

ನರೇಗಲ್ಲ: ಆರೋಗ್ಯ ದಾಸೋಹ ಶ್ರೀ ಕ್ಷೇತ್ರ ಶಾಖಾ ಶಿವಯೋಗ ಮಂದಿರ ನಿಡಗುಂದಿಕೊಪ್ಪ ಭವರೋಗ ವೈದ್ಯ ಲಿಂ. ಚನ್ನಬಸವ ಮಹಾಶಿವಯೋಗಿಗಳ 41ನೇ ವಾರ್ಷಿಕ ಪುಣ್ಯಸ್ಮರಣೋತ್ಸವ ಹಾಗೂ ಆರೋಗ್ಯ ದಾಸೋಹಿ ಲಿಂ. ಶಿವಬಸವ ಸ್ವಾಮೀಜಿ ಅವರ 9ನೇ ವಾರ್ಷಿಕ ಪುಣ್ಯಸ್ಮರಣೋತ್ಸವ ಸಮಾರಂಭ ಜ. 13ರಂದು ಜರುಗಲಿದೆ.
ಅಂದು ಬೆಳಗ್ಗೆ 6 ಕ್ಕೆ ಉಭಯ ಶ್ರೀಗಳ ಕರ್ತೃ ಗದ್ದುಗೆಗೆ ಮಹಾ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ನೆರವೇರುವುದು. ಬೆಳಗ್ಗೆ 9ಕ್ಕೆ ಷಟ್ಸ್ಥಲ ಧ್ವಜಾರೋಹಣವನ್ನು ಇಟಗಿ ಹಾಗೂ ನಿಡಗುಂದಿ ಧರ್ಮರಮಠದ ಶ್ರೀಷಣ್ಮುಖಪ್ಪಜ್ಜ ನೆರವೇರಿಸುವರು. ಬೆಳಗ್ಗೆ 10ಕ್ಕೆ ಉಭಯ ಶ್ರೀಗಳ ಭಾವಚಿತ್ರ ಮೆರವಣಿಗೆಯು ಕುಂಭ, ಕಳಸಾರತಿ ಹಾಗೂ ಸಕಲ ವಾದ್ಯ-ವೈಭವದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗುವುದು. ಬೆಳಗ್ಗೆ 11ಕ್ಕೆ ಉಭಯ ಶ್ರೀಗಳ ಸಂಸ್ಮರಣಾ ಸಭೆ ಹಾಗೂ ಮಾಜಿ ಸೈನಿಕರಿಗೆ ಸತ್ಕಾರ ಸಮಾರಂಭ ನಡೆಯಲಿದೆ.
ಮದ್ಯಾಹ್ನ 2ಕ್ಕೆ ಮಹಾಗಣಾರಾಧನೆ ಜರುಗಲಿದ್ದು, ಕಾರ್ಯಕ್ರಮದ ಸಾನ್ನಿಧ್ಯವನ್ನು ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನಮಠದ ಪೀಠಾಧಿಪತಿ ಮುಪ್ಪಿನಬಸವಲಿಂಗ ಸ್ವಾಮೀಜಿ, ಹಾವೇರಿಯ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಕಪ್ಪತಗುಡ್ಡ ನಂದಿವೇರಿಮಠದ ಶಿವಕುಮಾರ ಸ್ವಾಮೀಜಿ, ಅಕ್ಕಿಆಲೂರ ವಿರಕ್ತಮಠದ ಶಿವಬಸವ ಸ್ವಾಮೀಜಿ ವಹಿಸಲಿದ್ದಾರೆ. ನೇತೃತ್ವವನ್ನು ನಿಡಗುಂದಿಕೊಪ್ಪದ ಶಾಖಾ ಶಿವಯೋಗ ಮಂದಿರದ ಅಭಿನವ ಚನ್ನಬಸವ ಸ್ವಾಮೀಜಿ ವಹಿಸಲಿದ್ದಾರೆ. ಸಮ್ಮುಖವನ್ನು ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರು, ಜಿಗೇರಿ ಹಿರೇಮಠದ ಗುರುಸಿದ್ದ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಜಿ.ಎಸ್. ಪಾಟೀಲ, ಮಾಜಿ ಸಚಿವ ಕಳಕಪ್ಪ ಬಂಡಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಆರ್. ಬುರಡಿ ಹಾಗೂ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.