ನಿಜಶರಣ ಅಂಬಿಗರ ಚೌಡಯ್ಯ

06 10 2025_BGR RURAL_PAGE_2
ಹೊಸಕೋಟೆಯ ಬೆಸ್ತರ ಪೇಟೆಯ ಮುಖ್ಯ ರಸ್ತೆಯಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಪುತ್ಥಳಿಯನ್ನು ಶಾಸಕ ಶರತ್​ ಬಚ್ಚೇಗೌಡ ಅನಾವರಣಗೊಳಿಸಿದರು. ಮಾಜಿ ಸಚಿವ ಪ್ರಮೋದ್​ ಮದ್ವರಾಜ್​, ಜಗದ್ಗುರು ಶಾಂತಾಭೀಷ್ಮಚೌಡಯ್ಯಸ್ವಾಮೀಜಿ, ವಿಧಾನ ಪರಿಷತ್​ ಸದಸ್ಯ, ರಾಜ್ಯ ರೇಷ್ಮೆ ನಿಗಮದ ಅಧ್ಯಕ್ಷ ಗಂಗಾಧರ್​, ನಿಕಟ ಪೂರ್ವ ಅಧ್ಯಕ್ಷ ಮೋಹನ್​ ಇದ್ದರು.
Published on

ಹೊಸಕೋಟೆ : ಸಮಾಜದಲ್ಲಿ ತಾರತಮ್ಯ, ಅಸಮಾನತೆ ಹಾಗೂ ದುಷ್ಟರ ಆರ್ಭಟ ಹೆಚ್ಚಾದಾಗಲೆಲ್ಲ ಬುದ್ದ, ಬಸವಣ್ಣ, ಡಾ.ಅಂಬೇಡ್ಕರ್​ ಅವರಂಥಹ ಮಹನೀಯರು ಹುಟ್ಟಿ ಸಮಾಜವನ್ನು ಸುಧಾರಿಸಿದ್ದಾರೆ. ಅವರ ಸಾಲಿನಲ್ಲಿ ನಿಜಶರಣ ಅಂಬಿಗಚೌಡಯ್ಯ ಕೂಡ ಇದ್ದಾರೆ ಎಂದು ಶಾಸಕ ಶರತ್​ ಬಚ್ಚೇಗೌಡ ಬಣ್ಣಿಸಿದರು. ನಗರದ ಬೆಸ್ತರ ಪೇಟೆಯ ಮುಖ್ಯ ರಸ್ತೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶರಣ ಅಂಬಿಗರ ಚೌಡಯ್ಯ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವಣ್ಣ ಸಾಮಾಜಿಕವಾಗಿ ಕ್ರಾಂತಿಕಾರಕ ಬದಲಾವಣೆ ತರಲು ಅನುಭವ ಮಂಟಪದಲ್ಲಿ ಸ್ಥಾಪಿಸಿದ್ದ ಸಾಮಾಜಿಕ ಮತ್ತು ಧಾರ್ಮಿಕ ಸಂಸತ್​ನಲ್ಲಿ ಅಲ್ಲಮ ಪ್ರಭು, ಅಕ್ಕಮಹಾದೇವಿ ಅವರೊಂದಿಗೆ ಇದ್ದ 63 ಮಂದಿ ಸದಸ್ಯರಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಸಹ ಒಬ್ಬರು. ಸಮಾಜದಲ್ಲಿ ಸಮಾನತೆಗೆ, ಕಟ್ಟುಪಾಡುಗಲನ್ನು ನೇರ ನುಡಿಯುಂದ ಪ್ರಶ್ನಿಸುತ್ತಿದ್ದರು. ಸತ್ಯ ಹಾಗೂ ಪ್ರಾಮಣಿಕತೆಯ ಬಸವಣ್ಣ ಅವರ ಪ್ರೀತಿಯ ಶರಣರಾಗಿದ್ದರು ಎಂದರು.

ಒಂದು ಸಮುದಾಯ ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕವಾಗಿ ಮುಂದೆ ಬರಲು ವಿದ್ಯೆಯೊಂದಿಗೆ ಕೌಶಲತೆ ಬೇಕು. ಆದ್ದರಿಂದ ಯುವ ಸಮುದಾಯ ವಿದ್ಯಾಭ್ಯಾಸ ಹಾಗೂ ಕೌಶಲತೆ ಬಗ್ಗೆ ಹೆಚ್ಚು ಗಮನಹರಿಸುವ ಮೂಲಕ ಸಮುದಾಯಾಭಿವೃದ್ಧಿಗೆ ಸಕರಿಸಿ ಎಂದು ಕರೆ ನೀಡಿದರು.

ಮಾಜಿ ಸಚಿವ ಪ್ರಮೋದ್​ ಮದ್ವರಾಜ್​ ಮಾತನಾಡಿ, ರಾಜ್ಯದಲ್ಲಿ ಬೆಸ್ತ ಸಮುದಾಯ 70ಕ್ಕೂ ಹೆಚ್ಚು ಶಾಸಕರನ್ನು ಆರಿಸುವ ಶಕ್ತಿ ಹೊಂದಿದೆ. ಆದರೆ ವಿಧಾನ ಸೌಧದಲ್ಲಿ ನಮ್ಮ ಸಮುದಾಯದ ಕೇವಲ 10 ಶಾಸಕರು ಇಲ್ಲದಿರುವುದು ಬೇಸರದ ಸಂಗತಿ. ಸಮುದಾಯದ ಅಭಿವೃದ್ಧಿಗೆ ಬೇರೆಯವರ ಮುಂದೆ ಬಿೆ ಬೇಡುವ ಪರಿಸ್ಥಿತಿ ಬಂದೊದಗಿದೆ. ಮುಂದಿನ ದಿನಗಳಲ್ಲಿ ಕನಿಷ್ಟ 10ಜನ ಶಾಸಕರನ್ನಾದರೂ ಆಯ್ಕೆ ಮಾಡುವಮೂಲಕ ಸಮುದಾಯವನ್ನು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಸದೃಢಗೊಳಿಸಲು ಕೆಲಸ ಮಾಡೋಣ ಎಂದರು. ನಗರಸಭೆ ಸದಸ್ಯ ಗೌತಮ್​, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೇಶವ್​ ಮೂರ್ತಿ, ನಿದೇಶಕ ಡಾ.ಎಚ್​.ಎಂ.ಸುಬ್ಬರಾಜ್​, ಜಿಲ್ಲಾ ಪಂಚಾಯತಿ ಸದಸ್ಯ ವೈ.ಎಸ್​.ಮಂಜುನಾಥ್​, ಮುಖಂಡರಾದ ಧರ್ಮಪ್ಪ, ಶಿವಣ್ಣ, ರಾಜಣ್ಣ, ವೇಣುಗೋಪಾಲ್​, ಡಿ.ಎಸ್​.ರಾಜ್​ ಕುಮಾರ್​, ಡಾ.ಸಿ.ಜಯರಾಜ್​, ಸಂದೀಪ್​, ಸುಭಾಷ್​, ಸೀತಾರಾಮಯ್ಯ, ಎಸ್​.ಎಸ್​.ಗೋಪಾಲ್​ ಇದ್ದರು.

ಸರ್ಕಾರಕ್ಕೆ ಎಚ್ಚರಿಕೆ : ಕೃಷ್ಣ ಶಿಲೆಯ ಅಂಬಿಗರ ಚೌಡಯ್ಯ ಪುತ್ಥಳಿ ಹೊಸಕೋಟೆಯಲ್ಲಿ ಸ್ಥಾಪನೆಯಾಗಿರುವುದು ಮಾದರಿ ಎನಿಸಿದೆ. ಸಮುದಾಯವನ್ನು ಎಸ್​ಟಿಗೆ ಸೇರಿಸಲು ಎಲ್ಲ ನಾಯಕರು ಸಹಕಾರ ನೀಡಬೇಕು. ಈ ಬಗ್ಗೆ ಸಮುದಾಯದ ಮುಖಂಡರು 40 ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ಸರ್ಕಾರ ಎರಡು ತಿಂಗಳಲ್ಲಿ ಸಮುದಾಯವನ್ನು ಎಸ್​ಟಿಗೆ ಸೇರಿಸುವ ಜತೆಗೆ ವಿಧಾನಸೌಧದ ಮುಂದೆ ಅಂಬಿಗರ ಚೌಡಯ್ಯ ಅವರ ಪುತ್ಥಳಿ ನಿರ್ಮಾಣ ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಹಾವೇರಿ ತಾಲೂಕಿನ ನರಸೀಪುರದ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದ ಶ್ರೀ ಜಗದ್ಗುರು ಶಾಂತಾಭೀಷ್ಮಚೌಡಯ್ಯಸ್ವಾಮೀಜಿ ಎಚ್ಚರಿಕೆ ನೀಡಿದರು.

ಸಮುದಾಯದವರು ಅಂಬಿಗರ ಚೌಡಯ್ಯ ಪುತ್ಥಳಿ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ 2024ರ ಜನವರಿಯಲ್ಲಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪುತ್ಥಳಿ ಅನಾವರಣ ಮಾಡಲಾಗಿದೆ. ಇನ್ನೂ ಹೊಸಕೋಟೆ ಕಸಬಾ ಹೋಬಳಿಯಲ್ಲಿ ಬೆಸ್ತ ಸಮುದಾಯಕ್ಕೆ ಸಮುದಾಯ ಭವನ ನಿರ್ಮಿಸಲು ನಿವೇಶನ ನೀಡಲಾಗುವುದು. > ಶರತ್​ ಬಚ್ಚೇಗೌಡ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net