

ಪುತ್ತೂರು ತಾಲೂಕಿನ ನಿಡ್ಪಳ್ಳಿ, ಇರ್ದೆ ಮತ್ತು ಶಾಂತಿಗೋಡು ಗ್ರಾಮಗಳಲ್ಲಿ ದಲಿತ ಸಮುದಾಯದ ಚಟುವಟಿಕೆಗಳಿಗಾಗಿ ಡಾ.ಬಿ.ಆರ್.ಅಂಬೇಡ್ಕರ್ ಭವನವೊಂದು ನಿರ್ಮಾಣವಾಗಬೇಕು ಎಂಬುವುದು ಅಲ್ಲಿನ ದಲಿತ ಸಮುದಾಯದ ಬಹು ವರ್ಷಗಳ ಬೇಡಿಕೆಯಾಗಿತ್ತು. ಆದರೆ ಈ ಬೇಡಿಕೆ ಈಡೇರುವ ಹಂತದಲ್ಲಿರುವಾಗಲೇ ಕಟ್ಟಡ ಕಾಮಗಾರಿ ಅರ್ಧದಲ್ಲೇ ಸ್ಥಗಿತಗೊಂಡಿರುವುದು ಸಮುದಾಯದ ಖುಷಿಯನ್ನು ಕಸಿದುಕೊಂಡಿದೆ.
ಐದು ವರ್ಷದ ಹಿಂದೆ ನಿಡ್ಪಳ್ಳಿ ಗ್ರಾಮದ ಶಾಂತದುರ್ಗಾ ದೇವಸ್ಥಾನದ ಬಳಿ ಅಂಬೇಡ್ಕರ್ ಭವನಕ್ಕೆ 18 ಸೆಂಟ್ಸ್ ಜಾಗ ಕಾಯ್ದಿರಿಸಲಾಗಿತ್ತು. ವರ್ಷದ ಹಿಂದೆ ಸರ್ಕಾರ ಮತ್ತು ಸಮಾಜ ಕಲ್ಯಾಣ ಇಲಾಖೆ ನಿಡ್ಪಳ್ಳಿಗೆ ಅಂಬೇಡ್ಕರ್ ಭವನ ನಿರ್ಮಾಣಕ್ಕೆ 20 ಲಕ್ಷ ರೂ. ಮಂಜೂರುಗೊಳಿಸಿತ್ತು. 18 ಸೆಂಟ್ಸ್ ಜಾಗದ ಪೈಕಿ 10 ಸೆಂಟ್ಸ್ ಜಾಗದಲ್ಲಿ ಕಳೆದ ಜನವರಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿ ಆರಂಭಗೊಂಡಿತ್ತು. ಆದರೆ ಆರಂಭಗೊಂಡ ಕಾಮಗಾರಿ ಗೋಡೆ ನಿರ್ಮಾಣದ ಹಂತದಲ್ಲೇ ಸ್ಥಗಿತಗೊಂಡಿದೆ.
ಸಮಾಜ ಕಲ್ಯಾಣ ಇಲಾಖೆ ಉಸ್ತುವಾರಿಯಲ್ಲಿ ಕೆಆರ್‌ಐಡಿಎಲ್ ಸಂಸ್ಥೆಯವರು ಈ ಕಾಮಗಾರಿ ನಿರ್ವಹಿಸಿದ್ದಾರೆ. ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಜಾರಿಗೆ ಮೊದಲು ಅರ್ಧದಲ್ಲಿ ಸ್ಥಗಿತಗೊಂಡಿರುವ ಕಾಮಗಾರಿಯನ್ನು ಮುಂದುವರಿಸಿಲ್ಲ ಎಂದು ದಲಿತ ಸಂಘಟನೆ ಮುಖಂಡರು ದೂರುತ್ತಿದ್ದಾರೆ.
ಅಂಬೇಡ್ಕರ್ ಭವನದ ಗೋಡೆಯ ಕೆಲಸ ಮಾತ್ರ ಆಗಿದೆ. ಮೇಲ್ಛಾವಣಿ ನಿರ್ಮಾಣ, ಕಿಟಕಿ ಬಾಗಿಲುಗಳ ಜೋಡಣೆ, ಸಿಟೌಟ್ ನಿರ್ಮಾಣ, ಗಾರೆ ಕಾಮಗಾರಿ ಬಾಕಿಯಿದ್ದು, 20 ಲಕ್ಷ ರೂ.ಮೊತ್ತದಲ್ಲಿ ಕೇವಲ 4-5 ಲಕ್ಷ ರೂ. ಮೊತ್ತದ ಕಾಮಗಾರಿ ಮಾತ್ರ ನಡೆದಿರಬಹುದು ಎಂಬುವುದು ಅಲ್ಲಿನ ಮಂದಿಯ ಅಭಿಪ್ರಾಯ.
ಎರಡು ದಶಕಗಳ ಬೇಡಿಕೆ:
ನಿಡ್ಪಳ್ಳಿ ಗ್ರಾಮದಲ್ಲಿ ದಲಿತ ಸಮುದಾಯದ ವಿವಿಧ ಚಟುವಟಿಕೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ದಲಿತ ಸಂಘಟನೆಗಳ ಮುಖಂಡರು 2011ರಲ್ಲಿ ಸಂಬಂಧಪಟ್ಟ ಇಲಾಖೆ ಮತ್ತು ಜನಪ್ರತಿನಿಧಿಗಳಿಗೆ ಅಂಬೇಡ್ಕರ್ ಭವನ ನಿರ್ಮಿಸಲು ಮನವಿ ಮಾಡಿದ್ದರು. ಶಾಂತದುರ್ಗಾ ದೇವಸ್ಥಾನದ ಬಳಿ ರಸ್ತೆ ಪಕ್ಕದಲ್ಲೇ ಇರುವ ಜಾಗವನ್ನು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಕಾದಿರಿಸುವಂತೆ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದ್ದರು. ಆ ಪ್ರಕಾರ ಜಾಗವನ್ನು ಅಂಬೇಡ್ಕರ್ ಭವನಕ್ಕೆ ಕಾದಿರಿಸಲಾಗಿತ್ತು. ಸಂಜೀವ ಮಠಂದೂರು ಶಾಸಕರಾಗಿದ್ದ ಅವಧಿಯಲ್ಲಿ ಅಂಬೇಡ್ಕರ್ ಭವನ ಮಂಜೂರುಗೊಂಡು ಅನುದಾನವೂ ಬಿಡುಗಡೆಯಾಗಿತ್ತು.
ಶಾಸಕರಿಗೆ ಮನವಿ:
ಭವನದ ಕಾಮಗಾರಿ ಅರ್ಧದಲ್ಲೇ ಬಾಕಿಯಾಗಿರುವ ಕುರಿತು ಅಲ್ಲಿನ ದಲಿತ ಮುಖಂಡ ಕೃಷ್ಣ ನಿಡ್ಪಳ್ಳಿ ಅವರು ಸುಂದರ ಗೋಳಿತ್ತಡಿ, ಚಂದ್ರ ಮೊಟ್ಟೆಕಲ್ಲು, ಕೊರಗಪ್ಪ ಮೊದಲಾದವರೊಂದಿಗೆ ಡಾ.ರಘು ಬೆಳ್ಳಿಪ್ಪಾಡಿ ನೇತೃತ್ವದಲ್ಲಿ ಶಾಸಕ ಅಶೋಕ್‌ಕುಮಾರ್ ರೈ ಅವರನ್ನು ಕೆಲದಿನಗಳ ಹಿಂದೆ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ಗ್ರಾಮಸಭೆಯಲ್ಲೂ ಪ್ರತಿಧ್ವನಿ:
ನಿಡ್ಪಳ್ಳಿ ಗ್ರಾಮ ಪಂಚಾಯಿತಿಯ ಈ ಸಾಲಿನ ಪ್ರಥಮ ಗ್ರಾಮಸಭೆಯಲ್ಲಿಯೂ ನಿಡ್ಪಳ್ಳಿ ಅಂಬೇಡ್ಕರ್ ಭವನದ ವಿಚಾರ ಪ್ರತಿಧ್ವನಿಸಿತ್ತು. ಭವನ ನಿರ್ಮಾಣ ಕಾಮಗಾರಿ ಅರ್ಧದಲ್ಲೇ ಸ್ಥಗಿತಗೊಂಡಿದ್ದು, ಕಾರಣವೇನೆಂದು ತಿಳಿದಿಲ್ಲ ಎಂದು ವಿಷಯ ಪ್ರಸ್ತಾಪಿಸಿದ್ದ ಅಲ್ಲಿನ ದಲಿತ ಮುಖಂಡರು ತಕ್ಷಣ ಉಳಿದ ಕಾಮಗಾರಿಯನ್ನು ಆರಂಭಿಸಿ ಪೂರ್ಣಗೊಳಿಸುವಂತೆ ಆಗ್ರಹಿಸಿದ್ದರು. ಅಲ್ಲದೆ ಅಂಬೇಡ್ಕರ್ ಭವನಕ್ಕಾಗಿ ಕಾಯ್ದಿರಿಸಿರುವ ಬಾಕಿ ಉಳಿದ ಸ್ಥಳದಲ್ಲಿ ಅಂಬೇಡ್ಕರ್ ಹೆಸರಿನಲ್ಲಿ ಗ್ರಂಥಾಲಯ ನಿರ್ಮಾಣ ಮಾಡುವಂತೆ ಒತ್ತಾಯಿಸಿದ್ದರು.
ನಿಡ್ಪಳ್ಳಿ ಸೇರಿದಂತೆ ತಾಲೂಕಿನ ಮೂರು ಕಡೆಗಳಲ್ಲಿ ಕೆಆರ್‌ಐಡಿಎಲ್ ವತಿಯಿಂದ ನಡೆಯುತ್ತಿರುವ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿ ಕೂಡ ಅರ್ಧದಲ್ಲೇ ಸ್ಥಗಿತಗೊಂಡಿದ್ದು, ಈ ಕುರಿತು ವಿಚಾರಿಸಲು ಕೆಆರ್‌ಐಡಿಎಲ್ ಅಧಿಕಾರಿಗಳು ಸಂಪರ್ಕಕ್ಕೇ ಸಿಗುತ್ತಿಲ್ಲ ಎಂಬ ಆರೋಪ ವ್ಯಕ್ತವಾಗುತ್ತಿದೆ. ಇರ್ದೆಯಲ್ಲಿ ಆರಂಭಗೊಂಡಿರುವ ಅಂಬೇಡ್ಕರ್ ಭವನ ತಳಪಾಯ ಹಂತದಲ್ಲೇ ಬಾಕಿಯಾಗಿದೆ. ಶಾಂತಿಗೋಡಿನ ಅಂಬೇಡ್ಕರ್ ಭವನದ ಗೋಡೆ ನಿರ್ಮಾಣವಾಗಿ ಬಾಕಿಯಾಗಿದೆ. ಅರ್ಧಂಬರ್ಧ ಕಾಮಗಾರಿ ನಿರ್ವಹಿಸಿ ಸ್ಥಗಿತಗೊಳಿಸಿ ಹೋದ ಕೆಆರ್‌ಐಡಿಎಲ್ ಸಂಸ್ಥೆಯವರ ಪತ್ತೆಯೇ ಇಲ್ಲ. ಸಂಸ್ಥೆಯವರು ನಿರ್ವಹಿಸುತ್ತಿರುವ ಎಲ್ಲ ಕಾಮಗಾರಿಗಳ ಸ್ಥಿತಿಯೂ ಇದೇ ಆಗಿದ್ದು, ಈ ರೀತಿ ಕೆಲಸ ನಿರ್ವಹಿಸುತ್ತಿರುವ ಸಂಸ್ಥೆಗೆ ಸರ್ಕಾರಿ ಅನುದಾನದ ಯೋಜನೆಗಳ ಕಾಮಗಾರಿಗಳನ್ನು ನೀಡುತ್ತಿರುವುದಾದರೂ ಯಾಕೆ? ಕಾಮಗಾರಿಯನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಲಾಗದ ಕೆಆರ್‌ಐಡಿಎಲ್‌ನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂಬುವುದು ಜನತೆಯ ಆಗ್ರಹ.
ನಿಡ್ಪಳ್ಳಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿ ಗೋಡೆ ಹಂತದಲ್ಲೇ ಬಾಕಿಯಾಗಿದೆ. ಚುನಾವಣೆ ಸಂದರ್ಭ ಕಾಮಗಾರಿ ಸ್ಥಗಿತಗೊಳಿಸಿ ಹೋದವರು ಮತ್ತೆ ಬಂದಿಲ್ಲ. ಈ ವಿಚಾರವನ್ನು ನಾವು ಶಾಸಕರ ಗಮನಕ್ಕೂ ತಂದಿದ್ದೇವೆ. ಆದಷ್ಟು ಬೇಗನೆ ಕಾಮಗಾರಿಯನ್ನು ಸುವ್ಯವಸ್ಥಿತ ರೀತಿಯಲ್ಲಿ ಪೂರ್ಣಗೊಳಿಸಬೇಕು ಎಂಬುವುದು ನಮ್ಮ ಆಗ್ರಹ.- ಕೃಷ್ಣ ನಿಡ್ಪಳ್ಳಿ, ಸ್ಥಳೀಯ ದಲಿತ ಮುಖಂಡ