

ಮಂಡ್ಯ: ದ್ವೇಷ ರಾಜಕೀಯಕ್ಕೆ ಬುನಾದಿ ಹಾಕಿದ್ದೆ ಕಾಂಗ್ರೆಸ್. ಅದು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಹೆಚ್ಚಾಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಕೇತಗಾನಹಳ್ಳಿ ತೋಟದಲ್ಲಿ ಸರ್ವೇ ಕಾರ್ಯ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟು ವರ್ಷ ದ್ವೇಷ ರಾಜಕೀಯಕ್ಕೆ ಯಾರು ಸೊಪ್ಪು ಹಾಕಿರಲಿಲ್ಲ. ಎರಡು ವರ್ಷದ ಹಿಂದೆ ಕಾಂಗ್ರೆಸ್ ಬಂದ ನಂತರ ಹೆಚ್ಚಾಗಿದೆ. ಎಸ್‌ಐಟಿ, ಲೋಕಾಯುಕ್ತವನ್ನ ದುರುಪಯೋಗಪಡಿಸಿಕೊಂಡ ನಿದರ್ಶನ ಸಾಕಷ್ಟು ಇವೆ. ಕೇತಗಾನಹಳ್ಳಿ ಜಮೀನನ್ನು ಎಚ್‌ಡಿಕೆ ಚಿತ್ರೋದ್ಯಮಿ ಆಗಿದ್ದಾಗ ಖರೀದಿಸಿದ್ದು ಎಂದರು.
ಕಾಂಗ್ರೆಸ್‌ಗೆ ಎಚ್ಡಿಕೆಯೇ ಟಾರ್ಗೆಟ್ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಭದ್ರಾವತಿಯಲ್ಲಿ ಸಂಗಮೇಶ್ ಎಂಬ ಶಾಸಕನ ಪುತ್ರನ ಪದ ಬಳಕೆ ಪ್ರಶ್ನೆ ಯಾರು ಮಾಡುತ್ತಿಲ್ಲ. ಸಿ.ಟಿ.ರವಿ ವಿಚಾರದಲ್ಲಿ ಯಾವ ರೀತಿಯ ಡ್ರಾಮಾ ಕ್ರಿಯೇಟ್ ಮಾಡಿದ್ದರು ಗೊತ್ತಿದೆ. ನಾವು ಎಂದು ದ್ವೇಷದ ರಾಜಕೀಯ ಮಾಡಲ್ಲ ಎಂದು ವಾಗ್ದಾಳಿ ನಡೆಸಿದರು.
ಮಂಡ್ಯದವರು ಛತ್ರಿ ಎಂಬ ಡಿಸಿಎಂ ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿದ ನಿಖಿಲ್, ಕಳೆದ ಚುನಾವಣೆಯಲ್ಲಿ ಪೆನ್ನು, ಪೇಪರ್ ಕೇಳಿದ್ದರು. ಏಳು ಕ್ಷೇತ್ರದಲ್ಲಿ ಆರರಲ್ಲಿ ಕಾಂಗ್ರೆಸ್‌ನ ಶಾಸಕರು ಗೆಲ್ಲಿಸಿದ್ದರು. ಇನ್ನು ಛತ್ರಿ ಎಂದರೆ ಏನು ಎನ್ನುವುದನ್ನ ಮಂಡ್ಯದ ಪ್ರಭಾವಿ ಶಾಸಕರೊಬ್ಬರು ವಿಶ್ಲೇಷಣೆ ಮಾಡಿದ್ದಾರೆಂದು ಪರೋಕ್ಷವಾಗಿ ಮದ್ದೂರು ಶಾಸಕ ಉದಯ್ ವಿಚಾರಕ್ಕೆ ಟಾಂಗ್ ನೀಡಿದರು. ಮಂಡ್ಯ ಜನತೆ ನಿಜಕ್ಕೂ ಸ್ವಾಭಿಮಾನಿಗಳು. ಈಗಾಗಲೇ ಸ್ವಾಭಿಮಾನದ ಹೆಸರಲ್ಲಿ ಮತ ಪಡೆದು ಹೋದವರು ಇದ್ದಾರೆ. ಆದ್ದರಿಂದ ಜನ ಚುನಾವಣೆ ವೇಳೆಗೆ ತಕ್ಕ ಉತ್ತರ ಕೊಡುತ್ತಾರೆ. ರಾಮನಗರ ಹೆಸರು ಬದಲಾವಣೆ ಮಾಡೇ ಮಾಡ್ತೇವೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಎಲ್ಲದರ ಬೆಲೆ ಏರಿಕೆ ಆಗುತ್ತಲೇ ಇದೆ. ಬಜೆಟ್‌ನಲ್ಲಿ ಸಾಲ ದುಪ್ಪಟ್ಟಾಗಿದೆ. ಮಾತೆತ್ತಿದರೇ ಗ್ಯಾರಂಟಿ ಎನ್ನುತ್ತಾರೆ. ಹಿಮಾಚಲ ಪ್ರದೇಶದಲ್ಲಿ ಗ್ಯಾರಂಟಿಗಳಿಂದ ದಿವಾಳಿ ಆಗಿದೆ ಎಂದರು.
ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ಕಂಸಾಗರ ರವಿ, ನಗರಸಭೆ ಅಧ್ಯಕ್ಷ ನಾಗೇಶ್, ಮುಖಂಡ ಬಿ.ಆರ್.ಸುರೇಶ್ ಇತರರಿದ್ದರು.
ಮಕ್ಕಳ ಆರೋಗ್ಯ ವಿಚಾರಣೆ: ಕಲುಷಿತ ಆಹಾರ ಸೇವಿಸಿ ಮಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭೇಟಿಯಾದರು. ಮಕ್ಕಳ ಆರೋಗ್ಯ ವಿಚಾರಿಸಿ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಬಳಿಕ ಮಾತನಾಡಿದ ಅವರು, ಕಲುಷಿತ ಆಹಾರದಿಂದ 45 ಮಕ್ಕಳು ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರಲ್ಲಿ ಹತ್ತಾರು ಮಕ್ಕಳು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿದ್ದಾರೆ. ಆಹಾರ ಸೇವಿಸಿದವರ ಪೈಕಿ ಇಬ್ಬರನ್ನ ಉಳಿಸಿಕೊಳ್ಳಲು ಆಗಲಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಘಟನೆ ಹೇಗಾಯಿತು ಎನ್ನುವುದು ಗೊತ್ತಿಲ್ಲ. ವೈದ್ಯರು, ಪಾಲಕರನ್ನು ಭೇಟಿ ಮಾಡಿದ್ದೇನೆ. ಅಂತೆಯೇ ಮಕ್ಕಳು, ಪಾಲಕರಿಗೆ ಧೈರ್ಯ ತುಂಬಿದ್ದೇನೆ ಎಂದರು.