

ಮೈಸೂರು: ಉತ್ತಮ ಪ್ರದರ್ಶನ ನೀಡಿದ ಮೈಸೂರಿನ ಎನ್‌ಐಇ ಕಾಲೇಜು ತಂಡ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮೈಸೂರು ವಿಭಾಗ ಮಟ್ಟದ ಪುರುಷರ ಹಾಕಿ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು.
ಎನ್‌ಐಇ ಇನ್ಸ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ ಸ್ಪೋರ್ಟ್ಸ್ ಪೆವಿಲಿಯನ್‌ನಲ್ಲಿ ಬುಧವಾರ ನಡೆದ ಫೈನಲ್ ಪಂದ್ಯದಲ್ಲಿ ಪೊನ್ನಂಪೇಟೆಯ ಸಿಐಟಿ ಕಾಲೇಜು ವಿರುದ್ಧ 3-2 ಗೋಲುಗಳಿಂದ ಜಯ ಗಳಿಸಿತು.
ಇದಕ್ಕೂ ಮುನ್ನ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಎನ್‌ಐಇ ಕಾಲೇಜು ತಂಡ 1-0 ಗೋಲುಗಳಿಂದ ವಿದ್ಯಾವರ್ಧಕ ಕಾಲೇಜು ವಿರುದ್ಧ ಹಾಗೂ ಪೊನ್ನಂಪೇಟೆಯ ಸಿಐಟಿ 3-2 ಗೋಲುಗಳಿಂದ ಪಿಇಎಸ್ ಮಂಡ್ಯ ವಿರುದ್ಧ ಗೆಲುವು ದಾಖಲಿಸಿದ್ದವು.
ಪಂದ್ಯಾವಳಿಯಲ್ಲಿ ಮೈಸೂರು ವಿಭಾಗದ 6 ತಂಡಗಳು ಭಾಗವಹಿಸಿದ್ದವು. ಇದಕ್ಕೂ ಮುನ್ನ ಪಂದ್ಯಾವಳಿಗೆ ರಾಷ್ಟ್ರೀಯ ಹಾಕಿ ಆಟಗಾರ ಡಿ.ಎಸ್. ದರ್ಶನ್ ಚಾಲನೆ ನೀಡಿ, ಕ್ರೀಡಾಪಟುಗಳಿಗೆ ಶುಭ ಕೋರಿದರು. ಎನ್‌ಐಇ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯ ದೈಹಿಕ ಶಿಕ್ಷಣ ನಿರ್ದೇಶಕ ಎಚ್.ಸಿ.ಸುದಿನ ಇದ್ದರು.