

ಮೂಡಲಗಿ: ಜ್ಞಾನ ಮತ್ತು ಮುಕ್ತಿ ಪಡೆಯಬೇಕಾದರೆ ಗುರು ಮುಖ್ಯ ಎಂದು ಆದಿಚುಂಚನಗಿರಿ ಜಗದ್ಗುರು ನಿರ್ಮಲಾನಂದ ಸ್ವಾಮೀಜಿ ಹೇಳಿದರು.
ತಾಲೂಕಿನ ಹುಣಶ್ಯಾಳ ಪಿಜಿಯ ಸಿದ್ಧಲಿಂಗ ಕೆವಲ್ಯಾಶ್ರಮದಲ್ಲಿ ನಿಜಗುಣ ದೇವ ಸ್ವಾಮೀಜಿ ಸಾರಥ್ಯದಲ್ಲಿ ಜರುಗುತ್ತಿರುವ ಸಿದ್ದಲಿಂಗ ಸ್ವಾಮೀಜಿ ಜಾತ್ರೆ ಹಾಗೂ 26ನೇ ಸತ್ಸಂಗ ಸಮ್ಮೇಳನ ಸಮಾರಂಭಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು. ಸಂತರು ಇದ್ದಲ್ಲಿ ಸಂತಸ ಇರುತ್ತದೆ. ಸಂಪತ್ತು ಇದ್ದಲ್ಲಿ ಸಂತಾಪ ಇರುತ್ತದೆ. ನಿಜವಾದ ಸಂಪತ್ತು, ಸಂತಸ ಸಿಗುವುದು ಗುರುವಿನಲ್ಲಿ ಮಾತ್ರ. ಉತ್ತರ ಕರ್ನಾಟಕದಲ್ಲಿ ಸಂತರು, ಮಠಾಧೀಶರು ಅಧಿಕ. ಆಧ್ಯಾತ್ಮಿಕ ಸಾಧನೆಗೆ ಜ್ಞಾನ ಅತ್ಯಂತ ಅವಶ್ಯ ಎಂದರು.
ನಿಜಗುಣ ದೇವ ಸ್ವಾಮೀಜಿ ಶ್ರೀಮಠದಲ್ಲಿ ಅನ್ನದಾಸೋಹದ ಜತೆಗೆ ಜ್ಞಾನದಾಸೋಹ ನೀಡಿ ಭಕ್ತರು ಹಾಗೂ ಜನರ ಮನಸ್ಸು ಗಳಿಸಿದ್ದಾರೆ. ಇಂತಹ ಸಮಾರಂ
ಭದಲ್ಲಿ ನಾಡಿನ ಶ್ರೇಷ್ಠ ಸಂತರು, ಮಹಾತ್ಮರು, ಅನುಭಾವಿಗಳ ಮಾತು ಕೇಳುವುದೇ ಪುಣ್ಯ. ಗುರು ಮತ್ತು ಶಿಷ್ಯನ ಸಂಬಂಧ ಗಾಢವಾದದ್ದು. ನಿಜಗುಣದೇವರು ಸಮಾಜಸೇವೆ ಹಾಗೂ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಶ್ರೀಮಠವನ್ನು ಉತ್ತುಂಗಕ್ಕೆ ಒಯ್ಯುತ್ತಿದ್ದಾರೆ ಎಂದರು.
ನಿಜಗುಣ ದೇವ ಸ್ವಾಮೀಜಿಯಿಂದ ಆದಿಚುಂಚನಗಿರಿಯ ನಿರ್ಮಲಾನಂದ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು. ಚಿತ್ರದುರ್ಗದ ಶಿವಲಿಂಗಾನಂದ ಸ್ವಾಮೀಜಿ, ಬೆಂಗಳೂರಿನ ಚಿಂಚನಗಿರಿಯ ಸೌಮ್ಯನಾಥ ಸ್ವಾಮೀಜಿ, ಹುಬ್ಬಳ್ಳಿಯ ಶಾಂತಾಶ್ರಮದ ಅಭಿನವ ಸಿದ್ಧಾರೂಢ ಸ್ವಾಮೀಜಿ ಇತರರಿದ್ದರು. ಬೀದರಿನ ಗಣೇಶ ಮಹಾರಾಜರು ನಿರೂಪಿಸಿದರು.