

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಾದಕ ವಸ್ತು ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆಯನ್ನು ಬಂಧಿಸಿರುವ ನಾರ್ಕೋಟಿಕ್ಸ್ ಕಂಟ್ರೊಲ್ ಬ್ಯುರೋ ಅಧಿಕಾರಿಗಳ ತಂಡ, ನಗರದಲ್ಲೂ ಪರಿಶೀಲನೆ ನಡೆಸಿತು. ತಮಿಳುನಾಡು ಮತ್ತು ಬೆಂಗಳೂರು ಅಽಕಾರಿಗಳ ತಂಡ, ಮಾರ್ಟಿನ್, ಮ್ಯಾಥ್ಯೂ, ಟಿಮ್ ಹೆಸರುಗಳಿಂದ ಗುರುತಿಸಿಕೊಂಡಿದ್ದ ವ್ಯಕ್ತಿಯನ್ನು ಕರೆತಂದು ಪರಿಶೀಲನೆ ನಡೆಸಿತು. ಮಾರ್ಟಿನ್ ಎಂಬಾತ ಇಲ್ಲಿನ ಮಾಳಮಡ್ಡಿಯ 3ನೇ ಕ್ರಾಸ್‌ನಲ್ಲಿರುವ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಈತ ಉನ್ನತ ವ್ಯಾಸಂಗಕ್ಕಾಗಿ ಬಂದಿರುವುದಾಗಿ ನಂಬಿಸಿ ಕೆಲ ವರ್ಷಗಳಿಂದ ಬಾಡಿಗೆ ಮನೆ ಪಡೆದಿದ್ದ. ಇಲ್ಲಿದ್ದುಕೊಂಡೇ ದೇಶದ ವಿವಿಧೆಡೆ ಕೊಕೇನ್ ಮಾರಾಟ ಜಾಲದೊಂದಿಗೆ ಸಂಪರ್ಕ ಹೊಂದಿದ್ದ ಎಂದು ತಿಳಿದುಬಂದಿದೆ. ಲೇಡಿಸ್ ಪರ್ಸ್ ಮತ್ತು ವ್ಯಾನಿಟಿ ಬ್ಯಾಗ್ ಮಾರಾಟದ ನೆಪದಲ್ಲಿ ಕೊಕೇನ್ ಸಾಗಿಸುತ್ತಿದ್ದ ಶಂಕೆ ವ್ಯಕ್ತವಾಗಿದೆ. ಬಾಡಿಗೆ ಮನೆಯಲ್ಲಿ ಅಪಾರ ಪ್ರಮಾಣದ ಲೇಡಿಸ್ ವ್ಯಾನಿಟಿ ಬ್ಯಾಗ್, ಪರ್ಸ್ ಗಳು, ತೂಕದ ಯಂತ್ರ ಮತ್ತು ಪ್ಯಾಕಿಂಗ್ ಯಂತ್ರಗಳು ಪತ್ತೆಯಾಗಿವೆ.