ನಿಫಾ ವೈರಸ್ ಬಗ್ಗೆ ಜನರಿಗೆ ಆತಂಕ ಬೇಡ

12
Published on

ಮೈಸೂರು: ಕೇರಳ ಭಾಗದಲ್ಲಿ ಹರಡಿರುವ ನಿಫಾ ವೈರಸ್ ಕುರಿತು ಜಿಲ್ಲೆಯ ಜನರು ಆತಂಕಪಡಬಾರದು. ಈ ಸಂಬಂಧ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಭರವಸೆ ನೀಡಿದರು.


ನಿಫಾ ವೈರಸ್ ನಿಯಂತ್ರಣ, ಬರ ಘೋಷಣೆ ಕುರಿತು ಹಳೇ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಗುರುವಾರ ಹಮ್ಮಿಕೊಂಡಿದ್ದ ವರ್ಚುವಲ್ ಸಭೆಯಲ್ಲಿ ಮಾತನಾಡಿದರು.


ಕೇರಳ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಎಚ್.ಡಿ.ಕೋಟೆ ತಾಲೂಕಿನ ಬಾವಲಿಯಲ್ಲಿ ಚೆಕ್‌ಪೋಸ್ಟ್ ತೆರೆಯಲಾಗಿದೆ. ಕೇರಳದಿಂದ ಬರುವವರನ್ನು ಪರೀಕ್ಷೆ ಮಾಡಲಾಗುತ್ತಿದೆ. ಅವರಿಗೆ ಜ್ವರ, ತಲೆನೋವು, ಮೈ-ಕೈ ನೋವು ಇದ್ದರೆ ಪರೀಕ್ಷೆ ಮಾಡಿಸಿಕೊಳ್ಳುವಂತೆ ಅರಿವು ಮೂಡಿಸಲಾಗುತ್ತಿದೆ ಎಂದರು.
ಜನರು ಯಾವುದೇ ಭಯಪಡುವ ಅಗತ್ಯವಿಲ್ಲ. ಮನೆ ಬಳಿ ಬಾವಲಿಗಳು ಇದ್ದರೆ ಎಚ್ಚರಿಕೆ ವಹಿಸಬೇಕು, ಪಕ್ಷಿಗಳು ಕಚ್ಚಿರುವ ಹಣ್ಣುಗಳನ್ನು ಬಳಸಬಾರದು. ಹಣ್ಣುಗಳನ್ನು ತೊಳೆದು ಉಪಯೋಗಿಸಬೇಕು ಎಂದು ಸಲಹೆ ನೀಡಿದ್ದಾರೆ.


ನಿಫಾ ವೈರಸ್ ರೋಗಲಕ್ಷಣಗಳ ಬಗ್ಗೆ ಜನರು ಜಾಗೃತರಾಗಬೇಕು. ಅದಕ್ಕಾಗಿ ಆರೋಗ್ಯಾಧಿಕಾರಿಗಳು ಅರಿವು ಮೂಡಿಸಬೇಕು. ಅಲ್ಲದೆ, ಡೆಂೆ ಪ್ರಕರಣಗಳು ಕಂಡುಬರುತ್ತಿದ್ದು, ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ನಿರ್ದೇಶಿಸಿದರು.


ಕ್ಲಿನಿಕ್‌ಗಳಲ್ಲಿ ವೈದ್ಯರ ಮಾಹಿತಿ ಕಲೆ ಹಾಕಿ:


ಕ್ಲಿನಿಕ್‌ಗಳಲ್ಲಿ ವೈದ್ಯರ ಮಾಹಿತಿ, ವಿದ್ಯಾರ್ಹತೆ, ನೋಂದಣಿ ಸಂಖ್ಯೆಯ ಮಾಹಿತಿ ಸಂಗ್ರಹಿಸಬೇಕು. ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ತಾಯಿ-ಮಗುವಿನ ಮರಣ ಪ್ರಮಾಣವನ್ನು ಕಡಿಮೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಳ್ಳಿಗಳಲ್ಲಿ ಗರ್ಭಿಣಿಯರನ್ನು ಗುರುತಿಸಿ ಅವರಿಗೆ ಸರ್ಕಾರದ ಸೌಲಭ್ಯ, ವೈದ್ಯಕೀಯ ಸೌಲಭ್ಯಗಳು ಕುರಿತು ಮಾಹಿತಿ ನೀಡಿ, ಅವುಗಳನ್ನು ಪಡೆದುಕೊಳ್ಳುವಂತೆ ಮಾಡಬೇಕು ಎಂದರು.


ಗ್ರಾಮ ಒನ್ ಸೆಂಟರ್‌ಗಳಿಗೆ ನೋಟಿಸ್ ನೀಡಿ:


ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ಕಾರ್ಡ್ ವಿತರಣೆ ಮಾಡುವಲ್ಲಿ ತಾಲೂಕು ಆರೋಗ್ಯಾಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು. ಆರೋಗ್ಯ ಕೇಂದ್ರಗಳು, ಗ್ರಾಮ ಒನ್ ಸೆಂಟರ್, ಗ್ರಾಮ ಪಂಚಾಯಿತಿಗಳಲ್ಲಿ ಆರೋಗ್ಯ ಕಾರ್ಡ್ ಮಾಡಿಸಿಕೊಳ್ಳಬಹುದು. ಜಿಲ್ಲೆಗೆ 26 ಲಕ್ಷ ಗುರಿ ಇದ್ದು, ಈವರೆಗೆ 6 ಲಕ್ಷ ನೋಂದಣಿ ಆಗಿದೆ. ಆದ್ದರಿಂದ ಸರಿಯಾಗಿ ನೋಂದಣಿಗೆ ಸಹಕರಿಸದ ಗ್ರಾಮ ಒನ್ ಸೆಂಟರ್‌ಗಳಿಗೆ ನೋಟಿಸ್ ನೀಡಲಾಗುವುದು ಎಂದು ಎಚ್ಚರಿಸಿದರು.


ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಕುಟುಂಬದವರಿಗೆ ಮೊದಲ ಆದ್ಯತೆ ನೀಡಿ ಮುಂದಿನ ಒಂದು ವಾರದೊಳಗೆ ಆರೋಗ್ಯ ಕಾರ್ಡ್ ಮಾಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.


ಕೆ.ಆರ್.ನಗರ ಹೊರತುಪಡಿಸಿ ಉಳಿದವು ಬರಪೀಡಿತ:


ಕೆ.ಆರ್.ನಗರ ಹೊರತುಪಡಿಸಿ ಜಿಲ್ಲೆಯ ಉಳಿದ ಎಲ್ಲ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಲಾಗಿದೆ. ತಹಸೀಲ್ದಾರ್, ತಾಪಂ ಕಾರ್ಯನಿರ್ವಹಣಾಧಿಕಾರಿಗಳು ತಮ್ಮ ತಾಲೂಕಿನ ಗ್ರಾಮಗಳ ವ್ಯಾಪ್ತಿಯಲ್ಲಿ ಇರುವ ನೀರಿನ ಪ್ರಮಾಣವನ್ನು ಗುರುತಿಸಬೇಕು. ಗ್ರಾಮಗಳ ಹತ್ತಿರದಲ್ಲಿ ಇರುವ ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಿ ಮಾಹಿತಿ ಇಟ್ಟುಕೊಳ್ಳಬೇಕು. ಕುಡಿಯುವ ನೀರಿಗೆ ಯಾವುದೇ ತೊಂದರೆ ಆಗಬಾರದು ಎಂದು ತಿಳಿಸಿದರು.


ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳನ್ನು ಗುರುತಿಸಬೇಕು. ಜಾನುವಾರು ಮೇವು ಲಭ್ಯತೆ ಕುರಿತು ಮಾಹಿತಿ ಕ್ರೋಡೀಕರಣ ಮಾಡಬೇಕು. ಮೇವು ಬೆಳೆಯಲು ಮೇವು ಬಿತ್ತನೆ ಬೀಜಗಳ ವಿತರಣೆಯನ್ನು ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಮಾಡಬೇಕು ಎಂದು ಸೂಚನೆ ನೀಡಿದರು.


ರೈತರು ಗುಳೆ ಹೋಗದಂತೆ ನೋಡಿಕೊಳ್ಳಬೇಕು. ಎಂ-ನರೇಗಾ ಯೋಜನೆಯಡಿ ಕೆಲಸ ನೀಡಿ, ಅವರಿಗೆ ಆರ್ಥಿಕ ಸೌಲಭ್ಯ ದೊರೆಯುವಂತೆ ಮಾಡಬೇಕು. ಕುಡಿಯುವ ನೀರಿನ ಒವರ್‌ಹೆಡ್ ಟ್ಯಾಂಕ್‌ಗಳನ್ನು ವರ್ಷದಲ್ಲಿ ಕನಿಷ್ಠ 2 ಬಾರಿ ಸ್ವಚ್ಛಗೊಳಿಸಬೇಕು ಎಂದು ಸೂಚನೆ ನೀಡಿದರು.


ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯತ್ರಿ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ಕಂಡುಬಂದರೆ 24 ಗಂಟೆಯೊಳಗೆ ಪರಿಹಾರ ಒದಗಿಸಬೇಕು. ಬರ ಇರುವುದರಿಂದ ಎಂ-ನರೇಗಾ ಯೋಜನೆಯಡಿ ಹೆಚ್ಚಿನ ಕೆಲಸ ಮಾಡಿಸಬೇಕು. ಹೆಚ್ಚಿನ ಮಾನವ ದಿನಗಳ ಸೃಜನೆ ಮಾಡಬೇಕು. ಹಾಸ್ಟೆಲ್‌ಗಳಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದು ತಿಳಿಸಿದರು.
ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net