ನಿಮಿಷಾಂಬ ದೇವಿ ವರ್ಧಂತಿ ಮಹೋತ್ಸವ

SRP_19-01jpj
ಶ್ರೀ ನಿಮಿಷಾಂಬ ದೇವಿಯ ವರ್ಧಂತಿ ಮಹೋತ್ಸವ ಪ್ರಯುಕ್ತ ಶನಿವಾರ ಗಂಜಾಂನ ಪ್ರಮುಖ ಬೀದಿಗಳಲ್ಲಿ ದೇವಿಯ ಉತ್ಸವ ಮೆರವಣಿಗೆಯಲ್ಲಿ ಸಾಗಿತು.
Published on

ಶ್ರೀರಂಗಪಟ್ಟಣ: ಸಮೀಪದ ಗಂಜಾಂನಲ್ಲಿ ಶಕ್ತಿದೇವತೆ ಶ್ರೀ ನಿಮಿಷಾಂಬ ದೇವಿಯ ವರ್ಧಂತಿ ಮಹೋತ್ಸವ ಶನಿವಾರ ವಿಜೃಂಭಣೆಯಿಂದ ನಡೆಯಿತು.

ಪೂರ್ವ ದಿನವಾದ ಶುಕ್ರವಾರ ದೇವಾಲಯದಲ್ಲಿ ಅಮ್ಮನವರಿಗೆ ವೈದಿಕರು ಗಣಪತಿಪೂಜೆ, ಪುಣ್ಯಾಹಃ, ಮಹಾಸಂಕಲ್ಪ, ಕಲಶ ಸ್ಥಾಪನೆ, ಸಪ್ತಶತಿ ಪಾರಾಯಣ, ಕಲಶಪೂಜೆ, ಮಹಾಮಂಗಳಾರತಿ ನೆರವೇರಿಸಿದ್ದರು. ವರ್ಧಂತಿ ದಿನದಂದು ದೇಗುಲದ ಪ್ರಧಾನ ಅರ್ಚಕ ಸೂರ್ಯನಾರಾಯಣ ಭಟ್ ಹಾಗೂ ಮಹಾಬಲೇಶ್ವರ ಭಟ್ ಅವರ ನೇತೃತ್ವದಲ್ಲಿ ಮುಂಜಾನೆಯಿಂದಲೂ ವಿವಿಧ ಅಭಿಷೇಕಗಳೊಂದಿಗೆ ನಿಮಿಷಾಂಬ ಹೋಮ, ಪೂರ್ಣಾಹುತಿ, 121 ಕಲಶಗಳ ಮಹಾಭಿಷೇಕ ಅರ್ಪಿಸಿ ಅಷ್ಟದಿಗ್ಬಲಿಯೊಂದಿಗೆ ಮಹಾಮಂಗಳಾರತಿ ನೆರವೇರಿಸಲಾಯಿತು. ಬಳಿಕ ಶ್ರೀ ಶಕ್ತಿದೇವಿ, ಮೌಕ್ತಿಕೇಶ್ವರ, ಮಹಾಗಣಪತಿ, ಹನುಮ ಸೇರಿದಂತೆ ಸೂರ್ಯ ನಾರಾಯಣ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸುವ ಜತೆಗೆ ವಿಶೇಷ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ದೇಗುಲದ ತಟದಲ್ಲಿನ ದಕ್ಷಿಣ ಗಂಗೆ, ಜೀವನದಿ ಕಾವೇರಿ ಮಾತೆಗೆ ಗೋಧೂಳಿ ಲಗ್ನದಲ್ಲಿ ಮಹಾಆರತಿ ಸಲ್ಲಿಸಲಾಯಿತು. ಪ್ರಾಕಾರೋತ್ಸವ ಮಹಾಪೂಜೆಯೊಂದಿಗೆ ವಿಶೇಷ ಹೂವುಗಳು ಹಾಗೂ ವರ್ಣರಂಜಿತ ವಿದ್ಯುತ್ ದೀಗಳಿಂದ ಸರ್ವಾಲಾಂಕೃಗೊಂಡಿದ್ದ ಬೆಳ್ಳಿಯ ಅಶ್ವರಥದಲ್ಲಿ ಗಂಜಾಂ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವಿಯ ಉತ್ಸವವನ್ನು ಕೊಂಡೊಯ್ಯಲಾಯಿತು. ಈ ವೇಳೆ ಚಂಡೆ ಮತ್ತು ಮಂಗಳವಾದ್ಯಗಳು ಮೆರವಣಿಗೆಗೆ ಮೆರುಗು ನೀಡಿದವು. ಗಂಜಾಂ ಗ್ರಾಮಸ್ಥರು ಉತ್ಸವದಲ್ಲಿ ಶಕ್ತಿದೇವಿಗೆ ಹಣ್ಣು-ಕಾಯಿ ತೋರಿ ಆರತಿ ಬೆಳಗಿ ವಿಶೇಷ ಪೂಜೆ ನೆರವೇರಿಸಿ ಸಿಹಿ ಹಂಚಿದರು.

ಪೂಜಾ ಕಾರ್ಯಗಳಲ್ಲಿ ಕ್ಷೇತ್ರದ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ, ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ, ಕಾರ್ಯನಿರ್ವಾಹಕ ಅಧಿಕಾರಿ ಸಿ.ಜಿ.ಕೃಷ್ಣ ಸೇರಿದಂತೆ ಪುರಪಿತೃಗಳು ಹಾಗೂ ಸ್ಥಳೀಯರು ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net