

ಮುತ್ತು ಕುಪ್ಪಸ್ತ ನಿಡಗುಂದಿ
ಸರ್ಕಾರಿ ಆಸ್ಪತ್ರೆಗಳ ಕಾರ್ಯವೈಖರಿ ಉತ್ತೇಜನಕ್ಕಾಗಿ ಕೇಂದ್ರ ಸರ್ಕಾರ ನೀಡುವ ಕಾಯಕಲ್ಪ ಪ್ರಶಸ್ತಿಗೆ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ಭಾಜನವಾಗಿದೆ. ಕಳೆದ ಬಾರಿ ಸಮಾಧಾನಕರ ಪ್ರಶಸ್ತಿ ಪಡೆದುಕೊಂಡ ಆಸ್ಪತ್ರೆ ಈ ಬಾರಿ ಒಂದು ಹೆಜ್ಜೆ ಮುಂದೆ ಸಾಗಿ ಕಾಯಕಲ್ಪ ಪ್ರಶಸ್ತಿ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ.
ಸರ್ಕಾರಿ ಆಸ್ಪತ್ರೆಗಳೆಂದರೆ ಜನರು ಮೂಗು ಮುರಿಯುತ್ತಾರೆ. ಆದರೆ, ಈಗ ಕಾಲ ಬದಲಾಗಿದೆ. ಸರ್ಕಾರಿ ವೈದ್ಯರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕ ಆಸ್ಪತ್ರೆಯಲ್ಲೂ ಜನಜಂಗುಳಿ ಕಾಣಿಸುತ್ತಿದೆ. ಕರೊನಾ ಹಿನ್ನೆಲೆ ವಿಧಿಸಿದ ಲಾಕ್‌ಡೌನ್ ಸಮಯದಲ್ಲಿ ಖಾಸಗಿ ಆಸ್ಪತ್ರೆಗಳು ರೋಗಿಗಳ ಜೀವ ಉಳಿಸಲು ಹಿಂದೇಟು ಹಾಕುತ್ತಿದ್ದಾಗ ತಮ್ಮ ಜೀವದ ಹಂಗು ತೊರೆದು ರೋಗಿಗಳಿಗೆ ಸೇವೆ ನೀಡುತ್ತಿರುವ ಸರ್ಕಾರಿ ವೈದ್ಯ ಸಿಬ್ಬಂದಿಯನ್ನು ಯಾರೂ ಮರೆಯಲು ಸಾಧ್ಯವಿಲ್ಲ.
ಸಕಲ ಸೌಲಭ್ಯ ಕಲ್ಪಿಸುವ ಜತೆಗೆ ರೋಗಿಗಳಿಗೆ ಉತ್ತಮ ವಾತಾವರಣ ನಿರ್ಮಿಸಿಕೊಡುವ ಆಸ್ಪತ್ರೆಗಳಿಗೆ ಕೇಂದ್ರ ಸರ್ಕಾರ ನೀಡುವ ಕಾಯಕಲ್ಪ ಪ್ರಶಸ್ತಿಗೆ ನಿಡಗುಂದಿ ಸಮುದಾಯ ಅರೋಗ್ಯ ಕೇಂದ್ರ ಆಯ್ಕೆಯಾಗಿರುವುದು ನೂತನ ನಿಡಗುಂದಿ ತಾಲೂಕಿಗೆ ಮತ್ತೊಂದು ಕಿರೀಟ ದೊರಕಿದಂತಾಗಿದೆ.
ಕರೊನಾ ಸಂಕಷ್ಟದ ಪರಿಸ್ಥಿತಿಯಲ್ಲೂ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಉತ್ತಮ ವಾತಾವರಣ, ಸ್ವಚ್ಛತೆ, ರೋಗಿಗಳ ತಪಾಸಣೆ ಸೇರಿ ಹಲವಾರು ಉತ್ತಮ ಕಾರ್ಯಗಳನ್ನು ನೀಡುತ್ತಿರುವ ಆರೋಗ್ಯ ಕೇಂದ್ರದ ಕಾರ್ಯಕ್ಕೆ ಸರ್ಕಾರ ಮೆಚ್ಚುಗೆ ವ್ಯಕ್ತಪಡಿಸಿದೆ. ಸರ್ಕಾರದ ಮೌಲ್ಯಮಾಪನದ ಆಧಾರದಲ್ಲಿ ಶೇ. 93ರಷ್ಟು ಯಶ ಸಾಧಿಸಿದ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರ ಕಾಯಕಲ್ಪ ಪ್ರಶಸ್ತಿಗೆ ಭಾಜನವಾಗಿ ಪ್ರಶಸ್ತಿ ಪತ್ರದ ಜತೆಗೆ 1ಲಕ್ಷ ರೂ. ನಗದು ಪಡೆದುಕೊಳ್ಳಲಿದೆ.
ಆಗ್ರಹ: 30 ಹಾಸಿಗೆಯ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸದ್ಯ ಮುಖ್ಯ ಆರೋಗ್ಯಾಧಿಕಾರಿ, ಮಹಿಳಾ ಆರೋಗ್ಯಾಧಿಕಾರಿ ಮಾತ್ರ ಕಾಯಂ ಇದ್ದು, ಉಳಿದಂತೆ ದಂತ ವೈದ್ಯರು ವಾರದಲ್ಲಿ ಎರಡು ದಿನ ಮಾತ್ರ ಲಭ್ಯವಾಗುತ್ತಾರೆ. ಪಟ್ಟಣದ ಮಧ್ಯದಲ್ಲೇ ರಾಷ್ಟ್ರೀಯ ಹೆದ್ದಾರೆ ಇದೆ. ಸಹಜವಾಗಿ ಆಗಾಗ ಅಪಘಾತಗಳು ಸಂಭವಿಸುತ್ತವೆ. ಅಲ್ಲದೆ, ಸುತ್ತಲಿನ ಹಲವಾರು ಗ್ರಾಮಗಳ ರೋಗಿಗಳು ಇದೇ ಆಸ್ಪತ್ರೆಯನ್ನು ಅವಲಂಬಿಸಿದ್ದು, ತ್ವರಿತವಾದ ಸೌಲಭ್ಯಗಳು ದೊರಕುವಂತಾಗಬೇಕಿದೆ. ಆಸ್ಪತ್ರೆ ಆವರಣದಲ್ಲಿ ಸಿಸಿ ರಸ್ತೆ ಇಲ್ಲದ ಪರಿಣಾಮ ಮಳೆ ಬಂದ ಸಮಯದಲ್ಲಿ ಆವರಣ ಕೆಸರುಮಯವಾಗುತ್ತದೆ. ಒಳಚರಂಡಿ, ಸುಸಜ್ಜಿತ ಗಾರ್ಡನ್, ಕುಡಿಯುವ ನೀರಿನ ವ್ಯವಸ್ಥೆ, ಸುಸಜ್ಜಿತ ಪ್ರಯೋಗಾಲಯ, ಡಿಜಿಟಲ್ ಎಕ್ಸರೇ ಸೇರಿ ಮುಂತಾದ ಸೌಲಭ್ಯಗಳ ಬೇಡಿಕೆ ಇದ್ದು, ಕೂಡಲೇ ಜನಪ್ರತಿನಿಧಿಗಳು ಸಾಕಾರಗೊಳಿಸಬೇಕು ಎನ್ನುವುದು ಜನರ ಆಗ್ರಹವಾಗಿದೆ.
ಸಮುದಾಯ ಆರೋಗ್ಯ ಕೇಂದ್ರ ಕಾಯಕಲ್ಪ ಪ್ರಶಸ್ತಿಗೆ ಭಾಜನವಾಗಿದ್ದು, ಹೆಮ್ಮೆ ತರಿಸುವ ಜತೆಗೆ ಕಾರ್ಯದ ಜವಾಬ್ದಾರಿಯನ್ನು ಹೆಚ್ಚಿಸಿದೆ. ಆಸ್ಪತ್ರೆಗೆ ಬೇಕಾದ ಸೌಲಭ್ಯಗಳನ್ನು ಶೀಘ್ರ ಒದಗಿಸಿದರೆ ಜನರಿಗೆ ಇನ್ನೂ ಉತ್ತಮ ಸೇವೆ ನೀಡಲು ಸಹಕಾರಿಯಾಗುತ್ತದೆ.
ಡಾ. ಪ್ರಕಾಶ ಗೋಟ್ಕಂಡ್ಕಿ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ
ಸಮುದಾಯ ಆರೋಗ್ಯ ಕೇಂದ್ರ ಕಾಯಕಲ್ಪ ಪ್ರಶಸ್ತಿಗೆ ಭಾಜನವಾಗಿದ್ದು ಹೆಮ್ಮೆಯ ವಿಷಯವಾಗಿದೆ. ಸೌಲಭ್ಯಗಳ ಕೊರತೆ ಮಧ್ಯೆ ಉತ್ತಮ ಕಾರ್ಯನಿರ್ವಹಣೆ ಮೂಲಕ ಆಸ್ಪತ್ರೆಗೆ ಪ್ರಶಸ್ತಿ ಲಭಿಸುವಲ್ಲಿ ಕಾರಣರಾದ ಸಮಸ್ತ ವೈದ್ಯ ಸಿಬ್ಬಂದಿಗೆ ಧನ್ಯವಾದಗಳನ್ನು ಹೇಳುತ್ತೇನೆ. ಆರೋಗ್ಯ ಕೇಂದ್ರಕ್ಕೆ ಬೇಕಾದ ಸೌಲಭ್ಯಗಳನ್ನು ಒದಗಿಸುವಲ್ಲಿ ಸರ್ಕಾರ ಮುಂದಾಗಲಿ.
ಶಿವಾನಂದ ಅವಟಿ, ಜಿಪಂ ಮಾಜಿ ಸದಸ್ಯ ನಿಡಗುಂದಿ