580 ನಾಟೌಟ್...!

26BGV_MDLG1
Published on

ಮಲ್ಲು ಬೋಳನ್ನವರ ಮೂಡಲಗಿ

ಒಂದು ದಶಕ, ಮೂರು ಸಾವಿರಕ್ಕಿಂತ ಅಧಿಕ ಅಪಘಾತ, 580 ಸಾವು, 2000ಕ್ಕಿಂತಲೂ ಹೆಚ್ಚು ಜನರಿಗೆ ಗಂಭೀರ ಗಾಯ, ಕೆಲವರು ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾಗಿ ಮರಣ ಶಯ್ಯೆ...

ಇದು ಪಟ್ಟಣ ಸಮೀಪ ಹಾದು ಹೋಗಿರುವ 108 ಕಿಮೀ ಉದ್ದದ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯಲ್ಲಿ ದಶಕಗಳಲ್ಲಿ ಸಂಭವಿಸಿದ ಸಾವು-ನೋವುಗಳ ಆರ್ತನಾದ.

ಕರ್ನಾಟಕ ರಾಜ್ಯ ಹೆದ್ದಾರಿಗಳ ಅಭಿವದ್ಧಿ ಯೋಜನೆ (ಕೆಎಸ್‌ಎಚ್‌ಐಪಿ) ಅಡಿಯಲ್ಲಿ ಅಂದಾಜು 437 ಕೋಟಿ ರೂ. ಅನುದಾನದಲ್ಲಿ 2014 ಡಿಸೆಂಬರ್‌ನಲ್ಲಿ ಈ ಹೆದ್ದಾರಿ ಆರಂಭಗೊಂಡಿದೆ. ಆವಾಗಿನಿಂದ ಇಲ್ಲಿ ನಿತ್ಯ ವಾಹನಗಳ ಸಂಚಾರ ವಿಪರೀತವಾಗಿದೆ. ಇದೇ ಕಾರಣಕ್ಕೆ 2014 ಡಿಸೆಂಬರ್‌ರಿಂದ 2024 ಡಿಸೆಂಬರ್‌ವರೆಗೆ 580ಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಸಾವಿನ ದಾರಿ:ಮೂಡಲಗಿ ಸಮೀಪ ಹಾದು ಹೋಗುವ ಜತ್-ಜಾಂಬೋಟಿ ರಾಜ್ಯ ಹೆದ್ದಾರಿಯು 9 ಮೀಟರ್ ವಿಸ್ತೀರ್ಣವಿದೆ. ಆದರೆ, ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯು 9 ಮೀಟರ್ ರಸ್ತೆ ಅಗಲೀಕರಣವಾಗಬೇಕಿತ್ತು. ಆದರೆ 7 ಮೀಟರ್ ರಸ್ತೆ ನಿರ್ಮಾಣವಾಗಿದೆ ಹಾಗೂ ರಸ್ತೆಯ ಎರಡು ಬದಿಯಲ್ಲಿ ಇರಬೇಕಾದ ಮೂರು ಮೀಟರ್ ಬೈಕ್ ಹಾಗೂ ಪಾದಚಾರಿಗಳಿಗೆ ಬೇಕಿರುವ ರಸ್ತೆಗಳಿಲ್ಲ. ಹೀಗಾಗಿ ಪಾದಚಾರಿಗಳು ರಸ್ತೆ ಪಕ್ಕದಲ್ಲೇ ನಡೆದುಕೊಂಡು ಹೋಗುವುದು ಅನಿವಾರ್ಯವಾಗಿದೆ. ಇದರ ಪರಿಣಾಮ ಅಪಘಾತಗಳು ಹೆಚ್ಚಾಗಿ ಸಾವು-ನೋವುಗಳು ಸಂಭವಿಸುತ್ತಿವೆ.

ಹಂಪ್ಸ್ ಇಲ್ಲದೇ ಅಪಘಾತ ಹೆಚ್ಚಳ:ಗ್ರಾಮ ಹಾಗೂ ನಗರಗಳಲ್ಲಿ ಹಾದು ಹೋಗಿರುವ ರಸ್ತೆ ಮಾರ್ಗದ ಕ್ರಾಸ್‌ಗಳಲ್ಲಿ ಹಂಪ್ಸ್‌ಗಳಿಲ್ಲ. ಈ ಕಾರಣಕ್ಕೆ ವಾಹನಗಳು ವೇಗವಾಗಿ ಸಂಚರಿಸುತ್ತಿವೆ. ಇದರಿಂದ ತಿರುವುಗಳಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಈ ಎಲ್ಲ ಮಾಹಿತಿ ಗೊತ್ತಿದ್ದರೂ ಅಧಿಕಾರಿಗಳು ಮಾತ್ರ ರಸ್ತೆಯಲ್ಲಿ ಹಂಪ್ಸ್ ಅಳವಡಿಸುವ ಕಾರ್ಯ ಮಾಡುತ್ತಿಲ್ಲ. ಇದು ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ.

ತುರ್ತು ಸೇವೆ ಅವಶ್ಯಕ:ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿ ಕಾಮಗಾರಿಯನ್ನು ನಾಸ್ಕಿದ ಅಶೋಕ ಬಿಲ್ಡಕಾನ್ ಪಿವಿಜಿ ಲಿಮಿಟೆಡ್ ಕಂಪನಿ ನಿರ್ಮಾಣ ಮಾಡಿದೆ. 10 ವರ್ಷಗಳ ಅವಧಿಗೆ ಗುತ್ತಿಗೆ ಪಡೆದಿತ್ತು. ಮೂಡಲಗಿ ತಾಲೂಕಿನ ಹಳ್ಳೂರ ಹಾಗೂ ಚಿಕ್ಕೋಡಿ ತಾಲೂಕಿನ ಉಮ್ರಾಣಿಯಲ್ಲಿ ತನ್ನ ಕಚೇರಿ ತೆರೆದು ಈ ಹೆದ್ದಾರಿಯಲ್ಲಿ ಸಂಭವಿಸುವ ಅಪಘಾತಗಳಲ್ಲಿ ಗಾಯಗೊಂಡವರಿಗೆ ತುರ್ತು ವೈದ್ಯಕೀಯ ಸೇವೆ ನೀಡುತ್ತಿತ್ತು. 2024ಕ್ಕೆ ಗುತ್ತಿಗೆ ಅವಧಿ ಮುಗಿದಿರುವ ಕಾರಣಕ್ಕೆ ತುರ್ತು ವೈದ್ಯಕೀಯ ಸೇವೆ ಸ್ಥಗಿತಗೊಳಿಸಿದೆ. ಇದರಿಂದ ಹೆದ್ದಾರಿಯಲ್ಲಿ ಅಪಘಾತಗಳು ಸಂಭವಿಸಿದರೆ ತುರ್ತು ವೈದ್ಯಕೀಯ ಸೇವೆ ಸಿಗದೇ ಸಾವು-ನೋವುಗಳು ಹೆಚ್ಚಿವೆ. 2025 ಜನವರಿ ಹಾಗೂ ೆಬ್ರವರಿ ಎರಡು ತಿಂಗಳಲ್ಲಿ 29 ಅಪಘಾತಗಳು ಸಂಭವಿಸಿ ಇಬ್ಬರು ಮೃತಪಟ್ಟು, 8 ಜನರು ಗಂಭೀರ ಗಾಯಗೊಂಡಿದ್ದಾರೆ. ಹೀಗಾಗಿ ಈ ಹೆದ್ದಾರಿಯಲ್ಲಿ ತುರ್ತು ಸೇವೆ ಒದಗಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ.

ನಿಪ್ಪಾಣಿ-ಮುಧೋಳ ಹೆದ್ದಾರಿಯಲ್ಲಿ ವಾಹನಗಳು ವೇಗವಾಗಿ ಸಂಚರಿಸುತ್ತಿ, ಇದರಿಂದ ಅಪಘಾತಗಳು ಹೆಚ್ಚುತ್ತಿವೆ. ಈಗಿರುವ ರಸ್ತೆಯ ಎರಡು ಬದಿಯಲ್ಲಿ ಮೂರು ಮೀಟರ್ ರಸ್ತೆ ವಿಸ್ತರಣೆ ಮಾಡಬೇಕು ಹಾಗೂ ಕ್ರಾಸ್‌ಗಳಲ್ಲಿ ಹಂಪ್ಸ್ ನಿರ್ಮಾಣ ಮಾಡಿದರೆ ಮಾತ್ರ ಅಪಘಾತಗಳ ಪ್ರಮಾಣ ತಗ್ಗಿಸಬಹುದು. ಮಹಾದೇವ ನಡುವಿನಕೇರಿ, ಗುರ್ಲಾಪೂರ ಗ್ರಾಮದ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net