

ಮಂಗಳೂರು: ಬಂಟ್ವಾಳ ಗ್ರಾಮಾಂತರ ವ್ಯಾಪ್ತಿಯ ಪೊಳಲಿಯಲ್ಲಿ ಜಾತ್ರಾ ಸಂದರ್ಭ ಬೆಲೂನ್ ಮಾರುತ್ತ ಭಿಕ್ಷಾಟನೆಯಲ್ಲಿ ನಿರತರಾಗಿದ್ದ 9 ಮಕ್ಕಳನ್ನು ಮಕ್ಕಳ ತಾಯಂದಿರ ಜತೆಗೆ ಶುಕ್ರವಾರ ರಕ್ಷಣೆ ಮಾಡಲಾಗಿದೆ.
ಚೈಲ್ಡ್‌ಲೈನ್-1098 ದ.ಕ.ಜಿಲ್ಲೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಬಂಟ್ವಾಳ ಶಿಶುಅಭಿವೃದ್ಧಿ ಯೋಜನಾಧಿಕಾರಿ ನೆರವಿನೊಂದಿಗೆ ಮಕ್ಕಳನ್ನು ರಕ್ಷಿಸಿ ಸ್ವಾಧಾರ ಕೇಂದ್ರದಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ.
ಚೈಲ್ಡ್‌ಲೈನ್ ಕೇಂದ್ರ ಸಂಯೋಜಕರಾದ ದೀಕ್ಷಿತ್ ಅಚ್ರಪ್ಪಾಡಿ, ಸಿಬ್ಬಂದಿ ಅಸುಂತಾ, ರೇವತಿ, ಜಯಂತಿ, ಆಕಾಶ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಧ್ಯಾ, ರವಿಕಿರಣ್ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಬ್ಬಂದಿ ಹಾಗೂ ಬಂಟ್ವಾಳ ಗ್ರಾಮಾಂತರ ಠಾಣಾ ಸಿಬ್ಬಂದಿ ಜತೆಗಿದ್ದರು.