ನೀರಮಾನ್ವಿಯಲ್ಲಿ ಪ್ರಾಚ್ಯಾವಶೇಷಗಳು ಪತ್ತೆಹಚ್ಚಿದ ಸಂಶೋಧಕರ ತಂಡ

Niramanvi Historical Stone
ಮಾನ್ವಿ ತಾಲೂಕಿನ ನೀರಮಾನ್ವಿ ಗ್ರಾಮದಲ್ಲಿ 17-18 ನೇ ಶತಮಾನಕ್ಕೆ ಸೇರಿದ ವೀರಗಲ್ಲು.
Published on

ಮಾನ್ವಿ: ತಾಲೂಕಿನ ನೀರಾಮನ್ವಿ ಗ್ರಾಮದಲ್ಲಿ ಪ್ರಾಚ್ಯಾವಶೇಷಗಳನ್ನು ಇತಿಹಾಸ ಉಪನ್ಯಾಸಕ ಹಾಗೂ ಸಂಶೋಧಕ ಡಾ.ಚನ್ನಬಸಪ್ಪ ಮಲ್ಕಂದಿನ್ನಿ ಇತ್ತೀಚೆಗೆ ಶೋಧಿಸಿದ್ದಾರೆ.

ಗ್ರಾಮದ ಪೂರ್ವದಿಕ್ಕಿಗೆ ನವಶಿಲಾಯುಗ ಕಾಲದ ಬೂದಿಮಣ್ಣು (ಹಾಳುಮಣ್ಣು) ಮತ್ತು ಮಡಕೆಯ ಚೂರುಗಳು ಪತ್ತೆ ಮಾಡಿದ್ದಾರೆ. ದಕ್ಷಿಣ ದಿಕ್ಕಿನ ಕರೆಗುಡ್ಡದಲ್ಲಿ ನವಶಿಲಾಯುಗ ಮತ್ತು ಬೃಹತ್ ಶಿಲಾಯುಗ ಕಾಲಕ್ಕೆ ಸೇರಿದ ಅನೇಕ ಗುಹಾಚಿತ್ರಗಳನ್ನು ಗುರುತಿಸಿದ್ದಾರೆ. ಆದಿ ಮಾನವರು ತಾವು ವಾಸವಿದ್ದ ಗವಿಗಳಲ್ಲಿನ, ಗೂಳಿ, ಸಾರಂಗ, ಆನೆ, ಹುಲಿ, ಜಿಂಕೆ, ನವಿಲು, ಬಾಣದ ಮೊನಚು, ಕುಳಿಗಳು, ಹಲಗುಗಳ ಹುಡುಕಿದ್ದಾರೆ. ಇವುಗಳನ್ನು ಆದಿ ಮಾನವರು ಕಲ್ಲಿನ ಮೇಲೆ ಕುಟ್ಟಿ ಕುಟ್ಟಿ ಚಿತ್ರಿಸಿರುವುದು ವಿಶೇಷ.

ಈಶಾನ್ಯ ದಿಕ್ಕಿನ ಹನುಮಪ್ಪನ ಗುಡ್ಡದಲ್ಲಿ ಒಳಕಲ್ಲುಗಳು, ಪಾದಗಳು, ಮಾರುತಿ ದೇವರು, ಈಶ್ವರಲಿಂಗ, ನಂದಿ, ನಾಗಶಿಲ್ಪ, ಚಕ್ಕರಾಟದ ಮನೆ, ಪುಷ್ಪದಳ ಹಾಗೂ ಗ್ರಾಮದ ಆಸೀರ್‌ಖಾನ್ ಮಸೀದಿಯ ಮುಂಭಾಗದಲ್ಲಿ ಹುಲಿ ಶಿಲ್ಪ ಮೊದಲಾದವುಗಳನ್ನು ಸಂಶೋಧಿಸಿದ್ದಾರೆ.

ಸಂಶೋದಕ ಡಾ.ಚನ್ನಬಸಪ್ಪ ಮಲ್ಕಂದಿನ್ನಿ ಜತೆ ಗ್ರಾಮದ ನರಸಪ್ಪ ಇತಿಹಾಸ ಉಪನ್ಯಾಸಕ, ವೆಂಕಟೇಶ ಮಿಟ್ಟೆಕ್ಯಾಂಪ್, ವೆಂಕಟೇಶನಾಯಕ, ಅಶೋಕ ನಾಯಕ ದಿದ್ದಿಗಿ, ಡ್ರೈವರ್ ನರಸಿಂಹ (ಗುಂಡಾ) ಸಹಯೋಗ ನೀಡಿದ್ದಾರೆ.

5 ವೀರ ಮಹಾಸತಿ ಶಿಲ್ಪಗಳು ಸೇರಿ ಒಟ್ಟು 11 ವೀರಗಲ್ಲುಗಳಿವೆ. ಮಾರುತಿ ದೇವಾಲಯದಲ್ಲಿನ ವೀರಮಹಾಸತಿ ಶಿಲ್ಪ ಕಪ್ಪು ಶಿಲೆಯಾಗಿದೆ. ಇದು ಕ್ರಿ.ಶ. 17-18 ನೇ ಶತಮಾನಕ್ಕೆ ಸೇರಿದ್ದು. ಚಪ್ಪಡಿ ಕಲ್ಲಿನಲ್ಲಿ ವೀರನು ನಿಂತ ಭಂಗಿ ಇದ್ದು, ಆತ ಬಲಗೈಯಲ್ಲಿ ಚಾಕು, ಎಡಗೈಯಲ್ಲಿ ಭರ್ಚಿ ಹಿಡಿದಿದ್ದಾನೆ. ಇಂತಹ ಅನೇಕ ಚಿತ್ರಗಳು ಸಿಕ್ಕಿವೆ. | ಡಾ.ಚನ್ನಬಸಪ್ಪ ಮಲ್ಕಂದಿನ್ನಿ, ಇತಿಹಾಸ ಉಪನ್ಯಾಸಕ, ಸಂಶೋಧಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net