

ಶಿವಮೊಗ್ಗ: ನಿರ್ಭಯಾ ಪ್ರಕರಣದ ಬಳಿಕ ಕೊನೆಗೂ ಎಚ್ಚೆತ್ತುಕೊಂಡಿರುವ ಸರ್ಕಾರ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಹೆಚ್ಚಿನ ಒತ್ತು ನೀಡಿದೆ. ಈಗಿರುವ ಕ್ರಮಗಳ ಜತೆಗೆ ಮತ್ತೊಂದನ್ನು ಸೇರ್ಪಡೆ ಮಾಡಿದ್ದು ಪೊಲೀಸ್ ಇಲಾಖೆಗೆ 20 ನಿರ್ಭಯಾ ಬೈಕ್ಗಳನ್ನು ಕೊಡುಗೆಯಾಗಿ ನೀಡಿದೆ.
ನಿರ್ಭಯಾ ಅನುದಾನದಿಂದ ಜಿಲ್ಲೆಗೆ ಬೈಕ್ಗಳನ್ನು ನೀಡಲಾಗಿದ್ದು ಇನ್ಮುಂದೆ ಬಸ್ ನಿಲ್ದಾಣ, ಮಾರ್ಕೆಟ್, ಪಾರ್ಕ್ ಒಳಗೊಂಡಂತೆ ಸಾರ್ವಜನಿಕ ಸ್ಥಳಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಯುವತಿಯರು, ಮಹಿಳೆಯರು ಮತ್ತು ಮಕ್ಕಳ ರಕ್ಷಣೆ ಮಾಡಲಿವೆ.
ವರದಕ್ಷಿಣೆ ಕಿರುಕುಳ, ದೌರ್ಜನ್ಯ, ಅತ್ಯಾಚಾರ ಪ್ರಕರಣಗಳ ತಡೆಗೆ ನಿರ್ಭಯಾ ಕಾರ್ಯಪ್ರವೃತ್ತವಾಗಲಿದೆ. ಆಪತ್ತಿಗೆ ಸಿಲುಕಿದವರು 100 ಅಥವಾ 112ಕ್ಕೆ ಸಂಪರ್ಕ ಮಾಡಿದರೆ ಕೆಲವೇ ಸಮಯದಲ್ಲಿ ಸ್ಥಳಕ್ಕೆ ಬೈಕ್ ಹಾಜರಿರಲಿದೆ.
ದೌರ್ಜನ್ಯ ಪ್ರಕರಣಗಳಿಗೆ ಈ ಮೊದಲು ಮಹಿಳಾ ಠಾಣೆಯನ್ನು ಸಂರ್ಪಸಬೇಕಿತ್ತು. ಅಲ್ಲದೆ ಪೋಲಿ ಹುಡುಗರಿಂದ ಯುವತಿಯರನ್ನು ರಕ್ಷಿಸಿಲು ಓಬವ್ವನ ಪಡೆ ರಚಿಸಲಾಗಿತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಓಬವ್ವನ ಪಡೆ ಕೆಲಸ ಮಾಡದ ಕಾರಣ ನಿರ್ಭಯಾ ಬೈಕ್ ಪರ್ಯಾಯವಾಗಿ ಸೇವೆಗೆ ಇಲಾಖೆ ಸಜ್ಜಾಗಿದೆ.
ಈಗಾಗಲೇ ಜಯನಗರ, ದೊಡ್ಡಪೇಟೆ, ವಿನೋನಗರ, ಕೋಟೆ ಠಾಣೆ ಒಳಗೊಂಡಂತೆ ಜಿಲ್ಲೆಯ 32ರ ಪೈಕಿ 20 ಠಾಣೆಗಳಿಗೆ ನಿರ್ಭಯಾ ಬೈಕ್ಗಳನ್ನು ಪೊಲೀಸ್ ಇಲಾಖೆ ನೀಡಿದೆ.