ಶಿವಗಂಗೆ ಬೆಟ್ಟವೇರಿದ ನಿರ್ಮಲಾನಂದನಾಥ ಶ್ರೀ

2
ಶಿವಗಂಗೆ ಬೆಟ್ಟವೇರಿದ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಭಕ್ತರೊಂದಿಗೆ ಭಜನೆ ಮಾಡಿದರು. ಮಂಗಳನಾಥ ಸ್ವಾಮೀಜಿ, ಮಾದಾರ ಚನ್ನಯ್ಯ ಸ್ವಾಮೀಜಿ, ರಮಣಾನಂದ ಸ್ವಾಮೀಜಿ ಇದ್ದರು.
Published on

ಹಲವು ಮಠಗಳ ಮಠಾಧೀಶರು ಸಾಥ್- ಬೆಟ್ಟದ ಮೇಲೆ ವಿದ್ಯಾರ್ಥಿಗಳು , ಭಕ್ತರೊಂದಿಗೆ ಭಜನೆ

ದಾಬಸ್‌ಪೇಟೆ: ಆದಿಚುಂಚನಗಿರಿಯ ಪೀಠಾಧ್ಯಕ್ಷ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಡಾ. ಶ್ರೀ ಮಲಯ ಶಾಂತಮುನಿ ಶಿವಾಚಾರ್ಯ ದೇಶಿಕೇಂದ್ರ ಸ್ವಾಮೀಜಿ ಬುಧವಾರ ಶಿವಗಂಗೆ ಬೆಟ್ಟವೇರಿ ಪ್ರಕೃತಿ ಸೌಂದರ್ಯ ಸವಿದು, ಬೆಟ್ಟದ ತುದಿಯ ಮೇಲೆ ಭಕ್ತರೊಂದಿಗೆ ಭಜನೆ ಮಾಡಿದರು.

ಶ್ರೀ ಆದಿಚುಂಚನಗಿರಿ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ದಿವ್ಯದರ್ಶನ ಯಾತ್ರೆ ಹಾಗೂ ಗಿರಿನಡಿಗೆ ಕಾರ್ಯಕ್ರಮದಲ್ಲಿ ಉಭಯ ಶ್ರೀಗಳು ಶಿವಗಂಗೆಯ ಹಿಪ್ಪೆವನದಿಂದ ಬೆಳಗ್ಗೆ 7ಕ್ಕೆ ನಡಿಗೆ ಆರಂಭಿಸಿದರು. ಬೆಟ್ಟದ ಹೆಬ್ಬಾಗಿಲಿನಿಂದ ಸುಮಾರು 4 ಸಾವಿರ ಅಡಿಗಳ ಎತ್ತರದ ಬೆಟ್ಟದ ತುತ್ತತುದಿಯವರೆಗೆ ಸ್ವಾಮೀಜಿಗಳ ಜತೆ ಹಲವಾರು ಮಠಾಧೀಶರು, ಬಿಜಿಎಸ್ ಸಮೂಹ ಶಿಕ್ಷಣ ಸಂಸ್ಥೆಯ 1.500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ನೆಲಮಂಗಲ ತಾಲೂಕಿನ ಸಮುದಾಯದ ಮುಖಂಡರು, ಭಕ್ತರು ಹೆಜ್ಜೆ ಹಾಕಿದರು. ಬೆಟ್ಟವೇರಿದ ಬಳಿಕ ತೀರ್ಥ ಕಂಬದ ಬಳಿ ಭಜನೆ ಕೈಗೊಂಡರು. ಸ್ವತಃ ಸ್ವಾಮೀಜಿ ಅವರು ಹಾರ್ಮೋನಿಯಂ ಬಾರಿಸಿ, ಭಕ್ತಿ ಗೀತೆ ಹಾಡಿದರು.

ಒಳಕಲ್ಲು ತೀರ್ಥ, ನಾಟ್ಯರಾಣಿ ಶಾಂತಲಾ ಐಕ್ಯವಾದ ಸ್ಥಳ, ಶ್ರೀ ಹೊನ್ನಾದೇವಿ ಸಮೇತ ಗಂಗಾಧರೇಶ್ವರ ಸ್ವಾಮಿ ದೇವಾಲಯ, ನಾಡಪ್ರಭು ಕೇಪೇಗೌಡರ ಪುತ್ಥಳಿ, ಹಜಾರ ಸೇರಿ ಇನ್ನಿತರ ಪ್ರಸಿದ್ಧ ಸ್ಥಳಗಳನ್ನು ವೀಕ್ಷಿಸಿದರು. ದಾಸೋಹ ಭವನದಲ್ಲಿ ಭಕ್ತರಿಗೆ ಪ್ರಸಾದ ವಿತರಿಸಿದರು.

ಈ ವೇಳೆ ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀ ಮಂಗಳನಾಥ ಸ್ವಾಮೀಜಿ, ಚಿತ್ರದುರ್ಗದ ಮಾದಾರ ಚನ್ನಯ್ಯ ಸ್ವಾಮೀಜಿ, ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ರಮಣಾನಂದ ಸ್ವಾಮೀಜಿ, ನೆಲಮಂಗಲ ತಾಲೂಕಿನ ಸಮುದಾಯದ ಮುಖಂಡರು ಗಿರಿ ನಡಿಗೆಯಲ್ಲಿ ಭಾಗವಹಿಸಿದ್ದರು.

ಈಡೇರಿದ ಬಹುದಿನದ ಬಯಕೆ: ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿ, ಭಕ್ತರ ಜತೆ ಆಧ್ಯಾತ್ಮಿಕ ಪಾದಯಾತ್ರೆ ಮಾಡಬೇಕೆಂಬ ಬಯಕೆಯಿತ್ತು. ಅದು ಇಂದು ಈಡೇರಿದೆ. ಇನ್ನು ಆಧುನಿಕ ಕಾಲದಲ್ಲಿ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಇತಿಹಾಸ ಮತ್ತು ನಮ್ಮ ಧಾರ್ಮಿಕ ಕ್ಷೇತ್ರ ವಿಶೇಷತೆ ತಿಳಿಸಲು ಈ ಯಾತ್ರೆ ಆಯೋಜಿಸಿದ್ದೆವು. ಅವರೊಟ್ಟಿಗೆ ನಾನೂ ಭಾಗವಹಿಸಿದ್ದು ಸಂತಸ ತಂದಿದೆ. ಪ್ರಕೃತಿಯ ಮಡುವಿನಲ್ಲಿ ಹಾಗೂ ವಿಶೇಷ ಒಳಗೊಂಡ ಶಿವಗಂಗೆ ಬೆಟ್ಟ ಏರುವುದು ದೈಹಿಕ, ಮಾನಸಿಕ ಸದೃಢತೆ ಹೆಚ್ಚಿಸುತ್ತದೆ ಎಂದರು.

ವರ್ಷದೊಳಗೆ ಶಾಖಾ ಮಠ ಆರಂಭ

ಶಿವಗಂಗೆಯಲ್ಲಿ ಶಾಖಾಮಠ ಆರಂಭಿಸಬೇಕು ಎನ್ನುವುದು ಬಹುದಿನಗಳ ಬಯಕೆ. ಮುಂದಿನ ಒಂದು ವರ್ಷದಲ್ಲಿ ಭಕ್ತರ ಸಹಕಾರದೊಂದಿಗೆ ಇಲ್ಲಿ ಮಠ ಪ್ರಾರಂಭಿಸುವ ಉದ್ದೇಶ ಹೊಂದಿದ್ದೇವೆ ಎಂದು ಡಾ.ಶ್ರೀನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net