ಮೈಶುಗರ್‌ಗೂ ನಿರಾಣಿ ಗ್ರೂಪ್‌ಗೂ ತಳುಕು ಹಾಕಬೇಡಿ

murugesh nirani
Published on

ವಿಜಯವಾಣಿ ಸುದ್ದಿಜಾಲ ಮಂಡ್ಯ

ಮೈಶುಗರ್‌ಗೂ, ನಿರಾಣಿ ಶುಗರ್ಶ್ ಗ್ರೂಪ್‌ಗೂ ತಳುಕು ಹಾಕುವುದು ಬೇಡ ಎಂದು ನಿರಾಣಿ ಗ್ರೂಪ್ಸ್ ಅಧ್ಯಕ್ಷ, ಮಾಜಿ ಸಚಿವ ಮುರುಗೇಶ್ ನಿರಾಣಿ ಸ್ಪಷ್ಟನೆ ನೀಡಿದ್ದಾರೆ.

ಮೈಶುಗರನ್ನು ಖಾಸಗಿಯವರಿಗೆ ನೀಡುವುದಕ್ಕಾಗಲಿ, ಒ ಆ್ಯಂಡ್ ಎಂಗೆ ನೀಡುವುದಕ್ಕಾಗಲಿ ಸರ್ಕಾರ ಈ ಕ್ಷಣದವರೆಗೆ ನಿರ್ಧರಿಸಿಲ್ಲ. ಹಾಗಾಗಿ ಗುತ್ತಿಗೆಗೆ ಪಡೆಯಲು ಟೆಂಡರ್ ಸಲ್ಲಿಸುವ ಪ್ರಶ್ನೆಯೇ ಉದ್ಬವಿಸುವುದಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬೇಕಾದವರಿಗೆ ಮೈಶುಗರ್ ನೀಡಲು ಅದು ಕಿರಾಣಿ ಅಂಗಡಿಯಲ್ಲ. ಯಾವುದೇ ಕಾರ್ಖಾನೆಗಳನ್ನು ಗುತ್ತಿಗೆ ನೀಡಬೇಕಾದರೆ ಪಾರದರ್ಶಕ ನಿಯಮಗಳಡಿ ಟೆಂಡರ್ ಕರೆಯಬೇಕು. ನಿಯಮಾನುಸಾರ ತಾಂತ್ರಿಕ, ಆರ್ಥಿಕ ಅರ್ಹತೆಯನ್ನಾಧರಿಸಿ ಸರ್ಕಾರ ಗುತ್ತಿಗೆಗೆ ನೀಡಲಾಗುತ್ತದೆ. ಈ ಮಾಹಿತಿಯನ್ನು ನಿರಾಧಾರ ಆರೋಪ ಮಾಡುವವರು ತಿಳಿದುಕೊಳ್ಳಬೇಕು ಎಂದಿದ್ದಾರೆ.

ಮೈಶುಗರ್ ಅನ್ನು ಖಾಸಗೀಕರಣ ಮಾಡಲು ಸರ್ಕಾರ ಟೆಂಡರ್ ಅಧಿಸೂಚಿಸಿದರೆ ಅಂದು ನನಗೆ ಅರ್ಹತೆ ಮತ್ತು ಆಸಕ್ತಿ ಇದ್ದರೆ ಪಾಲ್ಗೊಳ್ಳುತ್ತೇನೆ. ಕಾರ್ಖಾನೆ 4 ವರ್ಷಗಳಿಂದ ಪೂರ್ಣ ಮಟ್ಟದಲ್ಲಿ ನಡೆದಿಲ್ಲ. ಕೆಲವೇ ತಿಂಗಳು ಕಾರ್ಖಾನೆ ಕಬ್ಬು ಅರೆದು ರೋಗಗ್ರಸ್ತವಾಗಿರುವ ಕಾರ್ಖಾನೆಯನ್ನು ರೋಗಗ್ರಸ್ತವಾಗಿಯೇ ಮುಂದುವರಿಸಬೇಕೋ, ಪೂರ್ಣ ಪ್ರಮಾಣದಲ್ಲಿ ಕಬ್ಬು ಅರೆಯಲು ಆರಂಭಿಸಬೇಕೋ ಎಂಬುದನ್ನು ಸರ್ಕಾರ, ಜಿಲ್ಲೆಯ ಜನಪ್ರತಿನಿಧಿಗಳು, ರೈತ ಹಿತರಕ್ಷಣಾ ಸಮಿತಿ, ವಿವಿಧ ರೈತ ಸಂಘಟನೆಗಳು ಹಾಗೂ ಕಬ್ಬು ಬೆಳೆಗಾರರು ನಿರ್ಧರಿಸುವ ಕಾಲ ಸನ್ನಿಹಿತವಾಗಿದೆ. ಕಾರ್ಖಾನೆ ಜತೆ ನನ್ನ ಹೆಸರನ್ನು ತಳುಕು ಹಾಕುವುದು ಬೇಡ ಎಂದು ಮನವಿ ಮಾಡಿದ್ದಾರೆ.

ಹಠ, ಹಿತಾಸಕ್ತಿ ನನಗಿಲ್ಲ

ಕೆಆರ್‌ಎಸ್ ಜಲಾಶಯಕ್ಕಿಂತ ಆಲಮಟ್ಟಿ ಜಲಾಶಯ ತುಂಬಾ ದೊಡ್ಡದು. ನಾನು ನಮ್ಮ ಭಾಗದಲ್ಲಿಯೇ ಇನ್ನೂ ನಾಲ್ಕೈದು ಸಕ್ಕರೆ ಕಾರ್ಖಾನೆ ಆರಂಭಿಸಬಹುದು. ಮಂಡ್ಯದ ಕಾರ್ಖಾನೆಗಳನ್ನು ನಡೆಸಬೇಕೆಂಬ ಹಠ, ಹಿತಾಸಕ್ತಿ ನನಗಿಲ್ಲ. ನಾನು ಯಶಸ್ವಿ ಉದ್ಯಮಿಯಾಗಿದ್ದು ರಾಜ್ಯಕ್ಕೆ ಹಾಗೂ ರಾಷ್ಟ್ರಕ್ಕೆ ಕೊಡುಗೆ ನೀಡಿದ್ದೇನೆ. ನಾನು ಲೂಟಿಕೋರನಲ್ಲ, ಕಳ್ಳತನ ಮಾಡುವ ಅಗತ್ಯವಿಲ್ಲ. ನಿರಾಧಾರ ಆರೋಪಗಳನ್ನು ನನ್ನ ಮೇಲೆ ವಿನಾಕಾರಣ ಮಾಡಿದರೆ ಕಾನೂನಿನ ಮೊರೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ನಾನು 6 ಸಕ್ಕರೆ ಕಾರ್ಖಾನೆಗಳ ಮಾಲೀಕತ್ವ ಹೊಂದಿದ್ದು, ಪ್ರತಿದಿನ 50 ಸಾವಿರ ಟನ್ ಕಬ್ಬು ಅರೆದು, 200 ಮೆಗಾವಾಟ್ ವಿದ್ಯುತ್, 8 ಲಕ್ಷ ಲೀ. ಇಥೆನಾಲ್, 400 ಮೆಟ್ರಿಕ್ ಟನ್ ಸಿಒ2, ಸಿಎನ್‌ಜಿ ಉತ್ಪಾದಿಸುತ್ತಿದ್ದೇನೆ. ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಸಕ್ಕರೆ, ಇಥೆನಾಲ್, ವಿದ್ಯುತ್ ಉತ್ಪಾದಿಸುವ ದಾಖಲೆ ಹೊಂದಿದ್ದೇನೆ. ಶೀಘ್ರದಲ್ಲೇ ವಿಮಾನಗಳಿಗೆ ಇಥೆನಾಲ್ ಒದಗಿಸುವ ಪ್ರಯತ್ನದಲ್ಲಿದ್ದೇನೆ. ನನ್ನ ಮೇಲೆ ನಿರಾಧಾರ ಆರೋಪಗಳನ್ನು ಮಾಡುವವರಿಗೆ ಹಾಗೂ ಹಗುರವಾಗಿ ಮಾತನಾಡುವವರಿಗೆ ಶೋಭೆ ತರುವುದಿಲ್ಲ ಎಂದು ತಿಳಿಸಿದ್ದಾರೆ.

2019-20ನೇ ಸಾಲಿನ ಕಬ್ಬಿನ ಬಾಕಿ 22 ಕೋಟಿ ರೂ. ಇದ್ದು, 1 ವಾರದಲ್ಲಿ ಪಾವತಿಸುತ್ತೇನೆ. ನನ್ನ ಕಾರ್ಖಾನೆಗಳ ಪೂರ್ಣ ವಹಿವಾಟಿನ ಶೇ.98ರಷ್ಟು ಹಣವನ್ನು ಕಬ್ಬು ಬೆಳೆಗಾರರಿಗೆ ಪಾವತಿಸಿದ್ದೇನೆ. 3000 ಕೋಟಿ ರೂ. ವಹಿವಾಟಿನಲ್ಲಿ ಕೇವಲ 22 ಕೋಟಿ ರೂ.ಬಾಕಿ ಇದೆ. ನನಗೆ ರಾಜ್ಯ ಸರ್ಕಾರದಿಂದ ವಿದ್ಯುಚ್ಛಕ್ತಿ ಬಾಕಿ ಹಣ, ಕೇಂದ್ರ ಸರ್ಕಾರದಿಂದ ಸಕ್ಕರೆ ಸಬ್ಸಿಡಿ, ಇಥೆನಾಲ್ ಪೂರೈಕೆ, ಕಬ್ಬು ಉತ್ಪನ್ನಗಳ ಮಾರಾಟದ ಬಾಕಿ ಹಣ ಸೇರಿ 150 ಕೋಟಿ ರೂ.ಗೂ ಹೆಚ್ಚು ಬಾಕಿ ಬರಬೇಕಿದೆ. ಆದರೂ ರೈತರಿಗೆ ಹಣ ಪಾವತಿಸಿದ್ದೇನೆ. ಇದನ್ನು ಕಬ್ಬು ಬೆಳೆಗಾರರು ಹಾಗೂ ನನ್ನ ಮೇಲೆ ಆರೋಪ ಮಾಡುವವರು ತಿಳಿದುಕೊಳ್ಳಬೇಕು ಎಂದು ಹೇಳಿದ್ದಾರೆ.

---

ಯದುವೀರ್ ಭೇಟಿಯಾಗಿಲ್ಲ

ಮೈಸೂರು ಅರಮನೆಯಲ್ಲಿ ಜೂ.10ರಂದು ಪ್ರಮೋದಾದೇವಿ ಅವರನ್ನು ಸೌಜನ್ಯದ ಭೇಟಿ ಮಾಡಿದ್ದು, ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಪ್ರಜ್ಞಾವಂತರಿಗೆ ಶೋಭೆ ತರುವುದಿಲ್ಲ.

ಯದುವೀರ್ ಅವರನ್ನು ಭೇಟಿ ಮಾಡೇ ಇಲ್ಲ. ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಮೈಶುಗರನ್ನು ಒ ಆ್ಯಂಡ್ ಎಂ ವ್ಯವಸ್ಥೆಯಲ್ಲಾದರೂ ಆರಂಭಿಸುವಂತೆ ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ರಾಜಮನೆತನವನ್ನು ಈ ವಿಷಯದಲ್ಲಿ ಎಳೆತರುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net