

ಮಂಡ್ಯ: ಮೇಕೆದಾಟ ವಿಚಾರದಲ್ಲಿ ಕಾಂಗ್ರೆಸ್ ನಡೆಸಿದ್ದು ಪೊಳ್ಳು ಹೋರಾಟ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟೀಕಿಸಿದರು.
ತಾಲೂಕಿನ ಹಳೇಬೂದನೂರು, ಹೊಸಬೂದನೂರು, ಶ್ರೀನಿವಾಸಪುರ, ಚಿಕ್ಕಮಂಡ್ಯ, ಸಾತನೂರು ಗ್ರಾಮಗಳಲ್ಲಿ ರೋಡ್ ಶೋ ನಡೆಸಿ ಮಾತನಾಡಿದ ಅವರು, ಕಾವೇರಿ ನದಿಗೆ ಮೇಕೆದಾಟು ಅಣೆಕಟ್ಟು ಕಟ್ಟುತ್ತೇವೆ ಎಂದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೇಕೆದಾಟು ಅಣೆಕಟ್ಟು ಯೋಜನೆ ಬಗ್ಗೆ ‘ನಮ್ಮ ನೀರು ನಮ್ಮ ಹಕ್ಕು’ ಘೋಷ ವಾಕ್ಯ ಮೊಳಗಿಸಿದ್ದರು. ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ನಾಡಿನ ಜನರ ಮೇಲೆ ಕಿಂಚಿತ್ತು ಕಾಳಜಿ ಇದ್ದರೆ ‘ಐಎನ್‌ಡಿಐಎ’ ಮೈತ್ರಿಕೂಟದಲ್ಲಿರುವ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಜತೆ ಮಾತನಾಡಿ ಮೇಕೆದಾಟು ಅಣೆಕಟ್ಟೆಯನ್ನ ಕಟ್ಟುವ ಮೂಲಕ ತಮ್ಮ ಬದ್ಧತೆ ತೋರಿಸಬೇಕಿತ್ತು ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಎರಡು ಬಾರಿ ಲೋಕಸಭೆಯಲ್ಲಿ ಸೋಲಿಸಿದ್ದು ಇದೇ ಕಾಂಗ್ರೆಸ್ ಪಕ್ಷ. ಅವರು ಪರಿನಿರ್ವಾಣ ಹೊಂದಿದ ಸಂದರ್ಭದಲ್ಲಿ ಮೃತದೇಹವನ್ನು ಹೂಳಲು ಹಾಗೂ ಸ್ಮಾರಕ ನಿರ್ಮಾಣ ಮಾಡಲು ಜಾಗ ನೀಡಲಿಲ್ಲ. ಇವತ್ತು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರಧಾನ ಮಂತ್ರಿ ಮಾಡುತ್ತೇವೆಂದು ಹೇಳುತ್ತಾರೆ. ಆದರೆ ಅವರಿಗೆ ಕಲುಬುರಗಿಯಲ್ಲಿ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿಲ್ಲ. ಇನ್ನೂ ಪ್ರಧಾನಿ ಮಂತ್ರಿಯನ್ನ ಹೇಗೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.
ಗ್ರಾಮ ವಾಸ್ತವ್ಯದ ಮೂಲಕ ಜನಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸಿದ, ನುಡಿದಂತೆ ರೈತರ ಸಾಲ ಮನ್ನಾ ಮಾಡಿದ ಎಚ್.ಡಿ. ಕುಮಾರಸ್ವಾಮಿ ಅವರನ್ನು ಮಂಡ್ಯ ಜಿಲ್ಲೆಯ ಜನತೆ ಕೈ ಹಿಡಿಯಬೇಕು. ಸದಾ ರೈತರ ಒಳಿತಿಗಾಗಿ ಯೋಚಿಸುವ ಮಣ್ಣಿನ ಮಗ ಕುಮಾರಣ್ಣ ಅವರು ರೈತರ ಬೆಂಗಾವಲಾಗಿ ಇರುತ್ತಾರೆ. ದಯಮಾಡಿ ಗೆಲ್ಲಿಸಿಕೊಡುವಂತೆ ಮನವಿ ಮಾಡಿದರು.
ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಉಪಾಧ್ಯಕ್ಷ ಎಂ.ಎಸ್.ರಘುನಂದನ್, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅಶೋಕ್ ಜಯರಾಂ, ತಾಲೂಕು ಜೆಡಿಎಸ್ ಅಧ್ಯಕ್ಷ ಬೂದನೂರು ಸ್ವಾಮಿ, ಮುಖಂಡ ಅಮರಾವತಿ ಚಂದ್ರಶೇಖರ್, ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಸಿ.ಅಶ್ವತ್ಥ್ ಇತರರಿದ್ದರು.