ನಿನಾದಾ ಎಸ್.ಹೆಗ್ಡೆ ರಂಗಪ್ರವೇಶಕ್ಕೆ ಸಿದ್ಧ

IMG_20230817_0001
Published on

ಸಾಂಸ್ಕೃತಿಕ ನಗರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿ ‘ಭರತನಾಟ್ಯ ರಂಗಪ್ರವೇಶ’ ಮಾಡಲು ಅಣಿಯಾಗಿದ್ದಾಳೆ. ನಾಟ್ಯ ವಿದುಷಿ ಎಂ.ಪಂಕಜಾ ರಾಮಕೃಷ್ಣಯ್ಯ ಅವರ ಶಿಷ್ಯೆ, ಕುಮಾರಿ ನಿನಾದಾ ಎಸ್.ಹೆಗ್ಡೆ ರಂಗ ಪ್ರವೇಶಕ್ಕೆ ಸಿದ್ಧವಾಗಿದ್ದಾಳೆ.


ಶ್ರೀ ಸರ್ವೇಶ್ವರ ನೃತ್ಯ ಕಲಾಮಂದಿರ ಪಂಕಜಾ ಪ್ರದರ್ಶಕ ಕಲೆಗಳ ಕೇಂದ್ರ ಕಲಾಮಂದಿರದಲ್ಲಿ ಆ.20 ರಂದು ಸಂಜೆ 5.30ಕ್ಕೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ರಂಗ ಪ್ರವೇಶಿಸಲಿದ್ದಾಳೆ. ಇದೇ ವೇಳೆ ಸತತ ಒಂದೂವರೆ ಗಂಟೆ ಕಾಲ ನಾನಾ ನೃತ್ಯಬಂಧಗಳನ್ನು ಪ್ರಸ್ತುತಪಡಿಸುತ್ತಿರುವುದು ವಿಶೇಷವಾಗಿದೆ.

ಬಹುಮುಖ ಪ್ರತಿಭೆಯಾಗಿರುವ ನಿನಾದ ಎಸ್.ಹೆಗ್ಡೆ, ನಗರದ ಆಚಾರ್ಯ ವಿದ್ಯಾಕುಲ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದಾಳೆ. ವಿಜಯನಗರ 3ನೇ ಹಂತದ ನಿವಾಸಿಗಳಾದ ಶ್ರೀಮತಿ ಕೆ.ದೀಪ್ತಿ ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿ ಎಸ್.ಎಸ್.ಸಂದೇಶಕುಮಾರ್ ಅವರ ಎರಡನೆಯ ಪುತ್ರಿ ನಿನಾದಾ. ಬಾಲ್ಯದಿಂದಲೂ ಭರತನಾಟ್ಯದ ಜತೆಗೆ ಕ್ರೀಡೆ, ಯೋಗ, ಸಂಗೀತ ಅಭ್ಯಾಸ ನಡೆಸುತ್ತಿರುವ ಕಲಾಸಕ್ತೆ.
ಈಕೆ ಈಗಾಗಲೇ ಮುಂಬೈನ ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ಮಂಡಲದವರು 2018ರಲ್ಲಿ ನಡೆಸಿದ ಪ್ರಾರಂಭಿಕ್ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಸಿ ದಾಪುಗಾಲು ಇಟ್ಟಿದ್ದಾಳಲ್ಲದೆ, 2019ರಲ್ಲಿ ನಡೆದ ಪ್ರವೇಶಿಕ ಪ್ರಥಮ್ ಪರೀಕ್ಷೆಯಲ್ಲಿಯೂ ಉನ್ನತ ಶ್ರೇಣಿಯ ಸಾಧನೆ ತೋರಿದ್ದಾಳೆ.

2020ರಲ್ಲಿ ನಡೆಸಲಾದ ಪ್ರವೇಶಿಕ ಪೂರ್ಣ ಪರೀಕ್ಷೆಯಲ್ಲಿ ಹಾಗೂ 2021ರಲ್ಲಿ ನಡೆದ ಮಧ್ಯಮ ಪ್ರಥಮ್ ಪರೀಕ್ಷೆಯಲ್ಲಿಯೂ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾಳೆ. ಈಗಾಗಲೇ ಅನೇಕ ವೇದಿಕೆಯಲ್ಲಿ ನೃತ್ಯ ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಾಳೆ.
ಸಾವಿರಾರು ವರ್ಷಗಳ ಹಿರಿದಾದ ಹಿರಿಮೆಯ ಭರತನಾಟ್ಯದ ನಡಿಗೆಗೆ 11 ವರ್ಷದ ಬಾಲೆ ಹೆಜ್ಜೆ ಜೋಡಿಸುತ್ತಿದ್ದಾಳೆ. ಹರಿವ ನದಿಯೊಂದರ ಸಣ್ಣ ತೊರೆಯಂತೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಂಸ್ಕೃತಿ ಸಂಕಥನದ ಭಾಗವಾಗುತ್ತಿದ್ದಾಳೆ.

ಐದರ ಪ್ರಾಯದಲ್ಲಿ ತೊದಲು ನುಡಿವ ಹೊತ್ತಿನಲ್ಲೇ ನಾಟ್ಯದ ನಡೆಗಳ ಪದಗತಿ, ಮುದ್ರೆಗಳು ಮತ್ತು ಲಯಬದ್ಧತೆಗಳನ್ನು ಅರಿತುಕೊಂಡು, ಹೆಜ್ಜೆಗಳನ್ನು ಇಡಲಾರಂಭಿಸಿದ ನಿನಾದಳ ಹೆಸರಿನಲ್ಲಿಯೇ ನಾದದ ಸೌಂದರ್ಯವಿದೆ. ಗೆಜ್ಜೆಗಳು ಹೊಮ್ಮಿಸುವ ತಾಳ-ಮೇಳಗಳ ಸುಶ್ರಾವ್ಯ ಇಡೀ ಮನೆ-ಮನದಂಗಳದಲ್ಲಿ ನಿನಾದಿಸುತ್ತಿದೆ. ಶಾಸ್ತ್ರೀಯ ಸಂಗೀತದ ಜತಿ-ಸ್ವರಗಳ ಕಲಿಕೆಯೊಡನೆ ಭರತ ನಾಟ್ಯದ ಭಾವ-ಭಂಗಿ, ಮುದ್ರೆಗಳನ್ನು ಅರ್ಥೈಸಿಕೊಂಡು, ಗುರುಗಳ ಮುದ್ದಿನ ಶಿಷ್ಯೆಯಾಗಿ, ಈಗ ರಂಗಪ್ರವೇಶಕ್ಕೆ ಅಣಿಯಾಗಿರುವ ನಿನಾದ ಭವಿಷ್ಯದ ಭರವಸೆಯಾಗಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net