

ಬೆಂಗಳೂರು: ಕೇರಳದ ಮಲಪ್ಪುರಂ ಜಿಲ್ಲೆಯು ನಿಫಾ ಸೋಂಕಿನಿಂದ ಸುರಕ್ಷಿತ ಎಂದು ಘೋಷಿಸುವವರೆಗೆ ಆ ಪ್ರದೇಶಕ್ಕೆ ಪ್ರಯಾಣ ಮಾಡದಿರುವುದು ಒಳಿತು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಮಲಪ್ಪುರಂನಲ್ಲಿ ಜು.21ರಂದು ನಿಫಾ ಪ್ರಕರಣ ದೃಢಪಟ್ಟಿದ್ದು, 14 ವರ್ಷದ ಬಾಲಕ ನಿಫಾ ಸೋಂಕಿನಿಂದ ಮೃತಪಟ್ಟಿದ್ದಾನೆ. ಆದರೆ ಕರ್ನಾಟಕದಲ್ಲಿ ಈವರೆಗೆ ಯಾವುದೇ ನಿಫಾ ಪ್ರಕರಣ ವರದಿಯಾಗಿಲ್ಲ. ಹಾಗಾಗಿ ಅತ್ಯಂತ ಅವಶ್ಯವಿದ್ದಲ್ಲಿ ಮಾತ್ರ ಕೇರಳಕ್ಕೆ ಪ್ರಯಾಣಿಸುವಂತೆ ಇಲಾಖೆ ಸಮಗ್ರ ರೋಗ ಕಣ್ಗಾವಲು ಕಾರ್ಯಕ್ರಮದ (ಐಡಿಎಸ್‌ಪಿ) ಯೋಜನಾ ನಿರ್ದೇಶಕರು ಸೂಚನೆ ನೀಡಿದ್ದಾರೆ. ಕೇರಳದಲ್ಲಿ ನಿಫಾ ಪ್ರಕರಣ ವರದಿಯಾದಾಗಲೆಲ್ಲ ಗಡಿಯಾಚೆಗೆ ಸೋಂಕು ಹರಡುವುದನ್ನು ತಡೆಯಲು ರಾಜ್ಯದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಮಲಪ್ಪುರಂನಲ್ಲಿ ವರದಿಯಾದ ಪ್ರಕರಣದಲ್ಲಿ ಸಂಪರ್ಕಿತರಿಗೆ ಪರೀಕ್ಷೆ ನಡೆಸಲಾಗಿದ್ದು, ಅವರಲ್ಲಿ ಸೋಂಕು ದೃಢಪಟ್ಟಿಲ್ಲ. ಆದ್ದರಿಂದ ಈ ಸೋಂಕು ಮನುಷ್ಯರಿಂದ ಮನುಷ್ಯರಿಗೆ ಹರಡುವ ಸಾಧ್ಯತೆ ತುಂಬಾ ಕಡಿಮೆಯಿದ್ದು, ಭಯಪಡಬೇಕಾದ ಅಗತ್ಯವಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಅತ್ಯವಶ್ಯವಾಗಿರದಿದ್ದಲ್ಲಿ ಅಲ್ಲಿಗೆ ಪ್ರಯಾಣ ತಪ್ಪಿಸುವುದು ಉತ್ತಮ ಎಂದು ತಿಳಿಸಿದ್ದಾರೆ.