ಮಾದರಿಯಾದ ಚೀಲನಾಯ್ಕನ ಹಳ್ಳಿಯ ರೈತ ನಿಂಗಪ್ಪಶೆಟ್ಟಿ

ಹಳೇಬೀಡಿನ ತಮ್ಮ ಮನೆಯ ಪಕ್ಕದಲ್ಲಿ ಬೇಸಾಯಕ್ಕಾಗಿ ತಾವು ಸಾಕಿರುವ ಎತ್ತುಗಳನ್ನು ಆರೈಕೆ ಮಾಡುತ್ತಿರುವ ನಿಂಗಪ್ಪಶೆಟ್ಟಿ.
ಹಳೇಬೀಡಿನ ತಮ್ಮ ಮನೆಯ ಪಕ್ಕದಲ್ಲಿ ಬೇಸಾಯಕ್ಕಾಗಿ ತಾವು ಸಾಕಿರುವ ಎತ್ತುಗಳನ್ನು ಆರೈಕೆ ಮಾಡುತ್ತಿರುವ ನಿಂಗಪ್ಪಶೆಟ್ಟಿ.
Published on

ಹಳೇಬೀಡು: ಭೂಮಿತಾಯಿಯನ್ನು ನಂಬಿದರೆ ಎಂದಿಗೂ ಕೈಬಿಡುವುದಿಲ್ಲ ಎಂಬ ಭರವಸೆಯೊಂದಿಗೆ ಕೃಷಿಯಲ್ಲೇ ಜೀವನ ನಡೆಸುತ್ತಿರುವ ರೈತ ನಿಂಗಪ್ಪಶೆಟ್ಟಿ, ಕಷ್ಟಕರ ಸಂದರ್ಭದಲ್ಲಿಯೂ ವ್ಯವಸಾಯ ತೊರೆಯದೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದಾರೆ.

45 ವರ್ಷದಿಂದ ಅವಿರತವಾಗಿ ವ್ಯವಸಾಯದಲ್ಲಿ ತೊಡಗಿರುವ ಪಟ್ಟಣದ ರೈತ ನಿಂಗಪ್ಪಶೆಟ್ಟಿ, ಒಟ್ಟು 7 ಎಕರೆ ಜಮೀನಿನಲ್ಲಿ ತೆಂಗು, ಹಲಸು, ಮಾವಿನ ಮರದ ಪೋಷಣೆಯ ಜತೆಗೆ ಪ್ರಮುಖವಾಗಿ ಜೋಳ, ರಾಗಿ, ಬೂದುಕುಂಬಳ ಮತ್ತು ಸಿಹಿ ಕುಂಬಳಕಾಯಿ ಬೆಳೆಯುತ್ತಿದ್ದಾರೆ. ಆಗಾಗ್ಗೆ ಸಣ್ಣ ಪ್ರಮಾಣದಲ್ಲಿ ತರಕಾರಿಯನ್ನೂ ಬೆಳೆದು ಮನೆ ನಿರ್ವಹಣೆಯ ವೆಚ್ಚವನ್ನು ಸರಿದೂಗಿಸುವ ಮೂಲಕ ತಮ್ಮ ಕುಟುಂಬದಲ್ಲಿ ರೈತ ಕಾಯಕವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.

ಹೋಬಳಿಯ ಶೇ.90ರಷ್ಟು ಕೃಷಿ ಭೂಮಿಯು ನದಿ ಅಥವಾ ಜಲಾಶಯ ಮೂಲದ ನೀರಾವರಿಯಿಂದ ವಂಚಿತವಾಗಿರುವುದರಿಂದ ಇಲ್ಲಿನ ರೈತರು ಮಳೆಯನ್ನೇ ನೆಚ್ಚಿ ವ್ಯವಸಾಯ ಮಾಡುವುದು ಅನಿವಾರ್ಯ. ಪಟ್ಟಣದ ದ್ವಾರಸಮುದ್ರ ಕೆರೆಯಲ್ಲಿ ನೀರು ತುಂಬಿದ್ದರೆ ಕೊಳವೆಬಾವಿಗಳು ಚಾಲ್ತಿಯಲ್ಲಿರುತ್ತವೆ. ಇದರಿಂದಲೇ ರೈತರು ನೀರಿನ ಸೌಲಭ್ಯ ಪಡೆದು ಎಲ್ಲ ಮಾದರಿಯ ಕೃಷಿಯನ್ನು ಮುನ್ನಡೆಸಬೇಕಾಗಿದೆ. ಇಂತಹ ಸಂಕಷ್ಟದ ಸ್ಥಿತಿಯಲ್ಲೂ ಬೇಸಾಯವನ್ನು ನಿರ್ಲಕ್ಷಿಸದೆ ಫಲವತ್ತತೆ ಕಾಪಾಡಿಕೊಂಡು ನಿಂಗಪ್ಪಶೆಟ್ಟಿ ಭೂಮಿ ತಾಯಿಯ ಸೇವೆ ಮಾಡುತ್ತಿದ್ದಾರೆ.

ಕೈ ಹಿಡಿದ ಕುಂಬಳಕಾಯಿ: ಪಟ್ಟಣ ಸಮೀಪದ ಚೀಲನಾಯ್ಕನಹಳ್ಳಿಯಲ್ಲಿರುವ ತಮ್ಮ 5 ಎಕರೆ ಹೊಲದಲ್ಲಿ 100 ತೆಂಗಿನ ಮರಗಳನ್ನು ಬೆಳೆಸಿದ್ದಾರೆ. ಇದರಿಂದ ದೊರಕುವ ಕೊಬ್ಬರಿ ಹಾಗೂ ತೆಂಗಿನಕಾಯಿಯನ್ನು ವರ್ಷಕ್ಕೆರಡು ಬಾರಿ ಮಾರಾಟ ಮಾಡುವ ಮೂಲಕ ಅಲ್ಪ ಪ್ರಮಾಣದ ಲಾಭ ಗಳಿಸುತ್ತಿದ್ದಾರೆ. ಹಲವು ವರ್ಷಗಳಿಂದ ಹೆಚ್ಚು ಆಸಕ್ತಿ ವಹಿಸಿ ಬೂದುಕುಂಬಳ ಹಾಗೂ ಸಿಹಿ ಕುಂಬಳ (ಚೇಣಿಕಾಯಿ)ವನ್ನೂ ಬೆಳೆಯುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಬೇಡಿಕೆಯೂ ಹೆಚ್ಚಾಗಿದೆ. ಕುಂಬಳಕಾಯಿ ತೆಗೆದುಕೊಂಡು ಹೋಗಲು ಪಶ್ಚಿಮ ಬಂಗಾಳದ ವರ್ತಕರು ಹೆಚ್ಚಾಗಿ ಬರುತ್ತಾರೆ.

ಬೆಳೆಯ ಸಮಗ್ರ ಪಾಲು ತಮಗೇ ಬೇಕೆಂದು ಮುಂಗಡವಾಗಿ ಕಾಯ್ದಿರಿಸುವ ಸನ್ನಿವೇಷವೂ ಇದೆ. ಅತಿವೃಷ್ಟಿ ಹಾಗೂ ರಾಸಾಯನಿಕ ಗೊಬ್ಬರ ಬಳಸದೆ, ಸಾವಯವ ಮಾದರಿಯಲ್ಲಿ ತೆಂಗನ್ನು ಕಾಪಾಡಿಕೊಂಡು ಬಂದಿದ್ದಾರೆ. ಬಲಿತ ತೆಂಗಿನಕಾಯಿ, ಸೋಗೆ ಮುಂತಾದವು ಆಗಾಗ್ಗೆ ಮರದಿಂದ ಬೀಳುವ ಕಾರಣ ತರಕಾರಿ ಬೆಳೆಗಳು ನಾಶವಾಗುತ್ತವೆ. ಅನಾವೃಷ್ಟಿಯಿಂದಾಗುವ ಬೆಳೆಹಾನಿಯನ್ನು ತಪ್ಪಿಸಿಕೊಳ್ಳಲು ಕುಂಬಳಕಾಯಿ ಕೃಷಿ ತಮಗೆ ವರದಾನ ಎನ್ನುತ್ತಾರೆ ನಿಂಗಪ್ಪಶೆಟ್ಟಿ.

ಇದಲ್ಲದೆ ಹೊಲದಲ್ಲಿ 5 ಮಾವು ಹಾಗೂ 3 ಹಲಸಿನ ಮರಗಳಿದ್ದು, ಹಂಗಾಮಿನ ಕಾಲದಲ್ಲಿ ಲಭ್ಯವಾಗುವ ಹಣ್ಣುಗಳನ್ನು ಕುಟುಂಬದ ಬಳಕೆಗೆ ಇಟ್ಟುಕೊಂಡು ಸಮೀಪದ ಕೃಷಿಕರಿಗೂ ಹಂಚುತ್ತಾರೆ. ವರ್ಷಕ್ಕೆ ಮನೆಗೆ ಬೇಕಾಗುವಷ್ಟು ಮಾತ್ರ ರಾಗಿ ಬೆಳೆಯುವ ಇವರು ನಿತ್ಯ ರಾಗಿಮುದ್ದೆ ಇಲ್ಲದೆ ಊಟ ಸಮಾಪ್ತಿಯಾಗುವುದಿಲ್ಲ ಎನ್ನುತ್ತಾರೆ. ಪಟ್ಟಣದ ಹೊರವಲಯದಲ್ಲಿ ಎರಡು ಎಕರೆ ಗದ್ದೆ ಇದ್ದು, ಮುಂಗಾರು ಸಮಯದಲ್ಲಿ ಸೂರ್ಯಕಾಂತಿ ಹಾಗೂ ಹಿಂಗಾರಿನಲ್ಲಿ ಅವರೆಕಾಯಿ ಬೆಳೆಯುತ್ತಾರೆ. ಹೊಲ ಹಾಗೂ ಗದ್ದೆಯಲ್ಲಿ ಕೊಳವೆಬಾವಿ ಸೌಲಭ್ಯ ಇರುವುದರಿಂದ ಬೆಳೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿದ್ದು, ದ್ವಾರಸಮುದ್ರ ಕೆರೆಯಲ್ಲಿ ನೀರು ಕಡಿಮೆಯಾದರೆ ಇಲ್ಲಿನ ರೈತರ ವ್ಯವಸಾಯಕ್ಕೆ ತೀವ್ರ ತೊಂದರೆಯಾಗುತ್ತದೆ.

ಬೆನ್ನೆಲುಬಾಗಿರುವ ಜೋಡೆತ್ತು: ತಂದೆ ಕಾಲದಿಂದಲೂ ಎರಡು ಜೊತೆ ಎತ್ತುಗಳನ್ನು ಪೋಷಣೆ ಮಾಡುತ್ತಿರುವ ಇವರು, ವಾರ್ಷಿಕವಾಗಿ ಶೇ.90 ರಷ್ಟು ಉಳುಮೆಗೆ ಎತ್ತುಗಳನ್ನೇ ಬಳಸುತ್ತಾರೆ. ಅನಿವಾರ್ಯ ಪರಿಸ್ಥಿತಿಯಲ್ಲಿ ಮಾತ್ರ ಟ್ರಾೃಕ್ಟರ್ ಬಳಸುವುದನ್ನು ಹೊರತುಪಡಿಸಿ, ಎತ್ತಿನ ಬೇಸಾಯವನ್ನೇ ಪ್ರಧಾನವಾಗಿ ಇರಿಸಿಕೊಂಡಿದ್ದಾರೆ.

ತಂದೆ ಬಸಪ್ಪಶೆಟ್ಟಿ ಅಂದಾಜು 50 ವರ್ಷ ಕೃಷಿ ಕಾಯಕ ಮಾಡಿದ್ದರು. ಆಗಲೂ 4 ಎತ್ತುಗಳಿದ್ದವು. ಹಾಲು/ಮೊಸರಿಗಾಗಿ 3 ಹಸು ಸಾಕಿದ್ದರು. ಈಗಲೂ 4 ಎತ್ತು, 3 ಹಸು ಹಾಗೂ 2 ಕರುವಿನ ಪಾಲನೆ ಮಾಡುತ್ತಿದ್ದೇವೆ. ಅನ್ನದ ಭಾಗ್ಯ ನೀಡುವ ಭೂಮಿ ಮತ್ತು ಜಾನುವಾರುಗಳನ್ನು ಕಾಪಾಡುವುದು ನಮ್ಮ ಕರ್ತವ್ಯ ಎನ್ನುತ್ತಾರೆ ನಿಂಗಪ್ಪಶೆಟ್ಟಿ. ಇವರ ಕೆಲಸಕ್ಕೆ ಪತ್ನಿ ವನಿತಾ ಹಾಗೂ ಪುತ್ರ ಮಂಜುನಾಥ್ ಸಂಪೂರ್ಣ ಸಹಕಾರ ನೀಡುತ್ತಾರೆ. ನಿತ್ಯ ಮುಂಜಾನೆ 4.30ರಿಂದ ಇವರ ಕಾಯಕ ಆರಂಭವಾಗುತ್ತದೆ. ಸಾವಯವ ಗೊಬ್ಬರವೇ ಸಾಕಷ್ಟು ಲಭ್ಯವಾಗುವುದರಿಂದ ರಾಸಾಯನಿಕಗಳನ್ನು ಇವರು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬಳಸುತ್ತಾರೆ.

ತಂದೆ ಕಾಲದಲ್ಲಿದ್ದ ಮರದ ಎತ್ತಿನ ಬಂಡಿಯು ಶಿಥಿಲವಾಗಿ ಮುರಿದುಹೋದ ಕಾರಣ, ಕೃಷಿ ಪರಿಕರ ಹಾಗೂ ಮನೆಗೆ ಬೇಕಾಗುವ ಸಾಮಗ್ರಿಗಳನ್ನು ಸಾಗಿಸಲು ಪ್ರಸ್ತುತ ಟೈರ್ ಗಾಡಿಯನ್ನು ಉಪಯೋಗಿಸುತ್ತಿದ್ದಾರೆ. ತಂದೆ, ತಾತನ ಕಾಲವನ್ನೂ ಸೇರಿಸಿಕೊಂಡರೆ ನಮ್ಮ ಕೃಷಿ ಕಾಯಕ ಶತಮಾನ ಮೀರುತ್ತದೆ. ಅನೇಕ ಏಳು ಬೀಳಿನ ನಡುವೆಯೂ ಸಾಂಪ್ರದಾಯಿಕ ಕೃಷಿಯನ್ನು ನಡೆಸುತ್ತಿದ್ದು, ಮಕ್ಕಳೂ ಇದರಲ್ಲೇ ಮುಂದುವರಿಯಬೇಕು ಎನ್ನುವುದು ನನ್ನ ಆಸೆ ಎನ್ನುತ್ತಾರೆ ನಿಂಗಪ್ಪಶೆಟ್ಟಿ.

ಕೃಷಿಯಿಂದ ಬರುವ ಆದಾಯವನ್ನು ನಾನು ಲೆಕ್ಕ ಮಾಡುವುದಿಲ್ಲ. ಬೆಳೆ ಕೈಗೆ ಬಂದಾಗ ಚಾಲ್ತಿಯಲ್ಲಿರುವ ದರವನ್ನು ಕೊಟ್ಟು ವರ್ತಕರು ಕೊಳ್ಳುತ್ತಾರೆ. ಇದರಿಂದ ಜಮೀನು, ಕೊಳವೆ ಬಾವಿ ಹಾಗೂ ಮನೆಯ ನಿರ್ವಹಣೆ ನಡೆಯುತ್ತದೆ. ಉಳಿದ ಹಣವನ್ನು ಪುನಃ ಕೃಷಿಗೇ ಹಾಕಬೇಕಾಗುತ್ತದೆ. ಹೀಗಾಗಿ ಲಾಭ ನಷ್ಟಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ವರ್ಷಕ್ಕಾಗುವಷ್ಟು ರಾಗಿ ಬೆಳೆದುಕೊಳ್ಳುವುದರಿಂದ ಮುದ್ದೆ, ಅಂಬಲಿಗೆ ತೊಂದರೆ ಇಲ್ಲ. ಜಾನುವಾರುಗಳನ್ನು ಪೋಷಣೆ ಮಾಡಿಕೊಂಡು ಹಾಲಿನ ಕೊರತೆ ನೀಗಿಸಿಕೊಳ್ಳುತ್ತೇವೆ. ಇರುವುದರಲ್ಲೇ ನೆಮ್ಮದಿ ಕಾಣಬೇಕು ಎನ್ನುವುದು ನನ್ನ ಅಭಿಪ್ರಾಯ.

ನಿಂಗಪ್ಪಶೆಟ್ಟಿ ರೈತ, ಹಳೇಬೀಡು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net