

ಮಡಿಕೇರಿ: ನಿಫಾ ವೈರಸ್ ಕೇರಳ ರಾಜ್ಯದಲ್ಲಿ ವರದಿಯಾದ ಹಿನ್ನಲೆಯಲ್ಲಿ ಗಡಿ ಜಿಲ್ಲೆಯಾದ ಕೊಡಗು ಜಿಲ್ಲೆಯಲ್ಲೂ ಕೂಡ ಕಟ್ಟೆಚ್ಚರ ವಹಿಸುವಂತೆ ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸತೀಶ್ ಕುಮಾರ್‌ರವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜ್ವರ, ತಲೆ ನೋವು, ವಾಂತಿ, ತಲೆ ಸುತ್ತುವಿಕೆ ಬರುವುದು. ಪ್ರಜ್ಞಾಹೀನತೆಗೆ ಒಳಗಾಗುವುದು. ಅತೀಯಾದ ಜ್ವರ ಮೆದುಳಿಗೆ ವ್ಯಾಪಿಸುವುದು. ಮಾತುಗಳಲ್ಲಿ ತೊದಲುವಿಕೆ ಹಾಗೂ ಅಪಸ್ವರದ ಲಕ್ಷಣಗಳು ಕಾಣಿಸಿಕೊಳ್ಳಲಿದೆ. ಕೆಲವು ಬಾರಿ ಸೂಕ್ತ ಚಿಕಿತ್ಸೆ ಲಭಿಸದಿದ್ದರೆ ಸಾವು ಸಂಭವಿಸಲಿದೆ. ಸೊಂಕಿತ ದಿನದಿಂದ ೪ ರಿಂದ ೧೮ ದಿನಗಳಲ್ಲಿ ನಿಪಾ ವೈರಸ್ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ತಿಳಿಸಿದ್ದಾರೆ.
ನಿಪಾ ವೈರಸ್ ಜ್ವರ ಹರಡುವ ವಿಧಾನ ಸೋಂಕಿತ ಬಾವಲಿಗಳ ನೇರ ಸಂಪರ್ಕದಿಂದ ಹಾಗೂ ಬಾವಲಿಗಳು ಬಿಸಾಡಿದ ಹಣ್ಣು ಹಂಪಲುಗಳನ್ನು ಸೇವಿಸುವುದರ ಮೂಲಕ ಇತರ ಪ್ರಾಣಿಗಳಿಗೆ ಹರಡುತ್ತದೆ. ಸೊಂಕಿತ ವ್ಯಕ್ತಿಯ ಗಂಟಲಿನ ದ್ರವಗಳ ಮಾದರಿಯನ್ನು ಪಡೆದು, ಪ್ರಯೋಗಾಲಯದಲ್ಲಿ ಪರೀಕ್ಷಿಸಿ ದೃಢಪಡಿಸಬಹುದು. ಯಾವುದೇ ರೀತಿಯ ಜ್ವರ ಕಂಡು ಬಂದಲ್ಲಿ ಉದಾಸೀನ ಮಾಡದೇ ಹಾಗೂ ನಿಪಾ ವೈರಸ್ ಲಕ್ಷಗಳಿರುವ ಜ್ವರಕಂಡು ಬಂದಲ್ಲಿ ತಕ್ಷಣ ವೈದ್ಯರ ಸಲಹೆ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.
ಕೊಡಗು ಜಿಲ್ಲೆಯ ನೆರೆರಾಜ್ಯ ಕೇರಳಕ್ಕೆ ಹೊಂದಿಕೊಂಡಿರುವುದರಿಂದ ಜಿಲ್ಲೆಯಲ್ಲಿ ತೀವ್ರಾ ನಿಗಾವಣೆ ಮತ್ತು ಸಕ್ರಿಯ ಸಮೀಕ್ಷೆ ಕಾರ್ಯಕ್ರಮ ಹಮ್ಮಿಕೊಳ್ಳಲು ಈಗಾಗಲೇ ಸೂಚಿಸಲಾಗಿದೆ. ವೈರಸ್‌ಜ್ವರವು ನೇರ ಸಂಪರ್ಕದಿಂದ ಹರಡುವುದರಿಂದ ಸೊಂಕಿತ ವ್ಯಕ್ತಿ ಮತ್ತು ಪ್ರಾಣಿಗಳಿಂದ (ನಾಯಿ, ಬೆಕ್ಕು, ಮೇಕೆ, ಕುದುರೆ ಮತ್ತು ಕೆಲವು ಸಂದರ್ಭದಲ್ಲಿ ಕುರಿಗಳು) ದೂರವಿರುವುದು ಸೂಕ್ತವಾಗಿದೆ. ಅಲ್ಲದೆ ಸಾರ್ವಜನಿಕರು ಅತಂಕಕ್ಕೆ ಒಳಗಾಗುವ ಅವಶ್ಯಕತೆ ಇರುವುದಿಲ್ಲ. ಯಾವುದೇ ಜ್ವರವಿರಲಿ ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಸತೀಶ್ ಕುಮಾರ್ ಮನವಿ ಮಾಡಿದ್ದಾರೆ.