ಎನ್‌ಇಇಟಿ, ಸಿಇಟಿ ಗುರಿ ಮುಟ್ಟಲು ಶ್ರದ್ಧೆ, ಶಿಸ್ತು, ಸಮಯಪಾಲನೆ ಮುಖ್ಯ

21mdka6 - Copy
Published on

ಮಡಿಕೇರಿ: ಎನ್‌ಇಇಟಿ ಮತ್ತು ಸಿಇಟಿ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳು ಸಮಯ ಪಾಲನೆಗೆ ಆದ್ಯತೆ ನೀಡಬೇಕೆಂದು ಪೊಲೀಸ್ ವರಿಷ್ಠಾಧಿಕಾರಿ ಕ್ಯಾ.ಎಂ.ಎ. ಅಯ್ಯಪ್ಪ ಕಿಮಾತು ಹೇಳಿದ್ದಾರೆ.

ಕೃಷಿಕ್ ಸರ್ವೋದಯ ಫೌಂಡೇಶನ್‌ನ ಮಡಿಕೇರಿ ಶಾಖೆ ವತಿಯಿಂದ ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಲಾಗಿದ್ದ ಎನ್‌ಇಇಟಿ ಮತ್ತು ಸಿಇಟಿ ಪರೀಕ್ಷೆಗೆ ಬಡ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಎನ್‌ಇಇಟಿ ಮತ್ತು ಸಿಇಟಿ ಪರೀಕ್ಷೆ ಮೂಲಕ ಉತ್ತಮ ಗುರಿ ಸಾಧಿಸಲು ಮುಂದಾಗುವ ವಿದ್ಯಾರ್ಥಿಗಳು ಶ್ರದ್ಧೆ, ಶಿಸ್ತು ಮತ್ತು ಸಮಯಪಾಲನೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ. ಸತತ ಪರಿಶ್ರಮದಿಂದ ಶೈಕ್ಷಣಿಕ ಗುರಿ ಸಾಧಿಸಲು ಸಾಧ್ಯವಿದೆ. ಪರೀಕ್ಷೆಗಳನ್ನು ಆತ್ಮಸ್ಥೈರ್ಯದಿಂದ ಎದುರಿಸಬೇಕು. ಉನ್ನತ ಹುದ್ದೆಯ ಕನಸಿನೊಂದಿಗೆ ಸಾಧನೆ ಮಾಡಬೇಕೆಂದು ಸಲಹೆ ನೀಡಿದರು.
ತಾವೂ ಕೂಡ ಐಪಿಎಸ್‌ಗಾಗಿ ಕೃಷಿಕ್ ಸರ್ವೋದಯ ಫೌಂಡೇಶನ್‌ನ ಬೆಂಗಳೂರು ಶಾಖೆ ಮೂಲಕ ತರಬೇತಿ ಪಡೆದಿದ್ದು, ನನಗೆ ಹೆಚ್ಚು ಸಹಕಾರಿಯಾಗಿದೆ ಎಂದು ಎಸ್ಪಿ ಅಯ್ಯಪ್ಪ ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸರ್ಕಾರಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಪುಟ್ಟರಾಜು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎನ್‌ಇಇಟಿ ಮತ್ತು ಸಿಇಟಿ ತರಬೇತಿ ವಿದ್ಯಾರ್ಥಿಗಳಿಗೆ ವರದಾನವಾಗಿದೆ. ಇದರ ಪ್ರಯೋಜನವನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕೆಂದರು.

ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ.ಆರ್. ವಿಜಯ ಮಾತನಾಡಿ, ಉಚಿತ ತರಬೇತಿಯಿಂದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ. ತರಗತಿ ನಡೆಸಲು ಕೊಠಡಿ ನೀಡುವುದಾಗಿ ಹೇಳಿದರು. ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ ಮಾತನಾಡಿ, ಉಚಿತ ತರಬೇತಿಗೆ ಬೇಕಾದ ಅಗತ್ಯ ಸಹಕಾರ ನೀಡಲಾಗುವುದೆಂದರು.

ಕೃಷಿಕ್ ಸರ್ವೋದಯ ಫೌಂಡೇಶನ್ ಉಪಾಧ್ಯಕ್ಷ ಡಾ.ದಯಾನಂದ, ನಿರ್ದೇಶಕರಾದ ಗುಲಾಬಿ ಜನಾರ್ಧನ, ಡಾ.ಕೋರನ ಸರಸ್ವತಿ, ಕುಂದಲ್ಪಾಡಿ ದಿವಾಕರ, ನಂಗಾರು ರಾಮಚಂದ್ರ, ಪಾಣ್ತತಲೆ ಪಳಂಗಪ್ಪ ಅವರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಕುರಿತು ಮಾಹಿತಿ ನೀಡಿದರು.

ಫೌಂಡೇಶನ್ ಅಧ್ಯಕ್ಷ ನಂಗಾರು ನಿಂಗರಾಜು ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಕೊಡಗು, ದಕ್ಷಿಣ ಕನ್ನಡ ಗೌಡ ಸಮಾಜದ ಖಜಾಂಚಿ ಕುಂಭಗೌಡನ ಸೋಮಣ್ಣ, ಫೌಂಡೇಶನ್ ನಿರ್ದೇಶಕ ಕುಟ್ಟನ ಸಂದೀಪ್, ಉಪನ್ಯಾಸಕ ಚಿದಾನಂದ ಮತ್ತಿತರರು ಇದ್ದರು.ಕುಂಭಗೌಡನ ರಂಜಿತ್ ನಿರೂಪಿಸಿದರು. ಇದೇ ಸಂದರ್ಭ ಪೊಲೀಸ್ ವರಿಷ್ಠಾಧಿಕಾರಿ ಕ್ಯಾ. ಎಂ.ಎ.ಅಯ್ಯಪ್ಪ ಅವರನ್ನು ಸನ್ಮಾನಿಸಲಾಯಿತು.

ಬಡ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ
ಕೊಡಗು ಜಿಲ್ಲೆಯ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಉಚಿತ ತರಬೇತಿ ನೀಡಲಾಗುತ್ತಿದೆ. ಈಗಾಗಲೇ ಎನ್‌ಇಇಟಿ ಮತ್ತು ಸಿಇಟಿ ತರಬೇತಿ ಆರಂಭಗೊಂಡಿದ್ದು, ಜಿಲ್ಲೆಯ ಹಾಗೂ ಹೊರ ಜಿಲ್ಲೆಯ ನುರಿತ ಉಪನ್ಯಾಸಕರನ್ನು ನೇಮಿಸಲಾಗಿದೆ. ಆಸಕ್ತ ದ್ಯಾರ್ಥಿಗಳು ೯೪೪೮೦ ೦೫೬೪೨ ಮೊಬೈಳ್ ಸಂಖ್ಯೆ ಸಂಪರ್ಕಿಸಬಹುದೆಂದು ಫೌಂಡೇಶನ್ ನ ಖಜಾಂಚಿ ಅಂಬೆಕಲ್ ನವೀನ್ ಕುಶಾಲಪ್ಪ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net