ಕಾಂಗ್ರೆಸ್ ಗೆ ಒಲಿದ ನಿಡಗುಂದಿ ಪಪಂ ಆಡಳಿತ

Congress, Nidgundi, Town Panchayat, President, Vice President, Election
ನಿಡಗುಂದಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ದೇಸಾಯಿ ಜಂಬಕ್ಕ ಲಕ್ಷ್ಮಣ ವಿಭೂತಿ, ಉಪಾಧ್ಯಕ್ಷೆ ಗೌರಮ್ಮ ನಾರಾಯಣ ಹುಗ್ಗಿ ತಮ್ಮ ಬೆಂಬಲಿಗರು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರೊಂದಿಗೆ ಗೆಲುವಿನ ಸಂಕೇತ ತೋರಿಸಿದರು.
Published on

ನಿಡಗುಂದಿ: ಸ್ಥಳೀಯ ಪಟ್ಟಣ ಪಂಚಾಯಿತಿಗೆ ಮಂಗಳವಾರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು.

ಅಧ್ಯಕ್ಷರಾಗಿ ಕಾಂಗ್ರೆಸ್‌ನ ದೇಸಾಯಿ ಜಂಬಕ್ಕ ಲಕ್ಷ್ಮಣ ವಿಭೂತಿ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಗೌರಮ್ಮ ನಾರಾಯಣ ಹುಗ್ಗಿ ಆಯ್ಕೆಯಾಗಿದ್ದು, ಕಾಂಗ್ರೆಸ್ ಸತತ ಎರಡನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಅಧ್ಯಕ್ಷ ಸ್ಥಾನ ಪರಿಶಿಷ್ಟ ಮಹಿಳೆ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ಅ ವರ್ಗಕ್ಕೆ ಮೀಸಲಾಗಿತ್ತು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಗೌರಮ್ಮ ನಾರಾಯಣ ಹುಗ್ಗಿ ಹಾಗೂ ಬಿಜೆಪಿಯ ಗಣೇಶ ಕೂಚಬಾಳ ನಾಮಪತ್ರ ಸಲ್ಲಿಸಿದ್ದರು.

ಉಪಾಧ್ಯಕ್ಷ ಸ್ಥಾನದ ಕಾಂಗ್ರೆಸ್ ಅಭ್ಯರ್ಥಿ ಗೌರಮ್ಮ ನಾರಾಯಣ ಹುಗ್ಗಿ 10 ಮತಗಳನ್ನು ಪಡೆದು ವಿಜಯಶಾಲಿಯಾದರು. ಬಿಜೆಪಿಯ ಗಣೇಶ ಕೂಚಬಾಳ ಅವರು 6 ಮತಗಳನ್ನು ಪಡೆದರು.

ತಹಸೀಲ್ದಾರ್ ಎ.ಡಿ.ಅಮರವಾದಗಿ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಒಟ್ಟು 16 ಸದಸ್ಯ ಪ.ಪಂನಲ್ಲಿ ಕಾಂಗ್ರೆಸ್ 9, ಬಿಜೆಪಿ 6 ಹಾಗೂ ಓರ್ವ ಪಕ್ಷೇತರ ಸದಸ್ಯರಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಕೈ ಪಕ್ಷದಲ್ಲಿ ನಾಲ್ವರ ಮಧ್ಯ ಪೈಪೋಟಿ ನಡೆದಿತ್ತು. ಆದರೆ, ಮಂಗಳವಾರ ಬೆಳಗ್ಗೆ ನಿಡಗುಂದಿಗೆ ಆಗಮಿಸಿದ್ದ ಸಚಿವ ಶಿವಾನಂದ ಪಾಟೀಲ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡಲಾಗಿತ್ತು.

ವಿಜಯೋತ್ಸವ: ಚುನಾವಣಾಧಿಕಾರಿ ಆಯ್ಕೆ ಘೋಷಣೆ ಮಾಡುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಪರಸ್ಪರ ಗುಲಾಲು ಎರಚಿ ವಿಜಯೋತ್ಸವ ಆಚರಿಸಿದರು. ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಹೂಮಾಲೆ ಹಾಕಿ ಆಡಳಿತಾಧಿಕಾರಿ ಹಾಗೂ ಪ.ಪಂ ಸಿಬ್ಬಂದಿ ಸನ್ಮಾನಿಸಿದರು. ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಕಾಂಗ್ರೆಸ್ ಅಭಿಮಾನಿಗಳು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net