

ಬೆಂಗಳೂರು: ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು - 2025 (ಎನ್‌ಐಆರ್‌ಎಫ್) ಮೌಲ್ಯಮಾಪನದಲ್ಲಿ ದೇಶದಲ್ಲಿರುವ 75 ಕೃಷಿ ಸಂಬಂಧಿತ ವಿಶ್ವವಿದ್ಯಾಲಯಗಳ ಪೈಕಿ ಬೆಂಗಳೂರು ಕೃಷಿ ವಿವಿಯು (ಯುಎಎಸ್-ಬಿ) 11ನೇ ಸ್ಥಾನವನ್ನು ಪಡೆದಿದೆ.
ಪ್ರತಿ ವರ್ಷ ಎನ್‌ಐಆರ್‌ಎಫ್ ನಡೆಸುವ ಈ ಮೌಲ್ಯಮಾಪನದಲ್ಲಿ ರಾಷ್ಟ್ರ ಮಟ್ಟದಲ್ಲಿ ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಸಹಿತ ಕೃಷಿ ಸಂಶೋಧನಾ ಸಂಸ್ಥೆಗಳು ಭಾಗಿಯಾಗುತ್ತವೆ. ಹಿಂದಿನ ವರ್ಷವೂ ಯುಎಎಸ್‌ಬಿ 11ನೇ ಸ್ಥಾನವನ್ನು ಪಡೆದಿತ್ತು. ರಾಜ್ಯ ಮಟ್ಟದಲ್ಲಿ ಮೊದಲ ಸ್ಥಾನವನ್ನು ಯುಎಎಸ್‌ಬಿ ಉಳಿಸಿಕೊಂಡಿದೆ. ಇದರ ಜತೆಗೆ ಪ್ರಸಕ್ತ ಸಾಲಿನಲ್ಲಿ ನ್ಯಾಕ್ ‘ಎ’ ಪ್ಲಸ್ ಶ್ರೇಣಿ ಪಡೆದುಕೊಂಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಯುಎಎಸ್-ಬಿ ಕುಲಪತಿ ಡಾ. ಎಸ್.ವಿ.ಸುರೇಶ್, ನಮ್ಮ ವಿಶ್ವವಿದ್ಯಾಲಯದ ಶೈಕ್ಷಣಿಕ ಗುಣಮಟ್ಟ, ಸಂಶೋಧನಾ ಪ್ರಗತಿ ಹಾಗೂ ರೈತಸ್ನೇಹಿ ವಿಸ್ತರಣಾ ಕಾರ್ಯದಕ್ಷತೆಗೆ ಹಿಡಿದ ಕೈಗನ್ನಡಿಯಾಗಿದೆ. ಮುಂದಿನ ದಿನಗಳಲ್ಲೂ ವಿವಿಯು ಇನ್ನೂ ಹೆಚ್ಚಿನ ಯಶಸ್ಸು ಸಾಧಿಸುವ ಬದ್ಧತೆಯೊಂದಿಗೆ ಕಾರ್ಯನಿರ್ವಹಿಸಲಿದೆ ಎಂದಿದ್ದಾರೆ.