ಎನ್‌ಐಆರ್‌ಎಫ್: ಮೈಸೂರು ವಿಶ್ವವಿದ್ಯಾಲಯ ಶ್ರೇಯಾಂಕ ಮತ್ತೆ ಕುಸಿತ

mysore
Published on

ಮೈಸೂರು: ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ 2024ನೇ ಸಾಲಿನ ರಾಷ್ಟ್ರೀಯ ಸಾಂಸ್ಥಿಕ ರ‌್ಯಾಂಕಿಂಗ್ ಚೌಕಟ್ಟಿನ (ಎನ್‌ಐಆರ್‌ಎಫ್) ವಾರ್ಷಿಕ ರ‌್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆಗೊಂಡಿದೆ.

2024ನೇ ಸಾಲಿನ ಶ್ರೇಯಾಂಕ ಮಾಪನಕ್ಕಾಗಿ ದೇಶದ 10,845 ಉನ್ನತ ಶಿಕ್ಷಣ ಸಂಸ್ಥೆಗಳು ಭಾಗವಹಿಸಿದ್ದವು.


ವಿಶ್ವವಿದ್ಯಾಲಯಗಳ ವಿಭಾಗ: ದೇಶದ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಮೈಸೂರು ವಿವಿ ರ‌್ಯಾಕಿಂಗ್ ಮತ್ತೆ ಇಳಿಕೆಯಾಗಿದೆ. 44 ರಿಂದ 54ನೇ ಸ್ಥಾನಕ್ಕೆ ಕುಸಿದಿದೆ. ಇದರೊಂದಿಗೆ 10 ಸ್ಥಾನ ಕೆಳಗೆ ಇಳಿದಿದೆ. ಪ್ರಸಕ್ತ ಸಾಲಿನಲ್ಲಿ 51.04 ಅಂಕದೊಂದಿಗೆ 54ನೇ ಶ್ರೇಣಿಗೆ ತೃಪ್ತವಾಗಿದೆ.


2023ರಲ್ಲಿ ಸಾಲಿನಲ್ಲಿ 50.82 ಅಂಕದೊಂದಿಗೆ 44ನೇ ರ‌್ಯಾಂಕ್ ಗಳಿಸಿತ್ತು. 2022ರಲ್ಲಿ 51.37 ಅಂಕದೊಂದಿಗೆ 33ನೇ ರ‌್ಯಾಂಕ್ ಪಡೆದುಕೊಂಡಿತ್ತು. 2021ರಲ್ಲಿ 19ನೇ ಸ್ಥಾನ ಪಡೆದು 52.68 ಅಂಕ ಗಳಿಸಿತ್ತು. 2020ರಲ್ಲಿ 27ನೇ ಸ್ಥಾನ ಪಡೆದು 51.84 ಅಂಕ ಪಡೆದಿತ್ತು.
ಸಮಗ್ರ ರ‌್ಯಾಂಕಿಂಗ್: ದೇಶದ ಸಮಗ್ರ ಉನ್ನತ ಶಿಕ್ಷಣ ಸಂಸ್ಥೆ ಪಟ್ಟಿಯಲ್ಲೂ ಮೈಸೂರು ವಿಶ್ವವಿದ್ಯಾಲಯ 15 ಸ್ಥಾನ ಕುಸಿತ ಕಂಡಿದೆ. 71 ರಿಂದ 86 ರ‌್ಯಾಂಕ್‌ಗೆ ಇಳಿಕೆ ಕಂಡಿರುವುದು ಮೈವಿವಿ ಶೈಕ್ಷಣಿಕ ಗುಣಮಟ್ಟ ಕುರಿತು ಪ್ರಶ್ನೆ ಮೂಡಿಸಿದೆ. ಪ್ರಸ್ತಕ ಸಾಲಿನಲ್ಲಿ 86ನೇ ಸ್ಥಾನದೊಂದಿಗೆ 49.45 ಅಂಕ ಗಳಿಸಿದೆ.


ಈ ಪಟ್ಟಿಯಲ್ಲಿ 2023ರ ಸಾಲಿನಲ್ಲಿ 71ನೇ ಸ್ಥಾನದೊಂದಿಗೆ 49.17 ಅಂಕ ಗಿಟ್ಟಿಸಿಕೊಂಡಿತ್ತು. 2022ರಲ್ಲಿ 54ನೇ ಸ್ಥಾನದೊಂದಿಗೆ 49.71 ಅಂಕ ಪಡೆದುಕೊಂಡಿತ್ತು. 2021ನೇ ಸಾಲಿನಲ್ಲಿ 34ನೇ ಸ್ಥಾನ ಪಡೆದಿತ್ತು. 2020ನೇ ಸಾಲಿನಲ್ಲಿ 47ನೇ ಸ್ಥಾನ ಪಡೆಯುವುದರೊಂದಿಗೆ 49.75 ಅಂಕ ಪಡೆದಿತ್ತು. 2019ರಲ್ಲಿ ಮೈವಿವಿ 80ನೇ ಸ್ಥಾನ ಪಡೆದು, 44.06 ಅಂಕ ಗಳಿಸಿತ್ತು. ಅಂಕ ಗಳಿಕೆ ಅಂತಹ ಹೆಚ್ಚಿನ ವ್ಯತ್ಯಾಸವಾಗದಿದ್ದರೂ ರ‌್ಯಾಂಕಿಂಗ್‌ನಲ್ಲಿ ಮಾತ್ರ ವರ್ಷದಿಂದ ವರ್ಷ ಕುಸಿಯುತ್ತಲೇ ಸಾಗಿದೆ.


2015ರಿಂದಲೂ ಎನ್‌ಐಆರ್‌ಎಫ್ ಮುಖಾಂತರ ಉನ್ನತ ಶಿಕ್ಷಣ ಸಂಸ್ಥೆಗಳ ಮೌಲ್ಯೀಕರಣ ಮಾಡಲಾಗುತ್ತಿದೆ. ಸಮಗ್ರ ರ‌್ಯಾಂಕಿಂಗ್, ವಿಶ್ವವಿದ್ಯಾಲಯಗಳ ರ‌್ಯಾಂಕಿಂಗ್, ಇಂಜಿನಿಯರಿಂಗ್ ರ‌್ಯಾಂಕಿಂಗ್ ಸೇರಿದಂತೆ 10 ವಿವಿಧ ವರ್ಗಗಳಡಿ ಮೌಲ್ಯಾಂಕ ನೀಡಲಾಗುತ್ತದೆ. ಮೈಸೂರು ವಿಶ್ವವಿದ್ಯಾಲಯವು ಈ ಸಲವೂ ರ‌್ಯಾಂಕಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಿತ್ತು.


ಐದು ಪ್ರಧಾನ ಅಂಶಗಳನ್ನಾಧರಿಸಿ ಎನ್‌ಐಆರ್‌ಎಫ್ ವತಿಯಿಂದ ಭಾರತದಲ್ಲಿನ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ರ‌್ಯಾಂಕಿಂಗ್ ನೀಡಲಾಗುತ್ತದೆ. ಬೋಧನೆ, ಕಲಿಕೆ, ಸಂಪನ್ಮೂಲ-ಸಂಶೋಧನೆ ಮತ್ತು ವೃತ್ತಿಪರ ಅಭ್ಯಾಸಗಳು-ಪದವಿ ಫಲಿತಾಂಶ, ವಿಸ್ತರಣೆ- ಒಳಗೊಳ್ಳುವಿಕೆ ಹಾಗೂ ಸಹವರ್ತಿಗಳ ಅಭಿಪ್ರಾಯ ಈ ಎಲ್ಲ 5 ಅಂಶಗಳು ಉನ್ನತ ಶಿಕ್ಷಣ ಸಂಸ್ಥೆಗಳ ಮುಖ್ಯ ಆಶಯಗಳಾದ ಬೋಧನೆ ಹಾಗೂ ಕಲಿಕೆಯಲ್ಲಿನ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳ ತಲುಪುವಿಕೆ ಇತ್ಯಾದಿಗಳಿಗೆ ಸಂಬಂಧಿಸಿವೆ. ಈ ಎಲ್ಲ ಆಯಾಮಗಳಲ್ಲೂ ಮೈಸೂರು ವಿವಿ ಹಿಂದೆ ಬಿದ್ದಿದೆ.

ಕಾಯಂ ಬೋಧಕರ ಕೊರತೆ ಮೈಸೂರು ವಿಶ್ವವಿದ್ಯಾಲಯ ರ‌್ಯಾಂಕಿಂಗ್‌ನಲ್ಲಿ ಹಿಂದೆ ಬೀಳಲು ಮುಖ್ಯ ಕಾರಣವಾಗಿದೆ. ಕಾಯಂ ಬೋಧಕರ ಸಂಖ್ಯೆ ಶೇ.38ಕ್ಕಿಂತ ಕಡಿಮೆಯಾಗಿದ್ದರೆ, ಶೈಕ್ಷಣಿಕ ಗುಣಮಟ್ಟಕ್ಕೂ ಕೊಡಲಿಪೆಟ್ಟು ಬಿದ್ದಿದೆ. 2007ರಲ್ಲಿ ಕೊನೆಯದಾಗಿ ಪ್ರಾಧ್ಯಾಪಕರ ನೇಮಕಾತಿ ನಡೆಯಿತು. ಬಳಿಕ ಕಾಲ ಕಾಲಕ್ಕೆ ನೇಮಕಾತಿ ಕೈಗೊಂಡಿಲ್ಲ. ನಿವೃತ್ತಿ ಸೇರಿದಂತೆ ವಿವಿಧ ಕಾರಣಕ್ಕೆ ಪ್ರಾಧ್ಯಾಪಕರ ಹುದ್ದೆಗಳು ಖಾಲಿಯಾಗಿವೆ. ಇಡೀ ವಿವಿ ಬೋಧನಾ ಕೆಲಸ ಅತಿಥಿ ಉಪನ್ಯಾಸಕರ ಮೇಲೆ ನಿಂತಿದೆ. ಶೈಕ್ಷಣಿಕ, ಆಡಳಿತ ಪ್ರಗತಿ ಕುಸಿಯುತ್ತಲೇ ಸಾಗಿದೆ. ಇದುವೇ ಮೈವಿವಿ ರ‌್ಯಾಂಕ್ ಕುಸಿಯಲು ಮುಖ್ಯ ಕಾರಣವಾಗಿದೆ ಎಂದು ಹಿರಿಯ ಪ್ರಾಧ್ಯಾಪಕರೊಬ್ಬರು ತಿಳಿಸಿದರು.

ಜೆಎಸ್‌ಎಸ್ ಅಕಾಡೆಮಿಗೆ 24ನೇ ರ‌್ಯಾಂಕ್


ದೇಶದ ವಿಶ್ವವಿದ್ಯಾಲಯಗಳ ವಿಭಾಗ ಪಟ್ಟಿಯಲ್ಲಿ ಮೈಸೂರಿನ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯು ಉತ್ತಮ ರ‌್ಯಾಂಕ್ ಪಡೆದುಕೊಂಡಿದೆ. 57.74 ಅಂಕದೊಂದಿಗೆ 24ನೇ ಸ್ಥಾನ ಪಡೆದುಕೊಂಡಿದೆ. 2023ರಲ್ಲಿ 51.88 ಅಂಕದೊಂದಿಗೆ 34ನೇ ಸ್ಥಾನ ಗಳಿಸಿತ್ತು. 2022ರಲ್ಲಿ 51.20 ಅಂಕದೊಂದಿಗೆ 34ನೇ ಸ್ಥಾನ ಪಡೆದುಕೊಂಡಿತ್ತು. ಜೆಎಸ್‌ಎಸ್ ಸಂಸ್ಥೆಯು ಕಳೆದ 8 ವರ್ಷಗಳಿಂದ ದೇಶದ ಅಗ್ರ 50ರಲ್ಲಿ ತನ್ನ ಸ್ಥಾನ ಉಳಿಸಿಕೊಂಡಿದೆ.


ಸಮಗ್ರ ರ‌್ಯಾಂಕಿಂಗ್‌ನಲ್ಲಿ 36ನೇ ರ‌್ಯಾಂಕ್: ಈ ಪಟ್ಟಿಯಲ್ಲಿ ಮೈಸೂರಿನ ಜೆಎಸ್‌ಎಸ್ ಉನ್ನತ ಶಿಕ್ಷಣ ಸಂಶೋಧನಾ ಅಕಾಡೆಮಿ ತನ್ನ ರ‌್ಯಾಂಕಿಂಗ್ ಇನ್ನಷ್ಟು ಉತ್ತಮಪಡಿಸಿಕೊಂಡಿದೆ. ಪ್ರಸಕ್ತ ಸಾಲಿನಲ್ಲಿ 55.79 ಅಂಕದೊಂದಿಗೆ 36ನೇ ರ‌್ಯಾಂಕ್‌ಗೆ ಏರಿದೆ. 2023ರ ಸಾಲಿನಲ್ಲಿ 51.15 ಅಂಕದೊಂದಿಗೆ 55ನೇ ಸ್ಥಾನ ಪಡೆದುಕೊಂಡಿತ್ತು. 2022ರಲ್ಲಿ 49.31 ಅಂಕದೊಂದಿಗೆ 60ನೇ ಸ್ಥಾನ ಗಳಿಸಿತ್ತು. 2021ರಲ್ಲಿ 56ನೇ ರ‌್ಯಾಂಕ್ ಪಡೆದಿತ್ತು. 2020ರಲ್ಲಿ 48.09 ಅಂಕದೊಂದಿಗೆ 54ನೇ ಸ್ಥಾನ ಪಡೆದಿತ್ತು.


ಊಟಿಯ ಜೆಎಸ್‌ಎಸ್ ಫಾರ್ಮಸಿ ಕಾಲೇಜು ದೇಶದ ಫಾರ್ಮಸಿ ಕಾಲೇಜುಗಳ ಪೈಕಿ ಟಾಪ್ 10 ರೊಳಗಿದ್ದು, 4ನೇ ಸ್ಥಾನವನ್ನು ಉಳಿಸಿಕೊಂಡಿದೆ. ಮೈಸೂರಿನ ಜೆಎಸ್‌ಎಸ್ ಫಾರ್ಮಸಿ ಕಾಲೇಜು ಈ ಬಾರಿ 6ನೇ ಸ್ಥಾನಕ್ಕೇರಿದೆ. ಅದೇ ರೀತಿ ಜೆಎಸ್‌ಎಸ್ ದಂತ ವೈದ್ಯಕೀಯ ಮಹಾವಿದ್ಯಾಲಯವು 12ನೇ ಸ್ಥಾನದಲ್ಲಿದ್ದರೆ, ಜೆಎಸ್‌ಎಸ್ ವೈದ್ಯಕೀಯ ಮಹಾವಿದ್ಯಾಲಯವು 39ನೇ ಸ್ಥಾನ ಗಳಿಸಿದೆ.

ಈ ಶ್ರೇಯಾಂಕವು ವಿಶ್ವವಿದ್ಯಾನಿಲಯ ಮತ್ತು ಅದರ ಘಟಕ ಕಾಲೇಜುಗಳು ಒದಗಿಸುವ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪ್ರತಿಬಿಂಬಿಸುತ್ತದೆ. ಜೆಎಸ್‌ಎಸ್ ಅಕಾಡೆಮಿಯ ದೇಶದ ಅಗ್ರ 50 ವಿಶ್ವವಿದ್ಯಾಲಯಗಳಲ್ಲಿ ಸ್ಥಾನ ಪಡೆದ ಏಕೈಕ ಆರೋಗ್ಯ ವಿಜ್ಞಾನ ಮತ್ತು ಜೀವ ವಿಜ್ಞಾನ ಕೇಂದ್ರಿತ ವಿವಿಯಾಗಿದ್ದು, ಕರ್ನಾಟಕದಲ್ಲಿ 2ನೇ ಸ್ಥಾನದಲ್ಲಿದೆ ಎಂದು ಅಕಾಡೆಮಿಯ ಕುಲಸಚಿವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net