ಇರಾನ್​ನಿಂದ ಭಾರತಕ್ಕೆ ಸ್ಥಳಾಂತರಿಸಿ ನಮ್ಮನ್ನು ರಕ್ಷಿಸಿ...

Iran Lead
Published on

ಎನ್​ಆರ್​ಐ ಕಚೇರಿಗೆ ಮೆಡಿಕಲ್​ ಸ್ಟೂಡೆಂಟ್ಸ್​ ಮೊರೆ

ಯುದ್ಧಪೀಡಿತ ದೇಶದಲ್ಲಿ ಸಿಲುಕಿಕೊಂಡ ಕರ್ನಾಟಕದ ವಿದ್ಯಾರ್ಥಿಗಳು

ವಿಜಯವಾಣಿ ಸುದ್ದಿಜಾಲ ಉಡುಪಿ

ಇಸ್ರೇಲ್​-ಇರಾನ್​ ದೇಶಗಳ ನಡುವಿನ ಯುದ್ಧ ಮುಂದುವರಿದಿದ್ದು, ಇರಾನ್​ನ ತೈಲಾಗಾರಗಳ ಮೇಲೆ ಇಸ್ರೇಲ್​ನ ಕ್ಷಿಪಣಿ ಹಾಗೂ ಡ್ರೋಣ್​ ದಾಳಿ ಮುಂದುವರಿದಿದೆ. ಇಸ್ರೇಲ್​ ದಾಳಿಗೆ ಇರಾನ್​ ವಿವಿಧ ಪ್ರದೇಶಗಳಲ್ಲಿ ಬೆಂಕಿಹೊತ್ತು ಉರಿಯುತ್ತಿದ್ದು ದೇಶವಾಸಿಗರು ಹಾಗೂ ಅಲ್ಲಿರುವ ವಿದೇಶಿಗರು ಜೀವಭೀತಿಯ ಆತಂಕದಲ್ಲಿದ್ದಾರೆ.

ಯುದ್ಧದ ಭೀಕರತೆಯಿಂದ ಭಯಕ್ಕೊಳಗಾಗಿರುವ ಕರ್ನಾಟಕದ 9 ವಿದ್ಯಾರ್ಥಿಗಳು ನಮ್ಮನ್ನು ರಕ್ಷಿಸಿ ಭಾರತಕ್ಕೆ ಸ್ಥಳಾಂತರಿಸುವಂತೆ ಭಾರತೀಯ ರಾಯಭಾರಿ ಕಚೇರಿಗೆ ಹಾಗೂ ಕರ್ನಾಟಕದ ಅನಿವಾಸಿ ಭಾರತೀಯ ವೇದಿಕೆಯ ಕರ್ನಾಟಕದ ಕಚೇರಿಗೆ ಮನವಿ ಮಾಡಿದ್ದಾರೆ.

ವೈದ್ಯಕೀಯ ವಿದ್ಯಾರ್ಥಿಗಳು

ಇರಾನ್​ನ ಟೆಹ್ರಾನ್​ನ ಜಫ್ರಾನಿಯಾ ಪ್ರದೇಶದ ತೌಫಿಕ್​ ಎಂಬಲ್ಲಿರುವ 'ಶಾಹಿದ್​ ಬೆಹ್​ಶ್ಟಿ' ಎಂಬ ವೈದ್ಯಕೀಯ ಕಾಲೇಜಿನಲ್ಲಿ ಕರ್ನಾಟಕದ 9 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಯುದ್ಧ ಭೀಕರ ಸ್ವರೂಪ ಪಡೆದಿದ್ದು ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇದೆ. ನಮ್ಮನ್ನು ರಕ್ಷಿಸಿ, ಭಾರತಕ್ಕೆ ಸ್ಥಳಾಂತರಿಸುವಂತೆ ವಿದ್ಯಾರ್ಥಿಗಳು ಕೋರಿದ್ದಾರೆ.

ವಿದ್ಯಾರ್ಥಿಗಳ ಹೆಸರು

1) ನದೀಮ್​ ಹುಸೇನ್​ 2) ಮೀರ್​ ನಾಸರ್​ ಹುಸೇನ್​ 3) ಸೈಯದ್​ ಮೊಹಮ್ಮದ್​ ತಾಕಿ 4) ಮೀರ್​ ಎಸಾಮ್​ ರೆಜಾ 5) ಅಬ್ಬಾಸ್​ ಅಸ್ಕರಿ 6) ಸೈಯದ್​ ಮೊಹ್ಸಿನ್​ ರೆಜಾ 7) ಮರ್ಯಮ್​ ಫಾತಿಮಾ 8) ದಾನಿಯಾ ಉಲ್ಫತ್​ 9) ಅಬ್ಬಾಸ್​ ಅಲಿ.

ಉಡುಪಿ ಜಿಲ್ಲಾಡಳಿತಕ್ಕಿಲ್ಲ ಮಾಹಿತಿ

DC
ಡಾ. ಕೆ.ವಿದ್ಯಾಕುಮಾರಿ

ಇರಾನ್​ ದೇಶದಲ್ಲಿ ಉಡುಪಿ ಜಿಲ್ಲೆಯ ಎಷ್ಟು ಜನರು ಇದ್ದಾರೆಂಬ ಮಾಹಿತಿ ಇಲ್ಲ. ವಿದೇಶಗಳಿಗೆ ಹೋಗುವಾಗ ಯಾವುದೇ ಕುಟುಂಬದವರು ಅಥವಾ ವಿದ್ಯಾರ್ಜನೆಗೆ ಹೋಗುವ ವಿದ್ಯಾರ್ಥಿಗಳು ಜಿಲ್ಲಾಡಳಿತಕ್ಕೆ ಮಾಹಿತಿ ನೀಡುವುದಿಲ್ಲ. ಪಾಸ್​ಪೋರ್ಟ್​ ಮಾಡಿಸಿಕೊಂಡು ನೇರವಾಗಿ ಆಯಾ ದೇಶಗಳಿಗೆ ತೆರಳಿ, ಅಲ್ಲಿನ ರಾಯಭಾರಿ ಕಚೇರಿಗೆ ಮಾಹಿತಿ ನೀಡುತ್ತಾರೆ. ಯುದ್ಧ ಪೀಡಿತ ಇರಾನ್​ನಲ್ಲಿ ತಮ್ಮ ಕುಟುಂಬದ ಸದಸ್ಯರು ಇರುವುದಾಗಿ ಅಥವಾ ಅವರನ್ನು ರಕ್ಷಿಸಿ, ಭಾರತಕ್ಕೆ ಸ್ಥಳಾಂತರಿಸುವಂತೆ ಈವರೆಗೆ ಯಾರೂ ಸಹ ನಮ್ಮನ್ನು ಸಂಪರ್ಕಿಸಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.

ನಾವೇನೂ ಹೇಳುವ ಸ್ಥಿತಿಯಲ್ಲಿಲ್ಲ...

ಅಪಾಯಕ್ಕೆ ಸಿಲುಕಿರುವ 9 ವಿದ್ಯಾರ್ಥಿಗಳಲ್ಲಿ ಓರ್ವನಾದ ಬೆಂಗಳೂರಿನ ನದೀಂ ಹುಸೇನ್​ ಎಂಬಾತನ ಮೊಬೈಲ್​ ಸಂಖ್ಯೆಗೆ ವಿಜಯವಾಣಿ ಮಾತನಾಡಿಸಲು ಪ್ರಯತ್ನಿಸಿತು. ಆದರೆ, ಸಂಪರ್ಕ ಸಾಧ್ಯವಾಗಲಿಲ್ಲ. ಬಳಿಕ ಅದೇ ನಂಬರ್​ನ ವಾಟ್ಸಾಪ್​ಗೆ ಮೆಸೇಜ್​ ಚಾಟ್​ ಮೂಲಕ ಮಾತನಾಡಿಸಿದಾಗ, 'ನಾವೇನೂ ಹೇಳುವ ಸ್ಥಿತಿಯಲ್ಲಿ ಇಲ್ಲ. ಪ್ರತಿಯೊಂದರ ಮೇಲೂ ಇಲ್ಲಿ ನಿಗಾ ಇಡಲಾಗುತ್ತಿದೆ. ಯಾವುದೇ ಮಾಹಿತಿ ಹಂಚಿಕೊಂಡರೂ ನಮಗೆ ಅಪಾಯವಾಗುವ ಸಾಧ್ಯತೆ ಇದೆ. ಯುದ್ಧದಿಂದಾಗಿ ಕರೆಂಟ್​ ಇಲ್ಲ, ಸಿಗ್ನಲ್​ ಸರಿಯಾಗಿ ಇಲ್ಲ. ನಮ್ಮನ್ನು ಸ್ಥಳಾಂತರಿಸುವಂತೆ ಇರಾನ್​ನಲ್ಲಿರುವ ಭಾರತದ ರಾಯಭಾರ ಕಚೇರಿಗೆ ಕೇಳಿಕೊಂಡಿದ್ದೇವೆ' ಎಂದು ಮಾಹಿತಿ ನೀಡಿದ್ದಾನೆ.

ಕೇಂದ್ರ ಸರ್ಕಾರಕ್ಕೆ ಡಾ.ಆರತಿಕೃಷ್ಣ ಪತ್ರ

Dr. Arati Krishna
ಡಾ.ಆರತಿಕೃಷ್ಣ

ಇರಾನ್​ನಲ್ಲಿರುವ ಕರ್ನಾಟಕದ 9 ವೈದ್ಯಕೀಯ ವಿದ್ಯಾರ್ಥಿಗಳು ರಕ್ಷಣೆ ಕೋರಿ ಹಾಗೂ ಭಾರತಕ್ಕೆ ಕರೆಸಿಕೊಳ್ಳಲು ಸಹಕರಿಸುವಂತೆ ವಿನಂತಿಸಿದ ಹಿನ್ನೆಲೆಯಲ್ಲಿ ಅನಿವಾಸಿ ಭಾರತೀಯ (ಎನ್​ಆರ್​ಐ) ವೇದಿಕೆಯ ಕರ್ನಾಟಕದ ಉಪಾಧ್ಯಕ್ಷೆ ಡಾ. ಆರತಿಕೃಷ್ಣ ಕೇಂದ್ರ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್​.ಜೈಶಂಕರ್​ ಅವರಿಗೆ ಪತ್ರ ರವಾನಿಸಿದ್ದಾರೆ. 'ವಿದ್ಯಾರ್ಥಿಗಳನ್ನು ಭಾರತಕ್ಕೆ ಸ್ಥಳಾಂತರಿಸಲು ನಾನು ಸಚಿವರ ಸಹಾಯವನ್ನು ಕೇಳಿದ್ದೇನೆ. ವೈದ್ಯಕೀಯ ಅಧ್ಯಯನಕ್ಕಾಗಿ ಅವರು ಇರಾನ್​ಗೆ ಹೋಗಿದ್ದು, ಅಪಾಯದಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ಟೆಹ್ರಾನ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ವಿದೇಶಾಂಗ ಸಚಿವಾಲಯದ ತುರ್ತು ಸಹಾಯ ಯಾಚಿಸಿದ್ದಾರೆ. ವಿದ್ಯಾರ್ಥಿಗಳ ಹೆಸರು ಮತ್ತು ಸಂಪರ್ಕದ ಮೊಬೈಲ್​ ಸಂಖ್ಯೆಯನ್ನೂ ಸಚಿವರಿಗೆ ರವಾನಿಸಿದ್ದೇನೆ. ಈ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಅಲ್ಲಿರುವ ಕರ್ನಾಟಕದ ಜನರು ರಕ್ಷಣೆ ಕೋರಿಲ್ಲ. ಅಲ್ಲಿನ ರಾಯಭಾರಿ ಕಚೇರಿಗೆ ಕರ್ನಾಟಕದ ಜನರು ಎಷ್ಟಿದ್ದಾರೆ ಎಂಬ ಮಾಹಿತಿಯನ್ನೂ ಕೇಳಿದ್ದೇನೆ' ಎಂದು ಡಾ.ಆರತಿಕೃಷ್ಣ ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಬೇರೆ ವಿದ್ಯಾರ್ಥಿಗಳು ಇರಾನ್​ನಲ್ಲಿರುವ ಮಾಹಿತಿ ನನಗಿಲ್ಲ. ನಾವು 9 ಜನ ಜಫ್ರಾನಿಯಾ ಪ್ರದೇಶದ ತೌಫಿಕ್​ನಲ್ಲಿರುವ 'ಶಾಹಿದ್​ ಬೆಹ್​ಶ್ಟಿ' ಮೆಡಿಕಲ್​ ಕಾಲೇಜಿನಲ್ಲಿ ಓದುತ್ತಿದ್ದೇವೆ. ಬೆಂಗಳೂರಿನ 4-5 ಕುಟುಂಬ ಇಲ್ಲಿರುವ ಸಾಧ್ಯತೆ ಇದೆ. ಮಂಗಳೂರು ಅಥವಾ ಉಡುಪಿ ಜಿಲ್ಲೆಯವರು ಇಲ್ಲಿರುವ ಕುರಿತು ನನಗೆ ಮಾಹಿತಿ ಇಲ್ಲ. | ನದೀಂ ಹುಸೇನ್​. ಇರಾನ್​ನಲ್ಲಿರುವ ಕರ್ನಾಟಕದ ವಿದ್ಯಾರ್ಥಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net