ಧರ್ಮಸ್ಥಳದ ವಿರುದ್ಧ ಪಿತೂರಿಗೆ ಫಂಡಿಂಗ್: ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಶಂಕೆ

Nikhil Kumaraswamy press conference Mandya
Published on

ಮಂಡ್ಯ: ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧ ಷಡ್ಯಂತ್ರ ರೂಪಿಸಲು ವಿದೇಶಗಳಿಂದ ನಿಧಿ ಪಡೆದಿರುವ ಬಗ್ಗೆ ಅನುಮಾನ ಇದೆ. ಇದರ ಬಗ್ಗೆ ಸತ್ಯಾಸತ್ಯತೆ ಹೊರತರಲು ಎನ್‌ಐಎ ತನಿಖೆ ಅವಶ್ಯಕ. ಧರ್ಮಸ್ಥಳ ಪಾವಿತ್ರ್ಯತೆಯನ್ನ ಹಾಳು ಮಾಡಲು ಒಳಸಂಚು ರೂಪಿಸಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಧರ್ಮಸ್ಥಳ ಪ್ರಕರಣದಲ್ಲಿ ಎಸ್‌ಐಟಿ ಸಮರ್ಥವಾಗಿ ತನಿಖೆ ನಡೆಸಿದ್ದರೆ ಸ್ವಾಗತಿಸುತ್ತಿದ್ದೆವು. ಆದರೆ, ಎಸ್‌ಐಟಿ ಸಿದ್ದರಾಮಯ್ಯರ ವೈಯಕ್ತಿಕ ತನಿಖಾ ಸಂಸ್ಥೆಯಂತಾಗಿದೆ. ರಾಜ್ಯದ ಜನರಿಗೆ ಎಸ್‌ಐಟಿ ತನಿಖೆ ಮೇಲೆ ನಂಬಿಕೆ ಇಲ್ಲ. ಎನ್‌ಐಎ ತನಿಖೆಗೆ ವಹಿಸಿದರೆ ಷಡ್ಯಂತ್ರ ಬಯಲಾಗಲಿದೆ. ಷಡ್ಯಂತ್ರಕ್ಕೆ ವಿದೇಶಗಳಿಂದ ನಿಧಿ ಬಂದಿರುವ ಶಂಕೆ ಇದೆ. 800 ವರ್ಷ ಇತಿಹಾಸವಿರುವ ಶ್ರೀ ಕ್ಷೇತ್ರದ ವಿರುದ್ಧ ಕೆಲವರು ಪಿತೂರಿ ನಡೆಸಿದ್ದಾರೆ. ಧರ್ಮಸ್ಥಳ ವಿಚಾರದಲ್ಲಿ ಯಾವ ಆಧಾರದಲ್ಲಿ ಸರ್ಕಾರ ಎಸ್‌ಐಟಿ ರಚನೆಗೆ ನಿರ್ಧಾರ ಮಾಡಿತು?. ಈ ಪ್ರಶ್ನೆ ಲಕ್ಷಾಂತರ ಭಕ್ತರಲ್ಲಿ ಮೂಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.

ಚಿನ್ನಯ್ಯ ಎಂಬ ವ್ಯಕ್ತಿ ತಲೆ ಬುರುಡೆ ತಂದು ಧರ್ಮಸ್ಥಳದಲ್ಲಿ ಮಾಸ್ ಮರ್ಡರ್ ನಡೆದಿದೆ ಎಂದು ಬಿಂಬಿಸಿದನು. ಆತನ ಹಿನ್ನೆಲೆ ತಿಳಿಯದೆ, ಆಲೋಚನೆಯನ್ನೂ ಮಾಡದೆ ಸಿದ್ದರಾಮಯ್ಯ ಎಸ್‌ಐಟಿ ರಚಿಸಿದರು. ಎಚ್.ಡಿ.ಕುಮಾರಸ್ವಾಮಿ ಹೇಳಿದಂತೆ ಎಸ್‌ಐಟಿ ಸಿದ್ದರಾಮಯ್ಯ ಅವರ ವೈಯಕ್ತಿಕ ತನಿಖಾ ತಂಡ ಆಗಿದೆ. ಒಂದಿಬ್ಬರು ದೂರು ಕೊಟ್ಟ ತಕ್ಷಣ ಎಸ್‌ಐಟಿ ರಚನೆ ಮಾಡಿದ್ದಾರೆ. ಮೊದಲು ಎಫ್‌ಎಸ್‌ಎಲ್ ವರದಿ ಪಡೆದ ಬಳಿಕ ವಿಷಯದ ಗಂಭೀರತೆಯನ್ನು ಸರ್ಕಾರ ಅರಿಯಬೇಕಿತ್ತು. ಎಸ್‌ಐಟಿಯನ್ನು ಸರ್ಕಾರ ಯಾವ ರೀತಿ ಬಳಸಿಕೊಂಡಿದೆ ಎಂದು ಎಲ್ಲರಿಗೂ ಗೊತ್ತಿದೆ. ಅದೇ ರೀತಿ ಧರ್ಮಸ್ಥಳ ವಿಚಾರದಲ್ಲಿ ರಚಿಸಿತು ಎಂಬ ಪ್ರಶ್ನೆ ಮೂಡಿದೆ. ಮುಖ್ಯಮಂತ್ರಿಗಳ ಆಪ್ತರು ದೂರು ಕೊಟ್ಟ ತಕ್ಷಣ ಎಸ್‌ಐಟಿ ರಚಿಸಲಾಗಿದೆ ಎಂದು ದೂರಿದರು.

ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಮಾಜಿ ಶಾಸಕರಾದ ಡಾ.ಕೆ.ಅನ್ನದಾನಿ, ಕೆ.ಟಿ.ಶ್ರೀಕಂಠೇಗೌಡ, ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮುಖಂಡ ಅಮರಾವತಿ ಚಂದ್ರಶೇಖರ್, ಮನ್‌ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ, ರಾಜ್ಯ ಹಿಂದುಳಿದ ವರ್ಗದ ಅಧ್ಯಕ್ಷ ಜಯರಾಮು, ಯುವ ಘಟಕದ ಜಿಲ್ಲಾಧ್ಯಕ್ಷ ಕಂಸಾಗರ ರವಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net