

ಬಸವಕಲ್ಯಾಣ: ನಾವು ಮಾಡಿದ ಸತ್ಕಾರ್ಯಗಳ ಠೇವಣಿ ಆಪತ್ಕಾಲದಲ್ಲಿ ಆಸರೆಯಾಗಿ ನಿಲ್ಲುತ್ತದೆ. ಒಳಿತು ಮಾಡುವ ಮನದಲ್ಲಿ ಮಹಾದೇವನ ಆವಾಸವಿರುತ್ತದೆ ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯ ನುಡಿದರು.
ನಿರಗುಡಿ ಗ್ರಾಮದಲ್ಲಿ ವಿಶ್ವಗುರು ಬಸವಣ್ಣನವರ ಪುತ್ಥಳಿ ಅನಾವರಣ ನಿಮಿತ್ತ ಭಾನುವಾರ ಸಂಜೆ ಏರ್ಪಡಿಸಿದ್ದ ಧರ್ಮಸಭೆ ಉದ್ಘಾಟಿಸಿದ ಅವರು, ಬಸವೇಶ್ವರ ಅನ್ನೋದು ಹೆಸರಲ್ಲ, ಮಹಾಮಂತ್ರ. ಹೆಸರು ಮಹಾಮಂತ್ರವಾದಾಗ ಮಾನವ ಮಹಾತ್ಮನಾಗುತ್ತಾನೆ. ಸಕಲ ಜೀವ ರಾಶಿಗಳಿಗೆ ಲೇಸು ಬಯಸಿದ ಬಸವಣ್ಣನವರು ಜಗತ್ತಿನ ಶ್ರೇಷ್ಠ ದಾರ್ಶನಿಕರು ಎಂದು ಬಣ್ಣಿಸಿದರು.
ಧರ್ಮ, ಧರ್ಮಾಚರಣೆ ಬೇರೆ ಬೇರೆಯಾಗಿದ್ದರೂ ಮೂಲ ಉದ್ದೇಶ ಲೋಕಕಲ್ಯಾಣವೇ ಆಗಿದೆ. ಬಸವಣ್ಣನವರು ನೀಡಿದ ಇಷ್ಟಲಿಂಗ ಜ್ಯೋತಿಯಡಿ ಯಾವುದೇ ತಾರತಮ್ಯವಿಲ್ಲದೆ ಬಸವ ಪ್ರಭೆಯಲ್ಲಿ ಎಲ್ಲರೂ ಸೌಹಾರ್ದದಿಂದ ಬದುಕುವುದೇ ನಿಜವಾದ ಶರಣ ತತ್ವ ಎಂದರು.
ಹುಮನಾಬಾದ್ ಶಾಸಕ ಡಾ.ಸಿದ್ದಲಿಂಗಲಿAಗಪ್ಪ ಪಾಟೀಲ್ ಮಾತನಾಡಿ, ವಿಶ್ವಗುರು ಬಸವಣ್ಣನವರ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಗ್ರಾಮಸ್ಥರು ಶ್ರದ್ಧಾ ಭಕ್ತಿಯಿಂದ ಅದ್ದೂರಿಯಾಗಿ ನೆರವೇರಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಗ್ರಾಮದ ಅಭಿವೃದ್ಧಿ ಕೆಲಸಗಳಿಗೆ ಸದಾ ಸಹಕಾರ ಕೊಡುವುದಾಗಿ ಭರವಸೆ ನೀಡಿದರು.
ಮುಖಂಡ ಹರೀಶಚಂದ್ರ ಪಾಟೀಲ್ ಮಾತನಾಡಿದರು. ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಮಲ್ಲಿನಾಥ ಹಿರೇಮಠ, ಉಮೇಶ ಮೂಲಗೆ, ಗುರುನಾಥ ಮೂಲಗೆ, ರಾಮ ಮಜಗೆ, ಗಿರೀಶ ತುಂಬಾ ಇತರರಿದ್ದರು. ಶಿವಕುಮಾರ ಪಾಟೀಲ್ ಮಂಗಳೂರ ನಿರೂಪಣೆ ಮಾಡಿದರು. ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು.
ಶಿಷ್ಟಾಚಾರ ಪಾಲನೆ ಆಗಲಿ: ಜನರಲ್ಲಿ ಯಾವುದೇ ಭೇದ-ಭಾವ ಇಲ್ಲ. ಆದರೆ ನಮ್ಮಲ್ಲಿ(ರಾಜಕಾರಣಿ) ಇದೆಯೇನೋ ಅನಿಸುತ್ತದೆ. ಮೂರ್ತಿ ಅನಾವರಣ ಕಾರ್ಯಕ್ರಮ ಸಂದರ್ಭದಲ್ಲಿ ಕಾರಣಾಂತರದಿಂದ ನಾನು ಬಂದಿಲ್ಲ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಸ್ಪಷ್ಟಪಡಿಸಿದರು. ಕಾರ್ಯಕ್ರಮದ ಅಮಂತ್ರಣ ಪತ್ರಿಕೆಯಲ್ಲಿ ಸಚಿವರು ಮತ್ತು ಶಾಸಕರಿಗೆ ಸಿಗಬೇಕಾದ ಸ್ಥಾನ ಸಿಗಬೇಕು ಎಂದು ಹೇಳಿದ್ದೆ. ಇದರಲ್ಲೇನೂ ಮುಚ್ಚು-ಮರೆ ಇಲ್ಲ. ಶಿಷ್ಟಾಚಾರ ಪಾಲನೆ ಆಗಬೇಕು ಎಂದು ಪರೋಕ್ಷವಾಗಿ ಈ ಕಾರ್ಯಕ್ರಮದಲ್ಲಿ ಬೆಳಗ್ಗೆ ತಮ್ಮ ವಿರುದ್ಧ ಮಾತನಾಡಿದ್ದ ಮಾಜಿ ಸಚಿವರಿಗೆ ತಿರುಗೇಟು ನೀಡಿದರು.
ಯುವಕರು ದುಶ್ಚಟಗಳಿಗೆ ಬಲಿಯಾಗದೆ ಬಸವ ಚಿಂತನೆಯಲ್ಲಿ ಮನಸ್ಸನ್ನು ಅಣಿಗೊಳಿಸಿದ್ದೇ ಆದಲ್ಲಿ ಸದೃಢ ಸಮ ಸಮಾಜ ನಿರ್ಮಾಣವಾಗುವಲ್ಲಿ ಸಂದೇಹವಿಲ್ಲ. ಬಸವ ತತ್ವ ಸಮಾಜವನ್ನು ಸದಾ ಮುನ್ನಡೆಸಲಿ, ನಿರುಗುಡಿ ಜನತೆ ಸಿರಿ ಸೌಖ್ಯದಿಂದ ಬದುಕುವಂತಾಗಲಿ.
| ಶ್ರೀ ಡಾ.ಚನ್ನವೀರ ಶಿವಾಚಾರ್ಯ ಸಂಸ್ಥಾನ ಹಿರೇಮಠ, ಹಾರಕೂಡ