ಸಿದ್ದರಾಮಯ್ಯ ರಾಜೀನಾಮೆ ಅಗತ್ಯವಿಲ್ಲ: ನಿಡುಮಾಮಿಡಿ ಶ್ರೀ ಹೇಳಿಕೆ

IMG-20240920-WA0022
Published on

ಕಲಬುರಗಿ: ಮೂಡಾ ಪ್ರಕರಣದಲ್ಲಿ ಖಾಸಗಿ ವ್ಯಕ್ತಿಗಳು ನೀಡಿದ ದೂರನ್ನು ಆಧರಿಸಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದು ರಾಜ್ಯಪಾಲರ ಪಕ್ಷಪಾತ ಧೋರಣೆ ಆಗಿದ್ದು, ನ್ಯಾಯಾಲಯದ ತೀರ್ಪು ವ್ಯತಿರಿಕ್ತ ಬಂದರೆ ಸಿಎಂ ರಾಜೀನಾಮೆ ನೀಡಬಾರದು ಎಂದು ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚೆನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ ಆಗ್ರಹಿಸಿದರು.

ಕೇಂದ್ರ ಸರ್ಕಾರ ರಾಜ್ಯಪಾಲರನ್ನು ಬಳಸಿ, ಸರ್ಕಾರ ಅಸ್ಥಿರಗೊಳಿಸುತ್ತಿದೆ. ಸಿದ್ಧರಾಮಯ್ಯನವರ, 136 ಶಾಸಕರನ್ನು ಹೊಂದಿದ ಸರ್ಕಾರ ಉರುಳಿಸಿ, ಬೇರೆ ಸರ್ಕಾರ ರಚಿಸಲು ಷಡ್ಯಂತ್ರ ರೂಪಿಸುತ್ತಿದೆ.

ಸಿದ್ದರಾಮಯ್ಯ ನ್ಯಾಯಾಲಯ ತೀರ್ಪಿನ ಬಳಿಕ ರಾಜೀನಾಮೆ ನೀಡದೆ ಸುಪ್ರಿಂವಕೋರ್ಟ್ ಮೊರೆ ಹೋಗಿ, ನ್ಯಾಯ ಕೇಳಬೇಕು. ಅದಕ್ಕೆ ರಾಜ್ಯದ ಮಠಾಧೀಶರ ಬೆಂಬಲವೂ ಇದೆ ಎಂದರು.

ರಾಜ್ಯಪಾಲರ ನಡೆ ಪಕ್ಷಪಾತದಿಂದ ಕೂಡಿದೆ. ಮೂಡಾದಲ್ಲಿ ಅಧಿಕಾರಿಗಳು ತಪ್ಪು ಮಾಡಿದ್ದಾರೆ. ಸಿಎಂ ವ್ಯಕ್ತಿತ್ವಕ್ಕೆ ಕಪ್ಪು‌ಚುಕ್ಕೆ ಹಚ್ಚಿ, ಒಂದು‌ ಜನಪರ ಸರ್ಕಾರವನ್ನು ಉರುಳಿಸುವ ಸಂಚು ಕೇಂದ್ರ ಸರಕಾರ ಮಾಡಿದೆ ಎಂದರು.

ಒಂದು ವೇಳೆ ಕೋರ್ಟ್ ತೀರ್ಪು ವ್ಯತಿರಿಕ್ತ ಬಂದರೆ, ರಾಜ್ಯದ ಮಠಾಧೀಶರ ನಡೆಯ ಮತ್ತು ಪ್ರತಿರೋಧ ಏನಾಗಿರಬೇಕು ಎನ್ನುವ ಕುರಿತು ನಮ್ಮ ತೀರ್ಮಾನ ತಿಳಿಸಲಾಗುವುದು ಎಂದರು.

ದೇಶದಲ್ಲಿ ಈ ಹಿಂದೆಯೂ ಕೇಂದ್ರ ಸರ್ಕಾರಗಳು ರಾಜ್ಯಪಾಲರನ್ನು ಬಳಸಿ, ರಾಜ್ಯ ಸರಕಾರಗಳನ್ನು ವಜಾ ಮಾಡಿದ ಎಷ್ಟೋ ಪ್ರಕರಣಗಳು ನಮಗೆ ಸಿಗುತ್ತವೆ. ನೆಹರು, ಇಂದಿರಾಗಾಂಧಿ ಹಾಗೂ ಜನತಾಪಕ್ಷ ಹೀಗೆ ಮಾಡಿವೆ ಎಂದು ಹೇಳಿದರು.

ರಾಜ್ಯದಲ್ಲಿ‌ ದೇವೇಗೌಡ, ರಾಮಕೃಷ್ಣ ಹೆಗಡೆ ಸಿಎಂ ಆಗಿದ್ದಾಗ ಇಂತಹ ಆರೋಪಗಳು ಕೇಳಿ ಬಂದಿದ್ದವು. ಆದ್ದರಿಂದ ತಾವು ಅವಸರದಲ್ಲಿ ರಾಜೀನಾಮೆ ಕೋಡಬೇಡಿ ಎಂದರು.

ರಾಜ್ಯಪಾಲರಿಗೆ ಪ್ರದತ್ತವಾದ ಪರಮಾಧಿಕಾರದ ಕುರಿತು ಚರ್ಚೆಯಾಗಿ ಅವುಗಳನ್ನು ಮೊಟಕುಗೊಳಿಸುವ ಅಥವಾ ಸಮಾಪ್ತಿಗೊಳಿಸಬೇಕಿದೆ. ಬ್ರಿಟೀಷರ ಕಾಲದಲ್ಲಿ ಅದರ ಅಗತ್ಯವಿತ್ತು. ಈಗ ಇಲ್ಲ‌ ಎಂದರು.

ಸುಲಫಲ ಮಠದ ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಸೇರಿದಂತೆ ೧೬ ಮಠಾಧೀಶರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net