

ಕುಶಾಲನಗರ: ಮುಂದಿನ ಪೀಳಿಗೆಯ ಆಹಾರ ಸಂಸ್ಕರಣೆಯು ಚುರುಕು, ಸ್ವಚ್ಛ ಹಾಗೂ ಸುಸ್ಥಿರ ಆಹಾರ ವ್ಯವಸ್ಥೆಯತ್ತ ಒಂದು ಹೆಜ್ಜೆಯಾಗಿದೆ ಎಂದು ಕೊಡಗು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಅಶೋಕ ಸಂಗಪ್ಪ ಆಲೂರ ಹೇಳಿದರು.
ತಿರುವನಂತಪುರಂನ ಸಿಎಸ್‌ಐಆರ್-ರಾಷ್ಟ್ರೀಯ ಅಂತರಶಿಸ್ತೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ (ಸಿಎಸ್‌ಐಆರ್-ಎನ್‌ಐಐಎಸ್‌ಟಿ) ಯಲ್ಲಿ ಎನ್‌ಐಐಎಸ್‌ಟಿಯ ಸುವರ್ಣ ಮಹೋತ್ಸವ ಆಚರಣೆ ಹಿನ್ನೆಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ‘ಮುಂದಿನ ಪೀಳಿಗೆಯ ಆಹಾರ ತಂತ್ರಜ್ಞಾನಗಳು: ಸುಸ್ಥಿರ ನಾಳೆಗಾಗಿ ಸಂಸ್ಕರಣೆ’ ಕುರಿತ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಮುಂದಿನ ಪೀಳಿಗೆಯ ಆಹಾರ ಸಂಸ್ಕರಣೆ ಕೇವಲ ತಾಂತ್ರಿಕ ಅಧಾರಿತವಲ್ಲ, ಬದಲಾಗಿ ಚುರುಕಾದ, ಸ್ವಚ್ಛ ಮತ್ತು ಹೆಚ್ಚು ಸುಸ್ಥಿರ ಆಹಾರ ವ್ಯವಸ್ಥೆಯತ್ತ ಒಂದು ಹೆಜ್ಜೆ ಮುಂದೆ ಇರಿಸಿದೆ ಎಂದು ಹೇಳಿದರು.
ಸಿಎಸ್‌ಐಆರ್-ಕೇಂದ್ರ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ನಿರ್ದೇಶಕಿ ಶ್ರೀದೇವಿ ಅನ್ನಪೂರ್ಣ ಸಿಂಗ್, ಪೌಷ್ಟಿಕಾಂಶ ಮತ್ತು ಸ್ವಾಸ್ಥ್ಯವನ್ನು ಖಚಿತಪಡಿಸಿಕೊಳ್ಳಲು ಆಹಾರ ಕ್ಷೇತ್ರದಲ್ಲಿ ಅನುವಾದ ಸಂಶೋಧನೆಯ ಮಹತ್ವ ಕುರಿತು ಮಾಹಿತಿ ನೀಡಿದರು.
ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ವಿಜ್ಞಾನ ಮತ್ತು ಮಾನದಂಡಗಳು ಮತ್ತು ನಿಯಮಗಳ ಸಲಹೆಗಾರ್ತಿ ಅಲ್ಕಾ ರಾವ್, ಎನ್‌ಐಐಎಸ್‌ಟಿ ನಿರ್ದೇಶಕ ಸಿ.ಆನಂದ ರಾಮಕೃಷ್ಣನ್ ಮಾತನಾಡಿದರು.
ಸಮಾವೇಶದಲ್ಲಿ ‘ಆಯುರ್-ಆಹಾರ್‌ನಲ್ಲಿ ಪ್ರಗತಿಗಳು’, ‘ಭಾರತದಲ್ಲಿ ಆಹಾರ ಸುರಕ್ಷತಾ ನಿಯಮಗಳನ್ನು ಜಾರಿಗೊಳಿಸುವಲ್ಲಿ ಇತ್ತೀಚಿನ ಸವಾಲುಗಳು’ ಮತ್ತು ‘ಆಹಾರ ಸಂಸ್ಕರಣೆಯಲ್ಲಿ ಇತ್ತೀಚಿನ ಪ್ರಗತಿಗಳು’ ಎಂಬ ವಿಷಯಗಳ ಕುರಿತು ಚರ್ಚೆ ನಡೆದವು.
ಆಹಾರ ಸಂಸ್ಕರಣೆ ಮತ್ತು ಜೀವ ವಿಜ್ಞಾನ ಕ್ಷೇತ್ರಗಳಲ್ಲಿ ಜಂಟಿ ಸಂಶೋಧನೆ, ಶೈಕ್ಷಣಿಕ ವಿನಿಮಯ ಮತ್ತು ಸಾಮರ್ಥ್ಯ ವೃದ್ಧಿಯನ್ನು ಉತ್ತೇಜಿಸಲು ಸಿಎಸ್‌ಐಆರ್-ಎನ್‌ಐಐಎಸ್‌ಟಿ ಮತ್ತು ಕೊಡಗು ವಿಶ್ವವಿದ್ಯಾಲಯದ ನಡುವೆ ತಿಳಿವಳಿಕೆ ಒಪ್ಪಂದ (ಎಂಒಯು)ಕ್ಕೆ ಸಹಿ ಹಾಕಲಾಯಿತು. ಎರಡೂ ಸಂಸ್ಥೆಗಳ ಪೂರಕ ಸಾಮರ್ಥ್ಯಗಳನ್ನು ಬಳಸಿಕೊಳ್ಳುವ ಮೂಲಕ ಈ ಒಪ್ಪಂದ ಮಾಡಿಕೊಳ್ಳಲಾಯಿತು.