

ವಿಜಯವಾಣಿ ಸುದ್ದಿಜಾಲ ಧಾರವಾಡ
ಬಸವಣ್ಣನವರ ಸಮಕಾಲೀನ ಶ್ರೇಷ್ಠ ವಚನಕಾರರಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರು ಒಬ್ಬರು. ಇಂಥ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಇಂದಿನ ಸಮಾಜ ಅಳವಡಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಹೇಳಿದರು.
ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶರಣರ ಸಂದೇಶಗಳನ್ನು ಸಾರುವ, ಸಮಾಜ ಕಟ್ಟುವ ಕೆಲಸವನ್ನು ನಿಜಶರಣ ಅಂಬಿಗರ ಚೌಡಯ್ಯ ಮಾಡಿದ್ದಾರೆ. ನಾವೆಲ್ಲ ಒಂದೇ ತಾಯಿಯ ಮಕ್ಕಳಾದರೂ ಬೇರೆ ಕೆಲಸಗಳಿಂದ ಬೇರೆ ಬೇರೆ ಜಾತಿಯನ್ನಾಗಿ ಮಾಡಿಕೊಂಡಿದ್ದೇವೆ ಎಂದರು.
ಜಿಲ್ಲಾ ಗಂಗಮತಸ್ಥರ ಹಿತರಕ್ಷಕ ಸಂಘದ ಅಧ್ಯಕ್ಷ ಅರವಿಂದ ಏಗನಗೌಡರ ಮಾತನಾಡಿ, ಅಂಬಿಗರ ಚೌಡಯ್ಯನವರು 12ನೇ ಶತಮಾನದ ಶ್ರೇಷ್ಠ ವಚನಕರರಾಗಿದ್ದರು. ಶರಣರು ನಿಜವಾದ ಧರ್ಮ, ತತ್ವ, ಸಿದ್ಧಾಂತ, ನೇರ ನುಡಿಗಳಿಂದಾಗಿ ಪ್ರಸಿದ್ಧರಾಗಿದ್ದರು. ಜಾತಿ, ಭೇದ ಇಲ್ಲವೆಂದು ಬದುಕಿದರು. ಜಾತಿ ತಾರತಮ್ಯ, ಮೌಢ್ಯದ ವಿಚಾರಗಳನ್ನು ವಿರೋಽಸಿದ್ದರು ಎಂದರು.
`ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ಜೀವನ ಚರಿತ್ರೆ' ಕುರಿತು ಕಲಘಟಗಿಯ ಚಿಂತಕ ಹನುಮಂತಪ್ಪ ಸರಾವರಿ ವಿಶೇಷ ಉಪನ್ಯಾಸ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌರಿ ಆರ್.ಡಿ. ವಂದಿಸಿದರು.
ಧಾರವಾಡ ಜಿಲ್ಲಾ ಗಂಗಮತಸ್ಥರ ನೌಕಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಗುರು ಮತ್ತೂರ, ಜಿಲ್ಲಾ ಗಂಗಮತಸ್ಥರ ಹಿತರಕ್ಷಕ ಸಂಘದ ಉಪಾಧ್ಯಕ್ಷ ಗುರಪ್ಪ ಸಿದ್ದಪ್ಪ ಜಿಡ್ಡಿ, ಜಿಲ್ಲಾ ಗಂಗಮತಸ್ಥರ ಹಿತರಕ್ಷಕ ಸಂಘದ ಗೌರವಾಧ್ಯಕ್ಷ ಮನೋಜಕುಮಾರ ಕರ್ಜಗಿ, ಕಾರ್ಯದರ್ಶಿ ಅಶೋಕಕುಮಾರ ಬೆಸ್ತ, ಖಜಾಂಚಿ ಯಲ್ಲಪ್ಪ ಸುಣಗಾರ, ತಾಲೂಕು ಅಧ್ಯಕ್ಷ ಮಂಜುನಾಥ ಭೀಮಕ್ಕನವರ ವೇದಿಕೆಯಲ್ಲಿದ್ದರು.
ಸಮುದಾಯದ ಹಿರಿಯರು, ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.