

ಬಸವಕಲ್ಯಾಣ: ಬಸವಣ್ಣನವರು ಭಕ್ತಿಯೋಗದ ಆರಾಧಕರಾಗಿದ್ದರು. ಅಂತೆಯೇ ಭಕ್ತಿ ಭಂಡಾರಿ ಎಂದು ಕರೆಯಲಾಗುತ್ತದೆ ಎಂದು ಗುಣತೀರ್ಥವಾಡಿ ಕಲ್ಯಾಣ ಮಹಾಮನೆಯ ಶ್ರೀ ಬಸವಪ್ರಭು ಸ್ವಾಮೀಜಿ ನುಡಿದರು.
ನಿರಗುಡಿ ಗ್ರಾಮದಲ್ಲಿ ವಿಶ್ವಗುರು ಬಸವಣ್ಣನವರ ಐಕ್ಯ ಮಂಟಪಕ್ಕೆ ರುದ್ರಾಕ್ಷಿ ಕಳಸಾರೋಹಣ ನಿಮಿತ್ತ ಶನಿವಾರ ಏರ್ಪಡಿಸಿದ್ದ ಧರ್ಮಚಿಂತನ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಣ್ಣನವರು ವೈಚಾರಿಕ, ವೈಜ್ಞಾನಿಕ ಮತ್ತು ಭಕ್ತಿ ತಳಹದಿ ಮೇಲೆ ಲಿಂಗಾಯತ ಧರ್ಮವನ್ನು ಅಸ್ತಿತ್ವಕ್ಕೆ ತಂದಿದ್ದಾರೆ. ಹೀಗಾಗಿ ಲಿಂಗಾಯತ ಭಕ್ತಿ ಯೋಗದ ಧರ್ಮವಾಗಿದೆ ಎಂದು ಪ್ರತಿಪಾದಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ನೀಲಾಂಬಿಕೆ ಯೋಗ ಕೇಂದ್ರದ ಪೂಜ್ಯ ಗಾಯತ್ರಿ ಮಾತೆ ಮಾತನಾಡಿ, ಬಸವಣ್ಣನವರು ರಚಿಸಿಕೊಟ್ಟ ಇಷ್ಟಲಿಂಗ ಕೇವಲ ಪೂಜೆಗೆ ಸೀಮಿತವಾಗದೆ ಯೋಗ ಮತ್ತು ಧ್ಯಾನಕ್ಕೂ ಉಪಯುಕ್ತವಾಗಿದೆ. ಪ್ರತಿಯೊಬ್ಬರೂ ಇಷ್ಟಲಿಂಗಧಾರಿಯಾಗಿ ಲಿಂಗ ಯೋಗ ಮಾಡಿದರೆ ಸ್ವಸ್ಥ ಬದುಕು ಸಾಗಿಸಬಹುದು ಎಂದರು.
ಗ್ರಾಮದ ಪ್ರಮುಖ ಹರ್ಷವರ್ಧನ್ ಪಾಟೀಲ್, ಬಹ್ರೇನ್ ದೇಶದ ಬಸವ ಸಮಿತಿಯ ರವಿಕುಮಾರ ಮಾತನಾಡಿದರು.
ನಗರಸಭೆ ಎಇಇ ಶಿವಶರಣಪ್ಪ ಸಜ್ಜನಶೆಟ್ಟಿ ಧ್ವಜಾರೋಹಣ ನೆರವೇರಿಸಿದರು. ಗುರುನಾಥ ಮೂಲಗೆ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಂಧ್ಯಾ ಪಾಟೀಲ್, ಪ್ರಮುಖರಾದ ಅಶೋಕ ಕೇಳಜೆ, ವಿಠ್ಠಲರಡ್ಡಿ ಪಾಟೀಲ್, ದಯಾನಂದ ಜಾಧವ್, ಹರಿಶ್ಚಂದ್ರ ಪಾಟೀಲ್, ಯುವರಾಜ ಪಾಟೀಲ್, ಸತೀಶ ಬೇಡೆಗೆ, ಜ್ಞಾನೇಶ್ವರ ಪಾಟೀಲ್, ಚಂದ್ರಕಾಂತ ಪಾಟೀಲ್ ಉಮಾಪುರ, ಸೂರ್ಯಕಾಂತ ಮೂಲಗೆ, ಉಮೇಶ ಮೂಲಗೆ, ರಾಮ ಮಜ್ಜಿಗೆ ಇತರರಿದ್ದರು.
ಬಸವಜ್ಯೋತಿ ಹಂಗರಗಿಕರ್ ಸ್ವಾಗತಿಸಿದರು. ಗುರುಲಿಂಗಪ್ಪ ಮೂಡುಬಿ ವಂದಿಸಿದರು. ಸಂಗಮೇಶ ತೊಗರಖೇಡೆ ನಿರೂಪಣೆ ಮಾಡಿದರು. ರಂಜನಾ ಭೂಶೆಟ್ಟೆ ಹಾಗೂ ಗುರುಬಸವ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಐಕ್ಯ ಮಂಟಪದ ಮುಂದೆ ಸುಪ್ರಭಾತ ಸಮಯದಲ್ಲಿ ಶ್ರೀ ಗುರುಬಸವೇಶ್ವರ ಪೂಜಾವ್ರತ ಜರುಗಿತು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಸವ ಪಥ ಸಂಚಲನ ನಡೆಯಿತು. ತೊಗಲೂರು ಮತ್ತು ಬೇಲೂರಿನ ಶರಣೆಯರು ಹಾಗೂ ಗುಣತೀರ್ಥ ವಾಡಿ ಮಕ್ಕಳ ಭಜನೆ, ಕೋಲಾಟ ಗಮನ ಸೆಳೆದವು.