

ಮಂಗಳೂರು: ಕೇರಳದಲ್ಲಿ ನಿಫಾ ವೈರಸ್ ಎರಡು ಜೀವಗಳನ್ನು ಬಲಿ ತೆಗೆದುಕೊಂಡ ಬೆನ್ನಲ್ಲೇ ಗಡಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ವಿಶೇಷ ನಿಗಾ ಇರಿಸಲಾಗಿದೆ. ಜಿಲ್ಲೆಯಲ್ಲಿ ಜ್ವರ ಸಮೀಕ್ಷೆ ನಡೆಸಲು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ ನೀಡಿದ್ದಾರೆ.
ನಿಫಾ ವೈರಸ್ ಮುನ್ನೆಚ್ಚರಿಕೆಯಾಗಿ ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಈಗಾಗಲೇ ಐಸೋಲೇಶನ್ ವಾರ್ಡ್ ಸ್ಥಾಪಿಸಲಾಗಿದೆ. ಎಲ್ಲ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳಲ್ಲಿ ಐಸೊಲೇಶನ್ ವಾರ್ಡ್ ಸ್ಥಾಪಿಸಲು ಸೂಚಿಸಲಾಗಿದೆ. ಎಲ್ಲ ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ರೋಗ ಲಕ್ಷಣದ ಯಾವುದೇ ಪ್ರಕರಣಗಳು ಕಂಡುಬಂದರೆ ಮಾಹಿತಿ ನೀಡಲು ಸೂಚಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ (ಪ್ರಭಾರ) ಡಾ.ಸುದರ್ಶನ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಭಯ ಬೇಡ:
ಯಾವುದೇ ರೀತಿಯ ಜ್ವರವನ್ನು ನಿರ್ಲಕ್ಷಿಸದೆ ಚಿಕಿತ್ಸೆಗಾಗಿ ವೈದ್ಯರನ್ನು ಸಂಪರ್ಕಿಸಬೇಕು. ಆದರೆ ಕೇರಳದಲ್ಲಿ ನಿಫಾ ವೈರಸ್ ಕಂಡುಬಂದಿರುವ ಬಗ್ಗೆ ಜಿಲ್ಲೆಯ ಜನರು ಭಯಪಡುವ ಅಗತ್ಯವಿಲ್ಲ. ಎಲ್ಲ ಜ್ವರಗಳನ್ನು ನಿಫಾ ಎಂದು ಪರಿಗಣಿಸಲಾಗುವುದಿಲ್ಲ. ತೀವ್ರ ಜ್ವರದೊಂದಿಗೆ ರೋಗ ಲಕ್ಷಣಗಳಿಂದ ಬಳಲುತ್ತಿರುವ ರೋಗಿಗಳ ಮಾದರಿಗಳನ್ನು ಮಾತ್ರ ಪುಣೆಯಲ್ಲಿರುವ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಪರೀಕ್ಷೆಗಾಗಿ ಕಳುಹಿಸಲಾಗುತ್ತದೆ ಎಂದರು.
ಸೋಂಕಿತ ರೋಗಿಗಳೊಂದಿಗೆ ನೇರ ಸಂಪರ್ಕಕ್ಕೆ ಬರುವ ಮೂಲಕ ರೋಗ ಹರಡುತ್ತದೆ. ಹಂದಿಗಳು, ಬಾವಲಿಗಳು, ಬೆಕ್ಕು ಮತ್ತು ಕುದುರೆಗಳಿಂದಲೂ ಹರಡುವ ಸಾಧ್ಯತೆಗಳಿವೆ. ಹಾಗಾಗಿ ರೋಗದಿಂದ ಬಳಲುತ್ತಿರುವ ಪ್ರಾಣಿಗಳನ್ನು ಪ್ರತ್ಯೇಕಿಸಬೇಕು. ರೋಗದ ಹರಡುವಿಕೆಯನ್ನು ತಡೆಗಟ್ಟಲು ಶಂಕಿತ ರೋಗಿಗಳನ್ನು ಕೂಡ ಪ್ರತ್ಯೇಕಿಸಬೇಕು ಎಂದು ಡಾ. ಸುದರ್ಶನ್ ತಿಳಿಸಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನವೀನಚಂದ್ರ ಕುಲಾಲ್ ಮಾತನಾಡಿ, ಅರ್ಧ ತಿಂದ ಹಣ್ಣುಗಳನ್ನು ಸೇವನೆ ಮಾಡಬಾರದು. ಹಣ್ಣುಗಳು ಮತ್ತು ಖರ್ಜೂರವನ್ನು ಸೇವಿಸುವ ಮೊದಲು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಬಾವಲಿಗಳು ಇರುವ ಪ್ರದೇಶಗಳ ಬಾವಿಗಳ ನೀರನ್ನು ಸೇವಿಸುವ ಮೊದಲು ಚೆನ್ನಾಗಿ ಕುದಿಸಬೇಕು. ರೋಗ ಇರುವ ಪ್ರದೇಶದ ಶೇಂದಿಯನ್ನು ಕುಡಿಯುವುದನ್ನೂ ತಪ್ಪಿಸಬೇಕು ಎಂದು ಹೇಳಿದರು.
ನಿಫಾ ವೈರಸ್‌ಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ರೋಗ ಲಕ್ಷಣಗಳ ಆಧಾರದ ಮೇಲೆ ಚಿಕಿತ್ಸೆ ನೀಡಲಾಗುತ್ತದೆ ಎಂದು ಹೇಳಿದ ಅವರು, ನಿಫಾ ವೈರಸ್ ದೃಢಪಟ್ಟ ನಂತರ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಮತ್ತು ದಾದಿಯರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇದು ಲಾಲಾರಸ, ಮಲ, ಮೂತ್ರದಂತಹ ದೈಹಿಕ ದ್ರವಗಳ ಮೂಲಕ ಹರಡಬಹುದು. ನಿಫಾ ವೈರಸ್ ಹೊಂದಿರುವ ವ್ಯಕ್ತಿಯು ಕೆಮ್ಮಿದಾಗ ಅಥವಾ ಸೀನಿದಾಗ ರೋಗ ಹರಡುವ ಸಾಧ್ಯತೆ ಅತಿ ಹೆಚ್ಚಿರುತ್ತದೆ ಎಂದರು.
ನಿಫಾ ಸೋಂಕಿನ ಸಾವಿನ ಪ್ರಮಾಣ ಶೇ.60ರಷ್ಟಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಡಾ.ನವೀನ್ ಚಂದ್ರ ಕುಲಾಲ್ ಹೇಳಿದರು.