

ಗಂಗಾವತಿ: ಕ್ಷಯ ಮುಕ್ತ ಸಮಾಜ ನಿರ್ಮಾಣಕ್ಕಾಗಿ ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜಾಗೃತಿ ಅಭಿಯಾನ ಗುರುವಾರ ಹಮ್ಮಿಕೊಳ್ಳಲಾಗಿತ್ತು.
ಕ್ಷಯ ರೋಗ ನಿಯಂತ್ರಣ ವಿಭಾಗದಿಂದ ಹಮ್ಮಿಕೊಂಡಿದ್ದ ಅಭಿಯಾನದಲ್ಲಿ ಕ್ಷಯ ಮುಕ್ತಕ್ಕಾಗಿ ಇಲಾಖೆಯೊಂದಿಗೆ ಸಹಕರಿಸುವಂತೆ ವೈದ್ಯರಿಗೆ ಮನವಿ ಮಾಡಲಾಯಿತು.
ಇಲಾಖೆ ಜಿಲ್ಲಾ ಆರೋಗ್ಯ ಪರಿವೀಕ್ಷಕ ಬಿ.ಗೋಪಾಲ ಕೃಷ್ಣ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಂಭವನೀಯ ಕ್ಷಯ ರೋಗಿಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ರೋಗಿಗಳ ಮಾಹಿತಿ ನೀಡಿದರೆ ಇಲಾಖೆಯಿಂದ ಎಲ್ಲ ರೀತಿಯ ಚಿಕಿತ್ಸೆ ಮತ್ತು ಪರಿಹಾರ ನೀಡಲಾಗುವುದು. ಔಷಧದೊಂದಿಗೆ ಮಾಸಿಕ 500ರೂ.ಗಳ ಸಹಾಯ ನೀಡಲಾಗುವುದು. ನಿಕ್ಷಯ ಮಿತ್ರ ಯೋಜನೆಯಡಿ ಉಚಿತ ಚಿಕಿತ್ಸೆ ಜತೆಗೆ ಪೌಷ್ಟಿಕ ಆಹಾರಗಳ ಕಿಟ್ ವಿತರಿಸಲಾಗುವುದು ಎಂದರು.
ಕ್ಷಯರೋಗ ಆರೋಗ್ಯ ಪರಿವೀಕ್ಷಕ ಎಚ್.ಮಲ್ಲಿಕಾರ್ಜುನ, ವಿವಿಧ ಆಸ್ಪತ್ರೆ ವೈದ್ಯರಾದ ಚಂದ್ರಪ್ಪ, ಎ.ಸೋಮರಾಜು, ಸತೀಶ್ ರಾಯ್ಕರ್, ಮಿಥುನ್ ಶೆಳ್ಳಗಿ, ಅಮರೇಶ ಪಾಟೀಲ್ ಇತರರಿದ್ದರು. ಸಂಶಯಾಸ್ಪದ ಮತ್ತು ದೃಢಪಟ್ಟ ಕ್ಷಯ ರೋಗಿಗಳ ಮಾಹಿತಿ ನೀಡುವಂತೆ ವೈದ್ಯರಿಗೆ ಮನವಿ ಮಾಡಲಾಯಿತು.