

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಹೊಸ ಮಾರಿಗುಡಿಯ ಮಾರಿಯಮ್ಮ ದೇವಿಯು ಸ್ವರ್ಣ ಗದ್ದುಗೆಯಲ್ಲಿ ವಿರಾಜಮಾನಳಾಗುವ ಸಂದರ್ಭದಲ್ಲೇ ಮೂರನೇ ಮಾರಿಗುಡಿಯ ಮಾರಿಯಮ್ಮ ದೇವಿಗೆ ರಜತ ಗದ್ದುಗೆ ನಿರ್ಮಾಣಕ್ಕೆ ಸಂಕಲ್ಪ ಸ್ವೀಕರಿಸಿರುವುದು ತಾಯಿಯ ಇಚ್ಛೆಯೇ ಆಗಿದೆ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಕಾಪು ಶ್ರೀ ಮೂರನೇ ಮಾರಿಯಮ್ಮ ದೇವಸ್ಥಾನದಲ್ಲಿ ರಜತ ಗದ್ದುಗೆ ನಿರ್ಮಾಣ ಸಹಿತ ವಿವಿಧ ಅಭಿವೃದ್ಧಿ ಕಾಮಗಾರಿಗಳ ಸಮರ್ಪಿಸಲು ದೇವಸ್ಥಾನದ ವಠಾರದಲ್ಲಿ ಮಂಗಳವಾರ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ದೇಗುಲ ಪ್ರಧಾನ ತಂತ್ರಿ ಕೆ.ಪಿ.ಶ್ರೀನಿವಾಸ ತಂತ್ರಿ ಮಡುಂಬು ಮಾತನಾಡಿದರು. ಶ್ರೀ ಮೂರನೇ ಮಾರಿಯಮ್ಮ ದೇಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಶಶಿಧರ್ ಶೆಟ್ಟಿ ಎರ್ಮಾಳು ಅಧ್ಯಕ್ಷತೆ ವಹಿಸಿದ್ದರು. 90 ಕೆಜಿ ತೂಕದ ಬೆಳ್ಳಿ ಗದ್ದುಗೆ ನಿರ್ಮಾಣ ಸಹಿತ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಸುವುದಕ್ಕಾಗಿ ಗ್ರಾಮ ಸಮಿತಿ ರಚಿಸಲಾಯಿತು. ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಅನಿಲ್ ಬಲ್ಲಾಳ್ ಕಾಪು ಬೀಡು, ಮಾಜಿ ಆಡಳಿತ ಮೊಕ್ತೇಸರ ಮೋಹನ್ ಬಂಗೇರ ಕಾಪು, ಕಾಪು ಪುರಸಭೆ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ, ಮಾರಿಯಮ್ಮ ದೇವಿ ದರ್ಶನ ಪಾತ್ರಿ ಗಿರೀಶ್ ಪಾತ್ರಿ, ಪ್ರಬಂಧಕ ದಿವಾಕರ್ ಕಾಪು ಉಪಸ್ಥಿತರಿದ್ದರು. ನಿರ್ಮಲ್ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀಕರ ಶೆಟ್ಟಿ ಕಲ್ಯಾ ವಂದಿಸಿದರು.
ಮೂರನೇ ಮಾರಿಯಮ್ಮ ದೇವಸ್ಥಾನ ಪ್ರತಿಷ್ಠಾಪನೆಗೊಂಡು ನೂರು ವರ್ಷ ಪೂರ್ಣಗೊಂಡಿದೆ. ಇದರ ಸ್ಮರಣೆಗಾಗಿ ಮತ್ತು ದೇವಿ ಇಚ್ಚೆಯಂತೆ, ಭಕ್ತರ ಸಹಭಾಗಿತ್ವದಲ್ಲಿ ಸುಮಾರು 90 ಕೆಜಿ ತೂಕದ ರಜತ ಗದ್ದುಗೆ ಸಮರ್ಪಣೆಗೆ ಸಂಕಲ್ಪ ಸ್ವೀಕರಿಸಲಾಗಿದ್ದು, ಎಲ್ಲರ ಸಹಕಾರದ ಅಗತ್ಯತೆಯಿದೆ.
ಕೆ.ಪಿ.ಶ್ರೀನಿವಾಸ ತಂತ್ರಿ ಮಡುಂಬು, ಕಾಪು ಶ್ರೀ ಮೂರನೇ ಮಾರಿಯಮ್ಮ ದೇವಸ್ಥಾನ ಪ್ರಧಾನ ತಂತ್ರಿ