ಡಿಜಿಟಲ್ ಪಬ್ಲಿಕ್ ಮೂಲ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ - ನಿರ್ಮಲಾ ಸೀತಾರಾಮನ್

llllllllll
Published on



ಮಂಗಳೂರು : ಬಂಡವಾಳ ಹೂಡಿಕೆ, ಮೂಲಸೌಕರ್ಯ,ನಾವೀನ್ಯತೆ ಹಾಗೂ ಹಣಕಾಸು ಸೇರ್ಪಡೆಗೆ ಕೇಂದ್ರ ವಿಶೇಷ ಗಮನ ಹರಿಸಿದ್ದು, ಇವುಗಳ ಆಧಾರದಲ್ಲಿ ದೇಶದ ಆರ್ಥಿಕ ಅಭಿವೃದ್ಧಿ ಸಾಧಿಸಲು ಮುಂದಾಗಿದ್ದೇವೆ . ಡಿಜಿಟಲ್ ಪಬ್ಲಿಕ್ ಮೂಲ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಜಾಗತಿಕ ಅನಿಶ್ಚಿತತೆಗಳ ನಡುವೆಯೂ ಭಾರತ ಆರ್ಥಿಕ ಬೆಳವಣಿಗೆ ಕಂಡಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಸಿಟಿಜನ್ ಕೌನ್ಸಿಲ್‌ಆಫ್ ಇಂಡಿಯಾ ಮಂಗಳೂರು ಘಟಕದ ವತಿಯಿಂದ ಬುಧವಾರ ನಗರದ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಜತೆ ಸಂವಾದ ನಡೆಸಿದ ಅವರು ‘ವಿಶ್ವದ ಅತಿ ದೊಡ್ಡ ಆರ್ಥಿಕತೆಯಲ್ಲಿ 10ನೇ ಸ್ಥಾನದಲ್ಲಿದ್ದ ಭಾರತ ಈಗ 5ನೇ ಸ್ಥಾನಕ್ಕೆ ಏರಿದೆ. ಸಾಕಷ್ಟು ಸವಾಲುಗಳನ್ನು ಎದುರಿಸಿ ಈ ಪ್ರಗತಿ ಸಾಧಿಸಲಾಗಿದೆ ಎಂದರು.
ದೇಶದ ಸಮಗ್ರ ಅಭಿವೃದ್ಧಿಗಾಗಿ ಅಲ್ಪಾವಧಿಯ ಹಾಗೂ ದೀರ್ಘ ಕಾಲದ ಗುರಿ ಹೊಂದಲಾಗಿದೆ. ಸವಾಲು ಎದುರಿಸುವಾಗ ಸ್ಥಿರತೆ, ತೆರಿಗೆ ನೀತಿ, ಕೈಗಾರಿಕೆ, ಎಂಎಸ್‌ಎಂಇಗೆ ಆದ್ಯತೆ, ಕೃಷಿ ನೀತಿಗಳು ಅಗತ್ಯ. ಹೆಚ್ಚಿನ ದೇಶಗಳಲ್ಲಿ ಮೂರನೇ ಬಾರಿಗೆ ಅಧಿಕಾರಕ್ಕೆ ಬರಲು ಸಾಧ್ಯವಾಗದೆ ಇರುವ ಪರಿಸ್ಥಿತಿ ಇದ್ದರೆ, ಭಾರತದಲ್ಲಿ ಮೋದಿ ಅವರ ಮೇಲೆ ಜನರಿಟ್ಟ ವಿಶ್ವಾಸದಿಂದ ಮೂರನೇ ಬಾರಿಯೂ ಅಧಿಕಾರಕ್ಕೆ ಬಂದಿದ್ದೇವೆ . ಭ್ರಷ್ಟಾಚಾರ ರಹಿತ ಆಡಳಿತ , ಮೋದಿ ಅವರ ಸ್ಥಿರ ನೀತಿ- ನಿಲುವುಗಳ ನಾಯಕತ್ವದಿಂದ ಇದು ಸಾಧ್ಯವಾಗಿದೆ. ಎಂದು ಅವರು ಹೇಳಿದರು.
*ಉತ್ಪಾದನಾ ಹಬ್ ಗುರಿ :
ಭಾರತವನ್ನು ಉತ್ಪಾದನಾ ಹಬ್ ಮಾಡುವ ಗುರಿ ಹೊಂದಲಾಗಿದೆ. ರಕ್ಷಣಾ ಕ್ಷೇತ್ರದ ಸಾಮಗ್ರಿಗಳನ್ನು ತಯಾರಿಸಿ ರಫ್ತು ಮಾಡುವ ದೊಡ್ಡ ರಾಷ್ಟ್ರವಾಗಿ ಭಾರತ ಹೊರಹೊಮ್ಮುತ್ತಿದೆ. ಸೌರಶಕ್ತಿಗೆ ಸಂಬಂಧಿಸಿದ ಉಪಕರಣಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದೆವು. ಆದರೆ ಇಂದು ಗುಣಮಟ್ಟದ ವಸ್ತುಗಳನ್ನು ತಯಾರಿಸಿ ರಫ್ತು ಮಾಡುವ ಮಟ್ಟಕ್ಕೇರಿದ್ದೇವೆ. ದೇಶವನ್ನು ಇಲೆಕ್ಟ್ರಾನಿಕ್ ಹಬ್ ಮಾಡುವ ಗುರಿ ಹೊಂದಲಾಗಿದೆ ಎಂದು ಅವರು ತಿಳಿಸಿದರು.
ಬಜೆಟ್‌ನಲ್ಲಿ ಯುವ ಜನರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಉದ್ಯೋಗಾರ್ಹತೆ ಹೆಚ್ಚಿಸಲು 21-24 ವರ್ಷದೊಳಗಿನ ನಿರುದ್ಯೋಗಿ
ಯುವಕರಿಗೆ ಕೌಶಲ ನೀಡಲು 500 ಟಾಪ್ ಕಂಪೆನಿಗಳ ಸಹಯೋಗದಲ್ಲಿ ಇಂಟರ್ನ್‌ಶಿಪ್ ಕಾರ್ಯಕ್ರಮ ಯೋಜಿಸಿದ್ದೇವೆ. ಈ ಮೂಲಕ ಐದು ವರ್ಷಗಳಲ್ಲಿ ಒಂದು ಕೋಟಿ ಯುವಜನರು ಉದ್ಯೋಗಾರ್ಹತೆ ಪಡೆದುಕೊಳ್ಳಲಿದ್ದಾರೆ. ಐಟಿಐ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ತರಬೇತಿ ನೀಡಲು ಐಟಿಐಗಳಿಗೆ ಅತ್ಯಾಧುನಿಕ ಯಂತ್ರೋಪಕರಣ ಒದಗಿಸಲಾಗುವುದು ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
*ತಾರತಮ್ಯ ಸುಳ್ಳು ಆರೋಪ :
ಕೇಂದ್ರ ಸರ್ಕಾರದಿಂದ ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳಿಗೆ ಯುಪಿಎ ಅವಧಿಗಿಂತ ಹೆಚ್ಚು ಅನುದಾನ ನೀಡಲಾಗಿದೆ. ಕರ್ನಾಟಕದ ಮುಖ್ಯಮಂತ್ರಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ವಿದ್ಯಾವಂತರನ್ನು ಗೊಂದಲಕ್ಕೀಡು ಮಾಡುವ ಹೇಳಿಕೆ ನೀಡುತ್ತಿದ್ದಾರೆ. ಇದು
ರಾಜಕೀಯವಾಗಿ ಕೆಸರೆರಚುವ ಕೆಲಸ .ಹಣಕಾಸು ಆಯೋಗದ ಶಿಫಾರಸಿನ ಪ್ರಕಾರವೇ ರಾಜ್ಯಗಳಿಗೆ ಅನುದಾನ ನೀಡಲಾಗಿದೆ. ಇದರಲ್ಲಿ
ಯಾವುದೇ ತಾರತಮ್ಯ ಮಾಡಿಲ್ಲ. ನಿಖರ ಅಂಕಿ ಅಂಶಗಳು ಇರುವಾಗ ಸ್ವತಃ ಕರ್ನಾಟಕದ ಮುಖ್ಯಮಂತ್ರಿ ಆಧಾರರಹಿತ ಆರೋಪ ಮಾಡುತ್ತಿದ್ದಾರೆ ಎಂದು ಸಚಿವರು ಹೇಳಿದರು. ಸಿಟಿಝನ್ ಕೌನ್ಸಿಲ್ ಅಧ್ಯಕ್ಷ ವಾಸುದೇವ ಕಾಮತ್ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net