ಸ್ವಾಮಿ ನಿತ್ಯಾನಂದನ ಪ್ರಕರಣ ವರ್ಗಾವಣೆ ಅರ್ಜಿ ವಜಾ

Nithyananda Nove-23
Published on

ಬೆಂಗಳೂರು: ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿ ವಿರುದ್ಧದ ಅತ್ಯಾಚಾರ ಹಾಗೂ ಧಾರ್ವಿುಕ ಭಾವನೆಗಳಿಗೆ ಧಕ್ಕೆ ತಂದ ಆರೋಪಕ್ಕೆ ಸಂಬಂಧಿಸಿದಂತೆ ರಾಮನಗರ ಸೆಷನ್ಸ್ ಕೋರ್ಟ್​ನಲ್ಲಿ ನಡೆಯುತ್ತಿರುವ ವಿಚಾರಣೆಯನ್ನು ಬೇರೊಂದು ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ದೂರುದಾರ ಕೆ. ಲೆನಿನ್ ಕುರುಪ್ಪನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಬಿ.ಎ. ಪಾಟೀಲ್ ಅವರಿದ್ದ ಪೀಠ ಸೋಮವಾರ ಪ್ರಕಟಿಸಿತು.

ದೂರುದಾರ ಮನವಿಯಂತೆ ಪ್ರಕರಣದ ವಿಚಾರಣೆಯನ್ನು ಮತ್ತೊಂದು ನ್ಯಾಯಾಲಯಕ್ಕೆ ವರ್ಗಾವಣೆ ಮಾಡುವುದಕ್ಕೆ ಸಕಾರಣಗಳಿಲ್ಲ. ಶೀಘ್ರ ವಿಚಾರಣೆ ನಡೆಸಿಲ್ಲ ಎಂಬ ಮಾತ್ರಕ್ಕೆ ಅದನ್ನು ಅಕ್ರಮ ಎಂದು ಪರಿಗಣಿಸಲಾಗದು. ಈಗಾಗಲೇ 1 ದಶಕ ಕಳೆದಿದೆ. ಕ್ಷುಲ್ಲಕ ಕಾರಣಗಳನ್ನು ಮುಂದಿಟ್ಟುಕೊಂಡು ಮತ್ತೊಂದು ನ್ಯಾಯಾಲಯಕ್ಕೆ ಪ್ರಕರಣ ವರ್ಗಾವಣೆ ಮಾಡುವುದರಿಂದ ವಿಚಾರಣೆ ಮತ್ತಷ್ಟು ವಿಂಳಬವಾಗುತ್ತದೆ. ದೂರುದಾರ ಹಾಗೂ ಆರೋಪಿ ಪರಸ್ಪರ ಕಿರುಕುಳ ನೀಡುವ ಉದ್ದೇಶದಿಂದಲೇ ಕೆಲವೊಂದು ಕ್ರಮ ಕೈಗೊಂಡಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಅರ್ಜಿ ವಜಾಗೊಳಿಸಿರುವ ಹೈಕೋರ್ಟ್, ತ್ವರಿತ ವಿಚಾರಣೆ ನಡೆಸುವಂತೆ ರಾಮನಗರ 3ನೇ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.

ಕೋರ್ಟ್ ಹೇಳಿದ್ದೇನು?: ಪ್ರಕರಣದ ವಿಚಾರಣೆ ವಿಳಂಬವಾಗುವುದು ಸಮಾಜಕ್ಕೆ ಮಾರಕ. ಸಮಾಜಕ್ಕೆ ನ್ಯಾಯ ಒದಗಿಸುವುದು ಹಾಗೂ ಕಾನೂನು ಜಾರಿಗೊಳಿಸುವುದು ನ್ಯಾಯಾಲಯದ ಕರ್ತವ್ಯವಾಗಿದೆ. ಪ್ರಾಸಿಕ್ಯೂಷನ್ ಹಾಗೂ ಆರೋಪಿಯ ಕಾರಣಗಳಿಂದಾಗಿ ಹಲವು ಬಾರಿ ವಿಚಾರಣೆ ಮುಂದೂಡಲಾಗಿದೆ. ಈಗಾಗಲೇ ವಿಚಾರಣೆ ದಶಕ ಕಾಲ ವಿಳಂಬವಾಗಿದ್ದು, ಯಾವುದೇ ಪ್ರಗತಿ ಕಂಡಿಲ್ಲ. ವಿಚಾರಣೆಗೆ ಹಾಜರಾಗುವುದರಿಂದ ಆರೋಪಿಗೆ ವಿನಾಯಿತಿ ನೀಡಲು ಕಾನೂನಿನಲ್ಲಿ ಅವಕಾಶವಿದೆ. ವಿಚಾರಣೆ ಮುಂದೂಡುವುದು ಸರಿಯಾದ ಕ್ರಮವಲ್ಲ ಎಂದು ಹೈಕೋರ್ಟ್ ಹೇಳಿದೆ.

ಲೆನಿನ್ ಸಹ ಅನಾರೋಗ್ಯಕಾರಣ ನೀಡಿ ವಿಚಾರಣೆ ಮುಂದೂಡಲು ಹಲವು ಬಾರಿ ಕೋರಿದ್ದಾರೆ. ಕೋರ್ಟ್​ಗೆ ಹಾಜರಾದರೂ ಕಟಕಟೆಗೆ ಬಂದು ಸಾಕ್ಷ್ಯ ನುಡಿದಿಲ್ಲ. ನಿಜಕ್ಕೂ ನ್ಯಾಯ ಬಯಸಿದ್ದರೆ, ಸಾಕ್ಷ್ಯ ನುಡಿಯಬೇಕಿತ್ತು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net