ಎಚ್‌ಡಿಕೆ ಆರೋಗ್ಯದಲ್ಲಿ ಸಮಸ್ಯೆ ಇಲ್ಲ: ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಹೇಳಿಕೆ

Nikhil information on HDK health Mandya
Published on

ಮಂಡ್ಯ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಗ್ಯವಾಗಿದ್ದಾರೆ. ಯಾವುದೇ ಸಮಸ್ಯೆ ಇಲ್ಲ. ಆದ್ದರಿಂದ ಯಾರು ಕೂಡ ಆತಂಕ ಪಡಬೇಕಾಗಿಲ್ಲ ಎಂದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಹೇಳಿದರು.

ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಸೋಮೇಶ್ವರಸ್ವಾಮಿ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಮತ್ತು ಶಿಖರ ಕಳಸ ಪ್ರತಿಷ್ಠಾಪನಾ ಸಮಾರಂಭದಲ್ಲಿ ಮಾತನಾಡಿದ ಅವರು, ಎರಡು ವಾರ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಪರವಾಗಿ ನಾನು ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಎಚ್‌ಡಿಕೆ ಅವರ ಬಗ್ಗೆ ಯಾರು ಕೂಡ ಆತಂಕ ಪಡುವ ಅಗತ್ಯ ಇಲ್ಲ ಎಂದರು.

ಎಚ್‌ಡಿಕೆ ಅರೋಗ್ಯ ಸರಿ ಇಲ್ಲವೆಂದು ರಾಜ್ಯದೆಲ್ಲೆಡೆ ಚರ್ಚೆ ಶುರುವಾಗಿದೆ. ಸೋಮೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ನಿಂತು ಒಂದು ಮಾತನ್ನು ತಿಳಿಸುತ್ತೇನೆ. ಅವರ ತಂದೆ ತಾಯಿ ಆಶೀರ್ವಾದ, ಭಗವಂತನ ಕೃಪೆ ಜತೆಯಲ್ಲಿ ನಿಮ್ಮೆಲ್ಲರ ಪ್ರೀತಿಯ ಹಾರೈಕೆಯಿಂದ ಕುಮಾರಣ್ಣ ಆರೋಗ್ಯವಾಗಿದ್ದಾರೆ. ಯಾವುದೇ ಆರೋಗ್ಯದ ಸಮಸ್ಯೆ ಇಲ್ಲ. ಎಚ್‌ಡಿಕೆ 2ನೇ ಬಾರಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಮೂರು ವಿದ್ಯುತ್ ಉತ್ಪಾದಕ ಘಟಕ ಮತ್ತು ನೀರಾವರಿಗೆ 200 ಕೋಟಿ ರೂ.ಗೂ ಹೆಚ್ಚು ಅನುದಾನವನ್ನು ನೀಡಿ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಕುಮಾರಣ್ಣ ಅವರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.

ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಮುಖಂಡ ಶಂಕರೇಗೌಡ ಇತರರಿದ್ದರು.

ನಂತರ ತಾಲೂಕಿನ ಮಲ್ಲನಾಯಕನ ಕಟ್ಟೆ ಗ್ರಾಮದಲ್ಲಿ ಕಬಡ್ಡಿ ಪಂದ್ಯದ ವೇಳೆ ವೀಕ್ಷಕರ ಗ್ಯಾಲರಿ ಕುಸಿದು ಬಿದ್ದು ಸಾವನ್ನಪ್ಪಿದ ಪಾಪಣ್ಣಚಾರಿ ಅವರ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ತಿಳಿಸಿ ಧೈರ್ಯ ತುಂಬಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net