ಜನಸಾಮಾನ್ಯರ ನೋವುಗಳಿಗೆ ಸ್ಪಂದಿಸುತ್ತೇವೆ

30 mlv1.
Published on

 ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭರವಸೆ *  ಕಾರ್ಯಕರ್ತರ ಸಭೆ, ಡಿಜಿಟಲ್ ಸದಸ್ಯತ್ವದ ಅಭಿಯಾನಕ್ಕೆ ಚಾಲನೆ

ಮಳವಳ್ಳಿ : ಜನಸಾಮಾನ್ಯರ, ದೀನ ದಲಿತರ ನೋವುಗಳಿಗೆ ಕಾರ್ಯಕರ್ತರು ಸದಾ ಸ್ಪಂದಿಸಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು. ಮಳವಳ್ಳಿಯ ಶಾಂತಿ ಸಮುದಾಯ ಭವನದಲ್ಲಿ ಜೆಡಿಎಸ್ ಪಕ್ಷ ಸೋಮವಾರ ಹಮ್ಮಿಕೊಂಡಿದ್ದವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾರ್ಯಕರ್ತರ ಬೃಹತ್ ಸಭೆ ಮತ್ತು ಸದಸ್ಯತ್ವ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮುಂಬರುವ ಡಿಸೆಂಬರ್‌ನಲ್ಲಿ ನಡೆಯಲಿರುವ ಗ್ರಾಪಂ ಚುನಾವಣೆಗೆ ವೇದಿಕೆ ಸನ್ನದ್ಧಗೊಂಡಿದೆ. ಹಾಗಾಗಿ ನಮ್ಮ ಪಕ್ಷದ ಕಾರ್ಯಕರ್ತರು ಉತ್ಸುಕತೆಯಿಂದ ಪಕ್ಷವನ್ನು ಸಂಘಟಿಸಬೇಕು.

ಮಾಜಿ ಪ್ರಧಾನಿ ದೇವೇಗೌಡ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ನಾಡಿನ ಕೃಷಿಕರು ಹಾಗೂ ಸಾಮಾನ್ಯವರ್ಗದ ಸರ್ವತೋಮುಖ ಅಭಿವೃದ್ಧಿಗೆ ಹಲವು ಯೋಜನೆ,ಪರಿಕಲ್ಪನೆ ರೂಪಿಸಿದ್ದಾರೆ. ಅದನ್ನು ಸಾಕಾರಗೊಳಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದರು.

ಗ್ಯಾರಂಟಿಗಳು ಸಮರ್ಪಕವಾಗಿಲ್ಲ:

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದವರು ನೀಡುತ್ತಿರುವ 5 ಗ್ಯಾರಂಟಿಗಳು ಸಮರ್ಪಕವಾಗಿಲ್ಲ. ಯಾವುದಾದರೂ ಚುನಾವಣೆ ಸಂದರ್ಭದಲ್ಲಿ ಮಾತ್ರ ಮಹಿಳೆಯರ ಖಾತೆಗೆ ಹಣ ಹಾಕುವ ಮೂಲಕ ಜನರ ತೆರಿಗೆ ಹಣವನ್ನು ಬಳಸುವ ವ್ಯವಸ್ಥೆ ಇದೆ. ಇದು ಬಹುದೊಡ್ಡ ದುರಂತ ಎಂದು ನಿಖಿಲ್ ಟೀಕಿಸಿದರು. ಮಾಜಿ ಶಾಸಕ ಡಾ.ಕೆ.ಅನ್ನದಾನಿ ಅವರು ಚುನಾವಣೆಯಲ್ಲಿ ಸೋತಿರಬಹುದು. ಆದರೆ ಅವರು ಮನೆಯೊಳಗೆ ಸೇರಿಲ್ಲ. ಸದಾ ಕ್ಷೇತ್ರದ ಜನರೊಂದಿಗೆ ಇದ್ದಾರೆ. ಜನತಾದಳ ಕಾರ್ಯಕರ್ತರು ಆತ್ಮವಿಶ್ವಾಸ ವನ್ನು ಕುಗ್ಗಿಸಿಕೊಳ್ಳಬಾರದು ಎಂದರು. ನಮ್ಮ ಕುಟುಂಬದವರು ಮಂಡ್ಯ ಜಿಲ್ಲೆಯಲ್ಲಿ ಜನಿಸಿಲ್ಲ ದಿರಬಹುದು. ಆದರೇ ನಮ್ಮ ಕುಟುಂಬಕ್ಕೆ ಇಲ್ಲಿನ ಜನ ಬೆಂಬಲ ನೀಡಿದ ಕಾರಣ ಇಂದು ಕುಮಾರಸ್ವಾಮಿ ಕೇಂದ್ರ ಸಚಿವರಾಗಿದ್ದಾರೆ. ಹಾಗಾಗಿ ಜಿಲ್ಲೆಯಲ್ಲಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಬೇಕಾಗಿದೆ. ಮುಂಬರುವ ಎಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ ಅಗ್ರಗಣ್ಯವಾಗಬೇಕಿದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರ ಸಹಕಾರ ಬಹು ದೊಡ್ಡದು ಎಂದರು.

ಕುಮಾರ ಸ್ವಾಮಿ ಅವರನ್ನು ಮತ್ತೊಮ್ಮೆ ರಾಜ್ಯದ ಸಿಎಂ ಮಾಡಲು ಪಕ್ಷವನ್ನು ಬಲಪಡಿಸಬೇಕಾಗ ಅಗತ್ಯ ಇದೆ. ಇದಕ್ಕಾಗಿ ಸಂಘಟಿತವಾಗಿ ಹೋರಾಟ ಬೇಕು ಎಂದು ನಿಖಿಲ್ ಆಶಿಸಿದರು.

ಕಾಂಗ್ರೆಸ್‌ಗೆ ಸವಾಲು ಹಾಕಿದ ಅನ್ನದಾನಿ

ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಮಾತನಾಡಿ, ತಾಲೂಕಿನಲ್ಲಿ ದೇವೇಗೌಡ, ಕುಮಾರ ಸ್ವಾಮಿ ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಇದೇ ಅತಿಯಾದ ಆತ್ಮವಿಶ್ವಾಸವಾಗಬಾರದು ಎಂದು ಕಾರ್ಯಕರ್ತರಿಗೆ ಹೇಳಿದರು. ಕಳೆದ ಚುನಾವಣೆ ಸಂದರ್ಭದಲ್ಲಿ ಆರ್ಥಿಕ ಸಮಸ್ಯೆ ಯಿಂದಾಗಿ ನಾನು ಸೋಲುವಂತಾಯಿತು ಎಂದು ಬೇಸರ ವ್ಯಕ್ತಪಡಿಸಿದರು. ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ಪಕ್ಷವನ್ನು ಮುನ್ನಡೆಸಲು ಸಮರ್ಥರಾಗಿದ್ದಾರೆ. ತಾಕತ್ತಿದ್ದರೆ ಕಾಂಗ್ರೆಸ್ ನವರು ನಮ್ಮ ಪಕ್ಷದ ಅಶ್ವಮೇಧ ಕುದರೆಯನ್ನು ಕಟ್ಟುವ ತಾಕತ್ತು ತೋರಿಸಲಿ ಎಂದು ಅನ್ನದಾನಿ ಸವಾಲು ಹಾಕಿದರು.

ಇತಿಹಾಸ ಗೊತ್ತಿಲ್ಲದ ಶಾಸಕ: ಮಳವಳ್ಳಿ ಇತಿಹಾಸವೇ ಗೊತ್ತಿಲ್ಲದ ವ್ಯಕ್ತಿ ಶಾಸಕರಾಗಿರುವುದು ಒಂದು ದುರಂತ ಎಂದು ನರೇಂದ್ರಸ್ವಾಮಿ ವಿರುದ್ಧ ಅನ್ನದಾನಿ ಟೀಕಾ ಪ್ರಹಾರ ಮಾಡಿದರು. ತಾಲೂಕಿನ ಮಡಹಳ್ಳಿ ಸೇರಿದಂತೆ ಹಲವು ಏತ ನೀರಾವರಿ ಯೋಜನೆ ಪ್ರಾರಂಭಿಸಿದವರು ಮಾಜಿ ಶಾಸಕ ಬಿ.ಸೋಮಶೇಖರ್. ಅವುಗಳನ್ನು ಪೂರ್ಣ ಗೊಳಿಸಿದ್ದು ನಾನು ಶಾಸಕನಾಗಿದ್ದಾಗ. ಇವುಗಳನ್ನು ನಾನೇ ಮಾಡಿದೆ ಎಂದು ಈಗಿನ ಶಾಸಕ ನರೇಂದ್ರಸ್ವಾಮಿ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಟೀಕಿಸಿದರು. ನನ್ನ ಅವಧಿಯಲ್ಲಿ ಬಿಡುಗಡೆಯಾಗಿದ್ದ ಅನುದಾನದಿಂದ ಆರಂಭಗೊಂಡ ಕ್ಷೇತ್ರದಲ್ಲಿ ಕನಕ ಭವನ, ಬಸವ ಭವನ, ಸವಿತಾ ಸಮಾಜದ ಭವನ ಕಾಮಗಾರಿಗಳು ಈಗ ಅರ್ಧಕ್ಕೆ ನಿಂತಿವೆ. ಇದು ವಿಷಾದನೀಯ ಎಂದರು. ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಸ್ಥಾನ ಗಳಿಸುವ ವ್ಯಾಸಂಗ ಇಲ್ಲದಿದ್ದರೂ ಸಿಎಂ ಸಿದ್ದರಾಮಯ್ಯ ನವರು ನಿಯಮ ಉಲ್ಲಂಘನೆಮಾಡಿ ಇವರಿಗೆ ಅಧಿಕಾರ ನೀಡಿದ್ದಾರೆ. ಇದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ. ಮಂಡಳಿಯ ಅಧಿಕಾರ ಬಳಸಿಕೊಂಡು ರಾಜ್ಯಾದ್ಯಂತ ನಮ್ಮ ಶಾಸಕರು ಲೂಟಿ ಮಾಡುತ್ತಿದ್ದಾರೆಂದು ಎಂದು ನರೇಂದ್ರಸ್ವಾಮಿ ವಿರುದ್ಧ ಟೀಕಾ ಪ್ರಹಾರ ಮಾಡಿದರು.

ತಾಲೂಕಿನಲ್ಲಿ ಪೊಲೀಸ್ ಇಲಾಖೆ ಜನಪರವಾಗಿಲ್ಲ. ಎಲ್ಲರೂ ಶಾಸಕರ ಚೇಲಾಗಳಂತಗೆ ಕೆಲಸ ಮಾಡುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ತಾಲೂಕಿನಲ್ಲಿ ಸಂಪೂರ್ಣವಾಗಿ ಹದ ಗೆಟ್ಟಿದೆ ಎಂದು ಅನ್ನದಾನಿ ಆರೋಪಿಸಿದರು. ಮಾಜಿ ಶಾಸಕ ಸುರೇಶ್ ಗೌಡ, ಹಿಂದುಳಿದ ವರ್ಗದ ಘಟಕದ ರಾಜ್ಯಾಧ್ಯಕ್ಷ ಡಿ.ಜಯರಾಮು, ಜಿಲ್ಲಾಧ್ಯಕ್ಷ ಡಿ.ರಮೇಶ್, ಯುವ ಘಟಕದ ಜಿಲ್ಲಾ ಅಧ್ಯಕ್ಷ ರವಿ, ಉಪಾಧ್ಯಕ್ಷ ಸಿದ್ದಾಚಾರಿ, ತಾಲೂಕು ಅಧ್ಯಕ್ಷ ವಿ.ಎಂ.ವಿಶ್ವನಾಥ್, ಯುವ ಘಟಕದ ಅಧ್ಯಕ್ಷ ಚಂದಳ್ಳಿ ಶ್ರೀಧರ, ಎಸ್ಸಿ, ಎಸ್ಟಿ ಘಟಕ ಅಧ್ಯಕ್ಷ ಕಾಂತರಾಜು, ಪುರಸಭೆ ಉಪಾಧ್ಯಕ್ಷ ಬಸವರಾಜು, ಸದಸ್ಯರಾದ ಟಿ.ನಂದಕುಮಾರ್, ಪ್ರಶಾಂತ, ಸಿದ್ದರಾಜು, ಮುಖಂಡರಾದ ಪುಟ್ಡರಾಮು, ಕಂಬರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net