

ಮೈಸೂರು: ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಸಹಯೋಗದಲ್ಲಿ ನಿರಂತರ ಫೌಂಡೇಷನ್ ಐದು ದಿನ ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರದಲ್ಲಿ ಆಯೋಜಿಸಿರುವ ನಿರಂತರ ರಂಗೋತ್ಸವಕ್ಕೆ ಬುಧವಾರ ಚಾಲನೆ ದೊರೆಯಿತು.
ರಂಗೋತ್ಸವಕ್ಕೆ ಚಾಲನೆ ನೀಡಿದ ಹಿರಿಯ ರಂಗಕರ್ಮಿ ಎಚ್.ಎಸ್.ಶಿವಪ್ರಕಾಶ್ ಮಾತನಾಡಿ, ಗಂಡುಮೆಟ್ಟಿನ ಪರಿಕಲ್ಪನೆ ಮತ್ತು ಚಿಂತನೆ ಪ್ರಸ್ತುತ ಸಂದರ್ಭದಲ್ಲಿ ರಂಗಭೂಮಿಗೆ ಅತ್ಯವಶ್ಯಕವಾಗಿದೆ. 70ರ ದಶಕದ ರಂಗಭೂಮಿ ವಾತಾವರಣ ಈಗಿಲ್ಲ. ಆ ರೀತಿಯ ರಂಗಭೂಮಿ ಬರಬೇಕು. ಫೈನಾನ್ಸಿಯಲ್ ಇನ್ವೆಸ್ಟ್‌ಮೆಂಟ್‌ಗಿಂತ ಹ್ಯೂಮನ್ ಇನ್ವೆಸ್ಟ್‌ಮೆಂಟ್ ರಂಗಭೂಮಿಯಲ್ಲಿ ಇರಬೇಕು ಎಂದು ಹೇಳಿದರು.
ಆಧುನಿಕ ರಂಗಭೂಮಿ ಪ್ರಸ್ತುತ ಬೃಹತ್ ಉದ್ಯಮವಾಗಬೇಕಿತ್ತು. ಆದರೆ, ಅದು ಈವರೆಗೆ ಸಾಧ್ಯವಾಗಲಿಲ್ಲ. ಅಂದರೆ, ರಂಗಭೂಮಿ ಎತ್ತ ಸಾಗುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ. ರಂಗಭೂಮಿ ಎಲ್ಲಿಯವರೆಗೆ ಆತಂಕದಲ್ಲಿರುತ್ತದೆಯೋ ಅಲ್ಲಿಯವರೆಗೆ ಈ ರೀತಿಯ ಏರಿಳಿತಗಳು ಇದ್ದೇ ಇರುತ್ತದೆ ಎಂದು ತಿಳಿಸಿದರು.
ನಿರಂತರದ ಪ್ರಸಾದ್ ಮಾತನಾಡಿ, ರಂಗಭೂಮಿ ಭಾಷೆಯಲ್ಲ, ಮನಸ್ಥಿತಿಯನ್ನು ಕಲಿಸುತ್ತದೆ. ಆದರೆ, ಇತ್ತೀಚೆಗೆ ರಂಗಭೂಮಿಯಲ್ಲಿರುವವರೇ ಅದರ ಕತ್ತು ಹಿಸುಕುವ ಕೆಲಸ ಮಾಡುತ್ತಿದ್ದಾರೆ. ಇವೆಲ್ಲವುಗಳ ನಡುವೆ ರಂಗಭೂಮಿಯ ಔನ್ನತ್ಯವನ್ನು ನಾವು ಉಳಿಸಬೇಕಿದೆ ಎಂದು ಸೂಚ್ಯವಾಗಿ ನುಡಿದರು.
ನಾಟಕ ರಚನೆಕಾರ ಜಯರಾಂ ರಾಯಪುರ ಮಾತನಾಡಿ, ಬದುಕಿನೊಳಗಿನ ಘಟನೆಗಳು ಇತಿಹಾಸದಲ್ಲಿ ದಾಖಲಾಗಿದೆ. ನಮ್ಮೆಲ್ಲರ ತುಮುಲ, ಹಾದಿ, ಜಾಡಿನ ಬಗ್ಗೆ ನಮಗೆ ಗೊತ್ತಿದೆ. ರಾಜ ತನ್ನ ಉದಾತ್ತ ಭಾವನೆಗಳನ್ನು ಸಾಕ್ಷಾತ್ಕಾರಗೊಳಿಸಬೇಕಾದರೆ ಕುಶಾಗ್ರಮತಿಯಾಗಿ ಕೆಲಸ ಮಾಡಬೇಕು. ಇತಿಹಾಸಕ್ಕೆ ಅಪಚಾರ ಆಗಬಾರದು ಎಂದು ಮಾರ್ಮಿಕವಾಗಿ ನುಡಿದರು.
ಪ್ರಸಾದ್ ಕುಂದೂರು ಇದ್ದರು. ಬಳಿಕ ನಿರಂತರ ಮೈಸೂರು ತಂಡದ ನಿರ್ದೇಶನದಲ್ಲಿ ಮೂಡಿ ಬಂದಿರುವ ಜಯರಾಮ ರಾಯಪುರ ರಚನೆಯ ‘ವಾರಸುದಾರ’ ನಾಟಕ ಪ್ರದರ್ಶನಗೊಂಡಿತು.
ರಂಗ ಉತ್ಸವದಲ್ಲಿ ಮಾರ್ಚ್ 27ರವರೆಗೆ ನಿತ್ಯ ಸಂಜೆ 7ರಿಂದ ನಾಟಕ ಪ್ರದರ್ಶನವಾಗಲಿದೆ. ಮಾ.24ರಂದು ಬೆಂಗಳೂರಿನ ದೃಶ್ಯಕಾವ್ಯ ರಂಗತಂಡದಿಂದ ಸಿ.ನಂಜುಂಡೇಗೌಡ ಅವರ ನಿರ್ದೇಶನದಲ್ಲಿ ಕೆ.ವೈ.ನಾರಾಯಣಸ್ವಾಮಿ ರಚನೆಯ ‘ಮಾಯಾ ಬೇಟೆ’ ನಾಟಕ ಪ್ರದರ್ಶನವಾಗಲಿದೆ. ಮೈಸೂರು ವಿವಿ ನಿವೃತ್ತ ಪ್ರಾಧ್ಯಾಪಕ ಕೆ.ಸಿ. ಬಸವರಾಜು ಅತಿಥಿಯಾಗಿ ಭಾಗವಹಿಸುವರು ಎಂದರು.
ಮಾ.25ರಂದು ನಿರಂತರ ರಂಗತಂಡದಿಂದ ಕವಿ ದ.ರಾ. ಬೇಂದ್ರೆ ರಚನೆಯ ಸಾಯೋ ಆಟ ನಾಟಕ ಬಿ.ಕೆ. ಕಿರಣ್ ಮತ್ತು ಕೆ.ವೈ. ಗುರುಪ್ರಸಾದ್ ನಿರ್ದೇಶನದಲ್ಲಿ ಸಾದರಪಡಿಸಲಾಗುವುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ ಭಾಗವಹಿಸಲಿದ್ದಾರೆ.
26ರಂದು ಕೆ.ಪಿ. ಲಕ್ಷ್ಮಣ್ ನಿರ್ದೇಶನದಲ್ಲಿ ಶಿವಮೊಗ್ಗದ ರಂಗಾಯಣದ ತಂಡದಿಂದ ವೀ ದಿ ಪೀಪಲ್ ಆಫ್ ಇಂಡಿಯಾ ನಾಟಕ ಪ್ರದರ್ಶನವಾಗಲಿದೆ. ಹಿರಿಯ ರಂಗಕರ್ಮಿ ಇಂದಿರಾ ನಾಯರ್, ಪತ್ರಕರ್ತ ಸುದೇಶ್ ದೊಡ್ಡಪಾಳ್ಯ ಭಾಗವಹಿಸಲಿದ್ದಾರೆ ಎಂದು ಹೇಳಿದರು. ಮಾ.27ರಂದು ಸಂಜೆ 5.30ಕ್ಕೆ ಸುರೇಂದ್ರ ಮತ್ತು ತಂಡದಿಂದ ಡೊಳ್ಳು ಕುಣಿತ ನಡೆಯಲಿದೆ.
6.15ಕ್ಕೆ ಸಮಾರೋಪ ಸಮಾರಂಭ ಜರುಗಲಿದ್ದು, ಮುಡಾ ಆಯುಕ್ತ ಡಾ.ಡಿ.ಬಿ.ನಟೇಶ್, ಹಿರಿಯ ಕಲಾವಿದ ಎಸ್.ರಾಮನಾಥ್, ಬೆಂಗಳೂರಿನ ಹಸಿರು ಫೌಂಡೇಷನ್‌ನ ಹೊನ್ಗಳ್ಳಿ ಗಂಗಾಧರ್ ಭಾಗವಹಿಸುವರು. ಸಂಜೆ 7ಕ್ಕೆ ಉಡುಪಿ ರಂಗಭೂಮಿ ತಂಡದಿಂದ ಮಂಜುನಾಥ್ ಎಲ್.ಬಡಿಗೇರ ನಿರ್ದೇಶನದಲ್ಲಿ ಮೌನೇಶ್ ಬಡಿಗೇರ ರಚನೆಯ ‘ವಿ.ಶಾಂ.ಕೇ’ ನಾಟಕದ ಪ್ರದರ್ಶನ ನಡೆಯಲಿದೆ.