ನೀನಾ-60 ಸಂಭ್ರಮ ನಾಳೆ

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಹಿರಿಯ ಕವಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಮೊದಲ ಕವನ ಸಂಕಲನ "ನೀನಾ' ಪ್ರಕಟವಾಗಿ 60 ವರ್ಷ ಪೂರೈಸಿದ್ದರಿಂದ ಅನನ್ಯ ಪ್ರಕಾಶನವು ಡಿ. 25ರಂದು ಬೆಳಗ್ಗೆ 10.30ಕ್ಕೆ ರಂಗಾಯಣ ಸಾಂಸ್ಕೃತಿಕ ಭವನದಲ್ಲಿ ನೀನಾ 60ರ ಸಂಭ್ರಮ ಆಯೋಜಿಸಿದೆ ಎಂದು ಅನನ್ಯ ಪ್ರಕಾಶನದ ಹೇಮಾ ಪಟ್ಟಣಶೆಟ್ಟಿ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದಲಿಂಗ ಪಟ್ಟಣಶೆಟ್ಟಿ ಅವರ 24ನೇ ವಯಸ್ಸಿನಲ್ಲಿ ನೀನಾ ಪ್ರಕಟಗೊಂಡಿದೆ. ಆ ತಲೆಮಾರಿಗೆ ಹೊಸ ಮಾರ್ಗ ಹಾಕಿಕೊಟ್ಟ ಈ ಕೃತಿ ಹೊಸ ನುಡಿಗಟ್ಟು ಹಾಗೂ ವಿಭಿನ್ನ ಸೃಜನಶೀಲ ವಿನ್ಯಾಸ ನೀಡಿದ ಶ್ರೇಯಸ್ಸು ಪಡೆಯುತ್ತದೆ. 60 ವರ್ಷಗಳ ನಂತರವೂ ಸಂಕಲನ ತನ್ನ ಅರ್ಥವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳುತ್ತ ಪ್ರಸ್ತುತವಾಗಿದೆ ಎಂದರು.

ಹೊಸ ರೂಪದಲ್ಲಿ ನೀನಾ ಮತ್ತೆ ಪ್ರಕಟವಾಗಿದ್ದು, 1964ರಲ್ಲಿ ಪ್ರಕಟವಾದಾಗ ಓದಿದವರು, 1988ರಲ್ಲಿ ಓದಿಗೆ ತೆರೆದುಕೊಂಡವರು ಮತ್ತು ನೀನಾ- 60ಕ್ಕೆ ಸ್ಪಂದನೆ ಬರೆಯುವಾಗ ಓದಿದವರು- ಹೀಗೆ ಮೂರು ವಿಭಿನ್ನ ಕಾಲಘಟ್ಟದ ಓದು ಕೂತೂಹಲಕಾರವಾಗಿವೆ. ಈ ಕೃತಿಯ ಮೂರನೇ ಭಾಗದಲ್ಲಿ ಸಂಕಲಿಸಿದ ವಿಮರ್ಶೆ ಹಾಗೂ ಪತ್ರಗಳು ಕೃತಿಯ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಿವೆ. ಖ್ಯಾತನಾಮರ ಪತ್ರಗಳು ಹಾಗೂ ಮೊದಲ ಅವೃತ್ತಿಗೆ ಚಂದ್ರಶೇಖರ ಪಾಟೀಲರು ಬರೆದ ಬ್ಲರ್ಬ್​ಗಳನ್ನು ಸೇರಿಸಲಾಗಿದೆ ಎಂದರು.

ಈ ಕೃತಿಯೊಂದಿಗೆ ಅಂದು ಸಿದ್ದಲಿಂಗ ಪಟ್ಟಣಶೆಟ್ಟಿ ಅವರ ಹೊಸ ಕವನ ಸಂಕಲನ ಹೊಳೆಗೆ ಹೊಳೆದರ್ಥ, ಲೇಖನಗಳಾದ ಸಖ್ಯದ ಆಖ್ಯಾನ, ನುಡಿ ಸೊಗಡು ಹಾಗೂ ಮುಗಿಯದ ಮಾತು ಕೃತಿಗಳು ಸಹ ಬಿಡುಗಡೆಯಾಗಿಲಿವೆ. ಈ ಪುಸ್ತಕಗಳನ್ನು ಸಾಹಿತಿ ರಘುನಾಥ ಚ.ಹ. ಲೋಕಾರ್ಪಣೆ ಮಾಡಲಿದ್ದು, ದೇವು ಪತ್ತಾರ ಹಾಗೂ ಕಥೆಗಾರ್ತಿ ರೂಪಾ ಜೋಶಿ ಪುಸ್ತಕಗಳ ಕುರಿತು ಮಾತನಾಡಲಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net