ಹಾಸನ ಜಿಲ್ಲೆಯಲ್ಲಿ 9 ಮಂದಿಗೆ ಕೋವಿಡ್ ಸೋಂಕು

Covid Cases
Published on

ಹಾಸನ: ರಾಜ್ಯದಲ್ಲಿ ಕೋವಿಡ್ ರೂಪಾಂತರಿ ವೈರಸ್ ಜೆಎನ್. 1 ಸೋಂಕು ಪತ್ತೆಯಾದ ನಂತರ ಜಿಲ್ಲೆಯಲ್ಲಿ ಈವರೆಗೆ 119 ಟೆಸ್ಟಿಂಗ್ ಮಾಡಲಾಗಿದೆ. ಈ ಪೈಕಿ 9 ಮಂದಿಯಲ್ಲಿ ಜೆಎನ್-1 ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾ ಮತ್ತು ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ. ಅನಿಲ್ ಕುಮಾರ್ ತಿಳಿಸಿದರು.
ಕೋವಿಡ್ ಮುನ್ನೆಚ್ಚರಿಕೆ ಸಂಬಂಧ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ರ‌್ಯಾಟ್ ಮತ್ತು ಆರ್‌ಟಿಪಿಸಿಆರ್ ಎರಡೂ ಪರೀಕ್ಷೆ ಗಳನ್ನು ಮಾಡಲಾಗುತ್ತಿದೆ. ನಗರದ ಹಿಮ್ಸ್ ಹಾಗೂ ಜಿಲ್ಲೆಯ ಏಳು ತಾಲೂಕು ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲೂ ಟೆಸ್ಟಿಂಗ್ ಆರಂಭಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಶೀತ, ನೆಗಡಿ, ಕೆಮ್ಮು, ಜ್ವರ ಇತ್ಯಾದಿ ರೋಗ ಲಕ್ಷಣ ಇರುವ ಹಾಗೂ 60 ವರ್ಷ ಮೇಲ್ಪಟ್ಟವರು ಮತ್ತು ಇತರೆ ಕಾಯಿಲೆಗಳಿಂದ ಬಳಲುತ್ತಿರುವವರನ್ನು ಟೆಸ್ಟಿಂಗ್ ಮಾಡಲಾಗುತ್ತಿದೆ. ಇಂತಹ ಗುಣ ಲಕ್ಷಣ ಹೊಂದಿರುವವರನ್ನು ಹೆಚ್ಚು ಸ್ಕ್ರೀನಿಂಗ್ ಟೆಸ್ಟ್ ಮಾಡುತ್ತಿದ್ದೇವೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಸದ್ಯ 9 ಸಕ್ರಿಯ ಪ್ರಕರಣಗಳಿವೆ. 9 ಮಂದಿಯಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಅವರೂ ಕೂಡ ಹೋಂ ಐಸೋಲೇಶನ್‌ನಲ್ಲಿ ಇದ್ದಾರೆ. ಎಲ್ಲಾ ಸೋಂಕಿತರು ಆರೋಗ್ಯವಾಗಿದ್ದು, ನಿಧಾನ ಗತಿಯಲ್ಲಿ ಗುಣಮುಖರಾಗುತ್ತಿದ್ದಾರೆ. ಎಲ್ಲರೂ ಹೋಂ ಐಸೋಲೇಶನ್‌ನಲ್ಲಿ ಇದ್ದಾರೆ ಎಂದ ಅವರು, ಇಂದಿನಿಂದ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚು ಮಾಡಲಾಗುವುದು. ದಿನಕ್ಕೆ 350- 400 ಮಂದಿಯನ್ನು ಟೆಸ್ಟಿಂಗ್ ಮಾಡಲಾಗುತ್ತದೆ. ಹಿಮ್ಸ್‌ನಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ. ವಯೋವೃದ್ಧರು, ಗರ್ಭಿಣಿಯರು ಎಚ್ಚರ ವಹಿಸಬೇಕು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net