ದೇಶವನ್ನು ಪೂಜಿಸಿದರೆ ಹೆಚ್ಚು ಪುಣ್ಯ

IMG-20230815-WA0134
Published on

ಕಲಬುರಗಿ: ಆಳಂದ ತಾಲೂಕಿನ ಲಾಡಚಿಂಚೋಳಿ ತಾಂಡಾ ಹತ್ತಿರವಿರುವ ಕಲ್ಯಾಣ ಕರ್ನಾಟಕ ಭಾಗದ ಏಕೈಕ ಭಾರತ ಮಾತಾ ಮಂದಿರದಲ್ಲಿ ಮಂಗಳವಾರ ಸ್ವಾತಂತ್ರ್ಯೋತ್ಸವ ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಜೈ ಭಾರತ ಮಾತಾ ಸೇವಾ ಸಮಿತಿ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷರಾದ ಸದ್ಗುರು ಶ್ರೀ ಹವಾ ಮಲ್ಲಿನಾಥ ಮಹಾರಾಜರ( ನಿರಗುಡಿ ಮುತ್ತ್ಯಾ) ಸಾನ್ನಿಧ್ಯದಲ್ಲಿ ದಿನವಿಡೀ ಕಾರ್ಯಕ್ರಮ ಜರುಗಿದವು‌.
ಮಂದಿರದಲ್ಲಿರುವ ಭಾರತಾಂಬೆಯ ಅಮೃತಶಿಲೆಯ ಮೂರ್ತಿಗೆ ಪೂಜೆ, ಅಭಿಷೇಕ, ಮಂಗಳಾರತಿ ನಡೆಯಿತು. ಬಳಿಕ ಪೂಜ್ಯರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಸಾಧಕರ ಸನ್ಮಾನ, ದೇಶಭಕ್ತಿ ಬಿಂಬಿಸುವ ಸಾಂಸ್ಕೃತಿಕ ಚಟುವಟಿಕೆ ನಡೆದವು.
ಈ ವೇಳೆ ಸಂದೇಶ ನೀಡಿದ ಪೂಜ್ಯರು, ದೇಶಕ್ಕಿಂತ ದೊಡ್ಡದು ಯಾವುದೂ ಇಲ್ಲ. ಜಾತಿ, ಮತ, ಪಂಥ, ಪಕ್ಷ ಮರೆತು ಎಲ್ಲರೂ ದೇಶಕ್ಕಾಗಿ ದುಡಿಯಲು, ಮಡಿಯಲು ಸಿದ್ಧರಾಗಬೇಕು. ಪ್ರತಿಯೊಬ್ಬರಿಗೂ ನಾವು ಭಾರತೀಯರು ಎಂಬ ಹೆಮ್ಮೆ, ಅಭಿಮಾನ ಇರಬೇಕು. ರಾಷ್ಟ್ರ ಧರ್ಮ ಪಾಲನೆ ಮೂಲಕ ಸದೃಢ ಭಾರತ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕು. ಎಲ್ಲರೂ ಸಂಘಟಿತರಾಗಬೇಕು. ದೇಶವನ್ನು ಪೂಜಿಸುವ ಕೆಲಸ ಮಾಡಿದರೆ ದೇವರಿಗೆ ಪೂಜಿಸಿದಷ್ಟೇ ಪುಣ್ಯ ಸಿಗಲಿದೆ ಎಂದು ಕರೆ ನೀಡಿದರು.
ಬೆಳಗ್ಗೆಯಿಂದ ತಡರಾತ್ರಿಯವರೆಗೂ ವಿವಿಧೆಡೆಯಿಂದ ಸಹಸ್ರಾರ ಭಕ್ತರು ಮಂದಿರಕ್ಕೆ ಆಗಮಿಸಿ ಭಾರತ ಮಾತೆಗೆ ಶೃದ್ಧೆ, ಭಕ್ತಿಯಿಂದ ಪೂಜಿಸಿ ಗೌರವಿಸಿದರು. ಪೂಜ್ಯರು ಎಲ್ಲರಿಗೂ ಕೇಸರಿ, ಬಿಳಿ, ಹಸಿರು ಬಣ್ಣದ ಶಾಲು ಹೊದಿಸಿ ಗೌರವಿಸಿದರು. ಅಚ್ಚುಕಟ್ಟಾಗಿ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.
ರಾಯಣ್ಣನಿಗೆ ನಮನ: ಇದಕ್ಕೂ ಮುನ್ನ ಶ್ರೀ ಹವಾ ಮಲ್ಲಿನಾಥ ಮಹಾರಾಜರು ಆಳಂದ ಚೆಕ್ ಪೊಸ್ಟ್ ನಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಮೂರ್ತಿಗೆ ಮಾಲಾರ್ಪಣೆ ಮಾಡಿ 226 ನೇ ಜಯಂತಿಯಂದು ಗೌರವ ನಮನ ಸಲ್ಲಿಸಿದರು. ಶಾಸಕ ಬಿ.ಆರ್. ಪಾಟೀಲ್, ಶ್ರೀ ಕರುಣೇಶ್ವರ ಸ್ವಾಮೀಜಿ ಧುತ್ತರಗಾಂವ, ಬೆಳಮಗಿಯ ಬುದ್ಧವಿಹಾರದ ಭಂತೆಜಿ, ವೈಜಿನಾಥ ಝಳಕಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net