿಕವಾಗಿ 2 ಕೋಟಿ ರೂ. ನೀಡಿರುವುದನ್ನು ಮುಂದಕ್ಕೆ ಹೆಚ್ಚಿಸಿಕೊಳ್ಳಲು ಅವಕಾಶವಿದೆ.- ಪ್ರೊ.ಉಮಾಮಹೇಶ್ವರ ರಾವ್, ಎನ್‌ಐಟಿಕೆ ನಿರ್ದೇಶಕ