ತುಂತುರು ಮಳೆಯಲ್ಲೂ ಇಂಪಾದ ಸಂಗೀತ

74
Published on

ಮೈಸೂರು: ತುಂತುರು ಸೋನೆ ಮಳೆಯ ನಡುವೆ ಇಂಪಾದ ಸಂಗೀತದಲ್ಲಿ ತೇಲಿಸಿದ ಸಂಗೀತ ಮಾಂತ್ರಿಕ ಇಳಯರಾಜಾ, ಕೇಳುಗರನ್ನು ಮಂತ್ರಮುಗ್ಧಗೊಳಿಸಿದರು.
ಉತ್ತನಹಳ್ಳಿಯ ತಪ್ಪಲಿನಲ್ಲಿ ಆಯೋಜಿಸಿರುವ ಯುವ ದಸರಾದ ಅಂತಿಮ ದಿನವಾದ ಗುರುವಾರ ಸಂಗೀತ ಸಾಗರದಲ್ಲಿ ತೇಲುವಂತೆ ಮಾಡಿದರು.
ಯುವ ದಸರಾದಲ್ಲಿ ಅಬ್ಬರದ ಸಂಗೀತ, ಜೋಶ್ ಹಾಡುಗಳಿಗೆ ಕೇಕೆ, ಸಿಳ್ಳೆ, ಚಪ್ಪಾಳೆ ಹಾಕಿ ಕುಣಿಸಿದ್ದ ಪ್ರೇಕ್ಷಕರು, ಇಳಯರಾಜಾ ಸಂಗೀತ ಮೋಡಿಗೆ ತಲೆದೂಗಿ, ಹಾಡುಗಳನ್ನು ಗುನುಗುವಂತೆ ಮಾಡಿದರು.
ಚಾಮುಂಡೇಶ್ವರಿಗೆ ನಮಿಸುವ ಜನನಿ ಜಗನಿ ಎಂಬ ತಮಿಳು ಗೀತೆಯ ಮೂಲಕ ಗಾಯನವನ್ನು ಆರಂಭಿಸಿ, ‘ಓಂ ಶಿವೋಂ ಓಂ ಶಿವೋಂ’ … ಗೀತೆಯ ಮೂಲಕ ಶಿವನ ಆರಾಧಿಸಿದರು.
ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯ ಅವರ ಪುತ್ರ ಎಸ್.ಪಿ ಚರಣ್ ಅವರ ಸುಮಧುರ ಧ್ವನಿಯಲ್ಲಿ ಅನಂತ್‌ನಾಗ್ ಅವರ ಮಾತು ತಪ್ಪದ ಮಗ ಚಿತ್ರದ ‘ಎಂತಹ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು, ಕನ್ನಡ ನಾಡಿದು ಚಿನ್ನದ ಬೀಡಿದು’… ಎಂದು ಹಾಡುತ್ತಾ ಕನ್ನಡದ ಕಂಪನ್ನು ತುಂಬಿಸಿದರು.
ಶಂಕರ್‌ನಾಗ್ ಅವರ ಗೀತಾ ಚಿತ್ರದ ‘ಸಂತೋಷಕ್ಕೆ ಹಾಡು ಸಂತೋಷಕ್ಕೆ…. ಹಾಡು ಕೇಳುಗರ ಮನದಲ್ಲಿ ಸಂತೋಷವನ್ನು ತುಂಬಿ ಕುಣಿಸಿತು.
‘ಕೇಳದೆಯೇ ನಿಮಗೀಗ ದೂರದಲ್ಲಿ ಯಾರೋ’ …ಗೀತೆಯ ರಾಗ ಸಂಯೋಜನೆ ವೇಳೆ ನಡೆದ ಘಟನೆಗಳನ್ನು ಮೆಲುಕು ಹಾಕಿದರು. ಅದೇ ಗೀತೆಯನ್ನು ಎಸ್.ಪಿ ಚರಣ್ ಹಾಡುವ ಮೂಲಕ ಮಧುರ ಇಂಪನ್ನು ನೀಡಿದರು. ಅಲ್ಲದೆ ‘ಜೊತೆಯಲ್ಲಿ ಜೊತೆ ಜೊತೆಯಲ್ಲಿ ಇರುವೆನು ಹೀಗೆ’… ಗೀತೆ ಯುವ ಮನಸ್ಸಿನಲ್ಲಿ ಪುಳಕ ಮೂಡಿಸಿತು.
ಇಳಯರಾಜಾ ಅವರು ಮೊದಲು ಕನ್ನಡದಲ್ಲಿ ರಚಿಸಿದ ‘ಆನಂದ ಕಂಡೆ ನಾನಿಂದು ಮತ್ತಿಗೆ ಸಿಕೋದೆಲ್ಲ ಹೇಳಲು ಬರದಲ್ಲ ನಾನೆಂದೂ’ ಗೀತೆ ದೇವಿಯ ದರ್ಶನ ಮಾಡಿಸಿದಂತೆ ಮೂಡಿಬಂತು.
ಹಿನ್ನೆಲೆ ಗಾಯಕರಾದ ಶರತ್, ವಿಭಾರವಿ ಅವರು ಅನಂತನಾಗ್ ಅವರ ಆಕಾಶದಿಂದ ಜಾರಿ ಭೂಮಿ ಬಂದ ನೋಡಿ ನಮ್ಮಗಾಗಿ ಆ ದೇವನೇ ಗೀತೆಯನ್ನು ಪ್ರಸ್ತುತ ಪಡಿಸಿದರು. ಗಾಯಕಿ ವಿಭಾರವಿ ಅವರು ನಮ್ಮೂರ ಮಂದಾರ ಹೂವೆ ಚಿತ್ರದ ‘ಓಂಕಾರವೇ ಕಂಡೇ ಪ್ರೇಮನಾದವ’ ಗೀತೆಯನ್ನು ಹಾಡಿ ಮನ ಸೆಳೆದರು. ಜೊತೆಯಲ್ಲಿ ಇಳಿಯರಾಜಾ ಅವರು ಧ್ವನಿಗೂಡಿಸಿ ಕೇಳುವವರ ಕರ್ಣಗಳಿಗೆ ತಂಪೆರೆದರು.
ಹಿನ್ನೆಲೆ ಗಾಯಕಿ ಶ್ವೇತಾ ಮೋಹನ್ ಅವರ ಇಂಪಾದ ಧ್ವನಿಯಲ್ಲಿ, ಶಿವರಾಜ್ ಕುಮಾರ್ ಅವರ ನಮ್ಮೂರ ಮಂದಾರ ಹೂವೇ ಚಿತ್ರದ ಹೇಳೇ ಕೋಗಿಲೆ, ಅಂಬರೀಷ್ ಅವರ ಭರ್ಜರಿ ಬೇಟೆ ಚಿತ್ರದ ಯಾರಿಗಾಗಿ ಆಟ ಯಾರಿಗಾಗಿ ನೋಟ ಗೀತೆಯನ್ನು ಪ್ರಸ್ತುತ ಪಡಿಸಿ ಕನ್ನಡಿಗರ ಪ್ರೀತಿ ಬರಿಸುವಲ್ಲಿ ಯಶಸ್ವಿಯಾದರು.
ಗಾಯಕ ಹರಿ ಚರಣ್ ಜೊತೆಗೂಡಿ ರಾಜ್‌ಕುಮಾರ್ ಅವರ ನೀ ನನ್ನ ಗೆಲ್ಲಲಾರೆ ಚಿತ್ರದ ಜೀವ ಹೂವಾಗಿದೆ ಭಾವ ಜೇನಾಗಿದೆ ಗೀತೆಯನ್ನು ಹಾಡಿ ಕನ್ನಡದ ಕಂಪನ್ನು ಹೆಚ್ಚಿಸಿದರು. ಪಲ್ಲವಿ ಅನುಪಲ್ಲವಿ ಚಿತ್ರದ ನಗುವ ನಯನ ಮಧುರ ಮೌನ ಮಿಡಿವ ಹೃದಯ ಇದೇ ಮಾತೇಕೆ ಗೀತೆಯು ಕೇಳುಗರಿಗೆ ಇಂಪೇರಿಸಿತು.
ಪಲ್ಲವಿ ಅನುಪಲ್ಲವಿ ಚಿತ್ರದ ಹೃದಯ ರಂಗೋಲಿ ಅಳಿಸುತ್ತಿದೆ ಇಂದು ಗೀತೆಯೂ ಕೇಳುಗಾರ ಕಿವಿಯಲ್ಲಿ ರಂಗೋಲಿ ಹಾಕಿದಂತೆ ಮೂಡಿಬಂದಿತು. ಜನ್ಮ ಜನ್ಮದ ಅನುಬಂಧ ಚಿತ್ರದ ಯಾವ ಶಿಲ್ಪಿ ಕಂಡ ಕನಸು ನೀನು, ಆ ದಿನಗಳು ಚಿತ್ರದ ಆ ದಿನಗಳು ಪ್ರತಿ ಕ್ಷಣ ಹೃದಯದೊಳಗೆ ಗೀತೆ, ಭರ್ಜರಿ ಬೇಟೆ ಚಿತ್ರದ ಸ್ವೀಟಿ ನನ್ನ ಜೋಡಿ ಘಾಟಿ ನನ್ನ ಜೋಡಿ ಈಗ ಲೈಫ್ ಲವ್ಲಿ ಲವ್ಲಿ ಗೀತೆ, ರಜಿನಿ ಕಾಂತ್ ಅವರ ಪ್ರಿಯಾ ಚಿತ್ರದ ಹೇ ಕವಿತೆ ನೀನು, ಪಲ್ಲವಿ ಅನುಪಲ್ಲವಿ ಚಿತ್ರದ ನಗು ಎಂದಿದೆ ಮಂಜಿನ ಬಿಂದು.. ಹೀಗೆ ಇನ್ನೂ ವಿವಿಧ ಗೀತೆಗಳಿಂದ ಮನ ಸೆಳೆದರು.
ಗಾಯಕ ಮುದ್ದು ಬಾಲಕೃಷ್ಣ ಅವರ ಕಂಠಸಿರಿಯಲ್ಲಿ ಸದ್ಮಾ ಚಿತ್ರದ ಹೇ ಜಿಂದಗೀ ಗಲೇ ಲಾಗ ಲೆ ಗೀತೆ, ಮಾತು ತಪ್ಪದ ಮಗ ಚಿತ್ರದ ಭಾನು ಭೂಮಿಯ ಮಿಲನವ ಬಯಸಿ ಬಾಗಿದೆ ಗೀತೆಯ ಮೂಲಕ ಮುದ ನೀಡಿದರು.
ಮೈಸೂರಿನವರೇ ಆದ ಗಾಯಕಿ ಅನನ್ಯ ಭಟ್ ಅವರ ಧ್ವನಿಯಲ್ಲಿ ಅನಂತ್‌ನಾಗ್ ಅವರ ಜನ್ಮಜನ್ಮ ಅನುಬಂಧ ಚಿತ್ರದ ತಂಗಾಳಿಯಲ್ಲಿ ನಾನು ತೇಲಿ ಬಂದೆ ಗೀತೆಯೂ ನೆರೆದಿದ್ದ ಪ್ರೇಕ್ಷಕರ ಮನಸನ್ನು ಒಂದು ಕ್ಷಣ ಜಲ್ ಎನಿಸುವಂತೆ ಮಾಡಿತು.
ಇಳಯರಾಜಾ ಅವರು ಧ್ವನಿಗೂಡಿಸಿ ಮತ್ತೆ ಮಂತ್ರವು ಮನಸೇ ಮಂದಿರವು ಗೀತೆಯನ್ನು ತಮಿಳು ಮತ್ತು ಕನ್ನಡದಲ್ಲಿ ಹಾಡಿದರೆ, ಪ್ರೇಕ್ಷಕರ ಒತ್ತಾಯದ ಮೇರೆಗೆ ಆ ದಿನಗಳು ಚಿತ್ರದ ‘ಸಿಹಿ ಗಾಳಿ ಸಿಹಿ ಗಾಳಿ ಸಹಿ ಹಾಕಿದೆ ಮನಸಿನಲಿ’ ಹಾಡು ಸಂಗೀತದಲ್ಲಿ ತೇಲುವಂತೆ ಮಾಡಿತು.
ಚಾಮರಾಜನಗರ ಸೀಮೆಯ ಅನ್ನ ಚಿತ್ರ ತಂಡವು ಚಿತ್ರದ ಗೀತೆಗಳನ್ನು ಹಾಡಿ ತಮ್ಮ ಚಿತ್ರವನ್ನು ಚಿತ್ರಮಂದಿರಕ್ಕೆ ಬಂದು ನೋಡುವಂತೆ ಮನವಿ ಮಾಡಿದರು.
ಇಳಿಯರಾಜಾ ಅವರ ಕಾರ್ಯಕ್ರಮಕ್ಕೂ ಮುನ್ನ ಕನ್ನಡ ಚಿತ್ರ ನಿಖಿತಾ ಸ್ವಾಮಿ ಮತ್ತು ಅಕ್ಬರ್ ಮ್ಯೂಸಿಕಲ್ ತಂಡದಿಂದ ನೃತ್ಯ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಜನಪದ ಕಲಾ ತಂಡದಿಂದ ತಿಂಗಳು ಮುಳುಗಿದವೋ ರಂಗೋಲಿ ಬೆಳಗಿದವು ಎಂದು ಸಂಗೀತ ಮಾಂತ್ರಿಕ ಇಳಯರಾಜಾ ಅವರ ಹೆಸರು ಜತೆಗೂಡಿಸಿ ಹಾಡಿದರು.

ಡಾ.ರಾಜ್‌ಕುಮಾರ್ ಹಾಡಿಸಿದ್ದು ನಾನು
ಕನ್ನಡ ವರನಟ ಡಾ.ರಾಜ್‌ಕುಮಾರ್ ಅವರ ಸಂಪತ್ತಿಗೆ ಸವಾಲ್‌ನಲ್ಲಿ ‘ಯಾರೇ ಕೂಗಾಡಲಿ’ ಹಾಡು ಹಾಡುವಂತೆ ಮಾಡಿದ್ದು ನಾನು ಎಂದು ಇಳಯರಾಜಾ ಹೇಳಿದಾಗ ಸಭಿಕರಿಂದ ಕರತಾಡನ ಕೇಳಿ ಬಂತು.
ಹಾಡಿನ ಸಂಗೀತ ಸಂಯೋಜನೆ ಮಾಡಿದ್ದು, ಪಿ.ಬಿ.ಶ್ರೀನಿವಾಸ್ ಬದಲು ರಿದಂಗೆ ಹೊಂದುವಂತಹ ಹೊಸ ಕಂಠಬೇಕು ಎನಿಸಿದೆ ಎಂದು ಜಿ.ಕೆ.ವೆಂಕಟೇಶ್ ಅವರ ಬಳಿ ಹೇಳಿದೆ. ಬಳಿಕ ರಾಜ್‌ಕುಮಾರ್ ಬಳಿ ತೆರಳಿ ನೀವೇ ಹಾಡಿ ಎಂದು ಟ್ಯೂನ್ ಕೇಳಿಸಿದಾಗ ಒಪ್ಪಿ ಹಾಡಿದರು ಎಂದು ಹಿಂದಿನದನ್ನು ನೆನಪು ಮಾಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net