

ಕೋಲಾರ : ಕರೊನಾ ನಂತರ ಸಂಕಷ್ಟದ ಪರಿಸ್ಥಿತಿಯಲ್ಲೂ ಅಧಿವೇಶನದಲ್ಲಿ ಮಾತನಾಡಲು ಅನೇಕ ವಿಷಯಗಳಿದ್ದರೂ ಕೇವಲ ಸಿಡಿ ವಿಚಾರವಷ್ಟೇ ಚರ್ಚೆಯಾಗಿರುವುದು ಎಷ್ಟು ಸರಿ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರಶ್ನಿಸಿದರು.
ನಗರಕ್ಕೆ ಗುರುವಾರ ರಾತ್ರಿ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಅಧಿವೇಶನದಲ್ಲಿ ಒಂದೇ ವಿಷಯದ ಬಗ್ಗೆ ಚರ್ಚೆ ನಡೆದಿರುವ ವಿಚಾರದಲ್ಲಿ ಜನತೆ ಹಲವು ವ್ಯಾಖ್ಯಾನಗಳನ್ನು ಮಾಡುತ್ತಿದ್ದಾರೆ. ಅಧಿವೇಶನದಲ್ಲಿ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಯೇ ಆಗಿಲ್ಲವೆಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ ಎಂದರು.
ಸಿಡಿ ಪ್ರಕರಣ ನಮ್ಮಂತಹವರಿಗೆ ಬೇಡದ ಸುದ್ದಿ. ಕರೊನಾ ನಂತರ ರಾಜ್ಯದಲ್ಲಿ ಹೆಚ್ಚಿನ ಸಮಸ್ಯೆಗಳಿವೆ. ಜನರು ಸಂಕಷ್ಟದಲ್ಲಿದ್ದಾರೆ. ಮಾತನಾಡಲು ಅನೇಕ ವಿಷಯಗಳಿವೆ. ವೈಯಕ್ತಿಕ ವಿಷಯಗಳ ಬಗ್ಗೆ ಟೀಕೆ-ಟಿಪ್ಪಣಿ ಮಾಡಲು ನನಗೆ ಇಷ್ಟವಿಲ್ಲ ಎಂದರು.
ರಾಜ್ಯದಲ್ಲಿ ಕರೊನಾ ಎರಡನೇ ಅಲೆಯ ಆತಂಕ ವ್ಯಕ್ತವಾಗುತ್ತಿದೆ. ಆದರೆ ರಾಜಕೀಯ ಕಾರ್ಯಕ್ರಮಗಳಲ್ಲಿ ಕರೊನಾ ಮಾರ್ಗಸೂಚಿ ಸಹಜವಾಗಿಯೇ ನಿರ್ಲಕ್ಷ್ಯಕ್ಕೀಡಾಗುತ್ತಿದೆ. ಈ ವಿಚಾರದಲ್ಲಿ ನಾವು ಬದಲಾವಣೆ ಆಗಬೇಕು. ಮಾಸ್ಕ್ ಧರಿಸಿ, ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ಜನರು ಸಹಕಾರ ನೀಡಬೇಕು ಎಂದು ಕೋರಿದರು.
ಸಿನಿಮಾ ಪ್ರಮೋಷನ್ ವಿಚಾರದಲ್ಲಿ ಸರ್ಕಾರಕ್ಕೂ ಅನಿವಾರ್ಯ ಪರಿಸ್ಥಿತಿಯಿದೆ. ಜನರ ಆರೋಗ್ಯ ದೃಷ್ಟಿಯಿಂದ ಸರ್ಕಾರವನ್ನು ದೂಷಿಸಲು ಆಗುವುದಿಲ್ಲ. ನೂರಾರು ಕೋಟಿ ರೂ. ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗುತ್ತದೆ. ಹಾಕಿರುವ ಬಂಡವಾಳವಾದರೂ ನಿರ್ಮಾಪಕರಿಗೆ ಬರಬೇಕಲ್ಲವೇ ಎಂದು ಪ್ರಶ್ನಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ತೂಪಲ್ಲಿ ಚೌಡರೆಡ್ಡಿ, ಒಕ್ಕಲಿಗರ ಸಂಘದ ನಿರ್ದೇಶಕ ವಕ್ಕಲೇರಿ ರಾಮು, ಜಿಪಂ ಮಾಜಿ ಸದಸ್ಯ ಜಿ.ಇ.ರಾಮೇಗೌಡ, ನಗರಸಭೆ ಸದಸ್ಯ ರಾಕೇಶ್, ಮಾಲೂರು ಪುರಸಭೆ ಸದಸ್ಯ ಪರಮೇಶ್, ಗುರುಗಂಜಿಗುರ್ಕಿ ನವೀನ್, ಮುನಿರಾಜು ಮತ್ತಿತರರಿದ್ದರು.