ನಿರಂಜನರ ಬರವಣಿಗೆಯಲ್ಲಿ ಸಾಮಾಜಿಕ ಹಿತ

11 Dwd 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಕನ್ನಡ ಸಾಹಿತ್ಯದ ಮೇರು ಲೇಖಕರಾಗಿದ್ದ ನಿರಂಜನರ ಬರವಣಿಗೆಯಲ್ಲಿ ಪ್ರಗತಿಶೀಲ ಸಾಮಾಜಿಕ ಹಿತವನ್ನು ಕಾಣಬಹುದು ಎಂದು ಸಾಹಿತಿ ಡಾ. ಸಿ. ವೀರಣ್ಣ ಹೇಳಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ, ನಿರಂಜನ ವಿಚಾರ ವೇದಿಕೆ ಸಹಯೋಗದಲ್ಲಿ ರಂಗಾಯಣದಲ್ಲಿ ನಿರಂಜನರ ಜನ್ಮ ಶತಮಾನೋತ್ಸವ ನೆನಪಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ನಿರಂಜನ ಬದಕು- ಸಾಹಿತ್ಯ ಚಿಂತನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಿರಂಜನರು ಇಂದಿಗೂ ಪ್ರಸ್ತುತವಾಗಿದ್ದಾರೆ. ಇಂದಿನ ಬರಹಗಾರರು ಅವರ ಬರವಣಿಗೆಯ ತತ್ವಗಳನ್ನು ಮುಂದುವರಿಸಿಕೊ0ಡು ಹೋಗಬೇಕು ಎಂದರು.

ಹಿರಿಯ ವಿಮರ್ಶಕ ಡಾ. ರಾಜೇಂದ್ರ ಚೆನ್ನಿ ಮಾತನಾಡಿ, ಚಾಲಕ ಶಕ್ತಿಯಾಗಿ ನಿರಂಜನರು ಕನ್ನಡ ಸಾಹಿತ್ಯವನ್ನು ಬೆಳೆಸಿದರು. ಬದುಕಿನಲ್ಲಿ ಅನೇಕ ಸವಾಲುಗಳನ್ನು ಎದುರಿಸಿ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ. ಅವರ ಕಥೆಗಳಲ್ಲಿ ಪ್ರಯೋಗಶೀಲತೆಯನ್ನು ಕಾಣಬಹುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ ಮಾತನಾಡಿ, ನಿರಂಜನರ ಬರಹಗಳು ಸಾಮಾನ್ಯ ಜನಪರ ಹಿತಚಿಂತನೆಗಳನ್ನು ಒಳಗೊಂಡಿವೆ ಎಂದರು.

ನಂತರ ನಡೆದ ಗೋಷ್ಠಿಗಳಲ್ಲಿ ಚಿಂತಕ ಡಾ. ಬಿ.ಆರ್. ಮಂಜುನಾಥ, ಪ್ರಾಧ್ಯಾಪಕ ಡಾ. ರಂಗನಾಥ, ಹಿರಿಯ ಪತ್ರಕರ್ತ ಡಿ. ಉಮಾಪತಿ, ಪ್ರಾಧ್ಯಾಪಕಿ ಡಾ. ಅನಸೂಯಾಕಾಂಬಳೆ ವಿಷಯ ಮಂಡಿಸಿದರು.

ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಅರ್ಜುನ ಗೊಳಸಂಗಿ, ನಿರಂಜನ ವಿಚಾರ ವೇದಿಕೆಯ ಸಂಚಾಲಕ ಎಚ್.ಜಿ. ದೇಸಾಯಿ, ಕೆ. ರಾಮರೆಡ್ಡಿ, ಸಾಹಿತಿ ಡಾ. ಮಾಲತಿ ಪಟ್ಟಣಶೆಟ್ಟಿ, ಪತ್ರಕರ್ತೆ ಡಾ. ಆರ್. ಪೂರ್ಣಿಮಾ, ರಂಜಾನ್ ದರ್ಗಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net